ಮರ್ಲಾನಹಳ್ಳಿ (ಕಾರಟಗಿ): ಕಾಂಗ್ರೆಸ್ ದೇಶದಲ್ಲಿ 6 ದಶಕಗಳವರೆಗೆ ದುರಾಡಳಿತ ನಡೆಸಿ, ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವಾಗಿ ಮುಂದುವರೆಸಿತ್ತು. ಮೋದಿ ಅವರ ನೇತೃತ್ವದ ಬಿಜೆಪಿ ಸರ್ಕಾರ ಬಂದ ಮೇಲೆ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ರೂಪುಗೊಂಡಿದೆ. ಬಿಜೆಪಿಯಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಸಂಸದ ಕರಡಿ ಸಂಗಣ್ಣ ಹೇಳಿದರು.
ತಾಲ್ಲೂಕಿನ ಮರ್ಲಾನಹಳ್ಳಿಯಲ್ಲಿ ಶುಕ್ರವಾರ ನಡೆದ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿ, ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ತಮ್ಮ ಅಧಿಕಾರಾವಧಿಯಲ್ಲಿ ಜನರ ಆಶೋತ್ತರಗಳಿಗೆ ಸ್ಪಂದಿಸಿ, ಅನೇಕ ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದೇನೆ. ಆದರೆ ಕಾಂಗ್ರೆಸ್ ಮೊಸರಲಿನಲ್ಲಿಯ ಕಲ್ಲು ಹುಡುಕುವ ಕೆಲಸ ಮಾಡುತ್ತಿದೆ. ಕ್ಷೇತ್ರದ ಜನರು ವಿಕಾಸದ ಹಾದಿಯನ್ನು ಬಯಸುತ್ತಿದ್ದಾರೆ. ವಿಕಾಸ ಹಾಗೂ ಅಭಿವೃದ್ದಿ ಬಯಸುವವರು ಬಿಜೆಪಿ ಬೆಂಬಲಿಸುವರು. ಅಭಿವೃದ್ದಿಗೆ ಮತ್ತೊಮ್ಮೆ ಬಿಜೆಪಿಗೆ ಆಶೀರ್ವದಿಸುವರು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸಿ, ದೇಶದ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಜನಧನ್, ಉಜ್ವಲ, ಸ್ವಚ್ಚ ಭಾರತ್, ಕಿಸಾನ್ ಸನ್ಮಾನ್ ಸಹಿತ ಅನೇಕ ಯೋಜನೆಗಳ ಮೂಲಕ ಜನರನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಿದ್ದಾರೆ. ಎಲ್ಲಾ ಯೋಜನೆಗಳನ್ನು ಕೊಪ್ಪಳ ಲೋಕಸಭಾ ಕ್ಷೇತ್ರದ ಜನರು ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಗ್ರಾಪಂ ಅಧ್ಯಕ್ಷೆ ಲತಾ, ಬಿಜೆಪಿ ಮಂಡಲ ಅಧ್ಯಕ್ಷ ಚಂದ್ರಶೇಖರ ಮಸಾಲಿ ಮುಖಂಡರಾದ ಶರಣಪ್ಪ ಬಾವಿ, ಮೌನೇಶ್ ದಡೇಸೂಗೂರ, ಮಾಜಿ ತಾಪಂ ಸದಸ್ಯ ತಿಪ್ಪಣ್ಣ ಹಾಗೂ ಪಕ್ಷದ ಮುಖಂಡರು, ಗ್ರಾ.ಪಂ. ಸದಸ್ಯರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
ಬಿಜೆಪಿಗೆ 400ಕ್ಕೂ ಅಧಿಕ ಸ್ಥಾನ ಖಚಿತ:
ಕರಡಿ ದೇಶದ ಜನರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರದ ಆಡಳಿತ ಇಷ್ಟವಾಗಿದೆ. ಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 400ಕ್ಕೂ ಅಧಿಕ ಸ್ಥಾನಗಳಿಸಿ ಮತ್ತೊಮ್ಮೆ ಅಧಿಕಾರಕ್ಕೆ ಬರುವುದು ಶತಸಿದ್ದ. ಇನ್ನು ರಾಜ್ಯದಲ್ಲಿ ಬಿಎಸ್‌ವೈ ಬಿವಿವೈ ಜೋಷಿ ಬೊಮ್ಮಾಯಿ ಸದಾನಂದಗೌಡ ಸೇರಿ ಹಿರಿಯ ನಾಯಕರ ಮಾರ್ಗದರ್ಶನ ಸಂಘಟನೆಯಿಂದ ಹಾಗೂ ಜನರ ಆಶೀರ್ವಾದದಿಂದ 28 ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಸಂಸದ ಸಂಗಣ್ಣ ಕರಡಿ ವಿಶ್ವಾಸ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.