ADVERTISEMENT

ಹನುಮಸಾಗರ: ಪಾಳುಬಿದ್ದ ಸಮುದಾಯ ಆರೋಗ್ಯ ಕೇಂದ್ರ

ಉದ್ಘಾಟನೆಯಾಗಿ ಒಂದೂವರೆ ವರ್ಷ ಕಳೆದರೂ ಸಿಬ್ಬಂದಿಯ ಕೊರತೆ

ದಾದಾಪೀರ್
Published 19 ಮಾರ್ಚ್ 2024, 5:11 IST
Last Updated 19 ಮಾರ್ಚ್ 2024, 5:11 IST
ಆಸ್ಪತ್ರೆಯ ತಲೆ ದಿಂಬು ಹಾಗೂ ಬೆಡ್‌ಗಳು
ಆಸ್ಪತ್ರೆಯ ತಲೆ ದಿಂಬು ಹಾಗೂ ಬೆಡ್‌ಗಳು   

ಹನುಮಸಾಗರ: ಗ್ರಾಮದ 30 ಹಾಸಿಗೆಗಳ ಸಮುದಾಯ ಆರೋಗ್ಯ ಕೇಂದ್ರದ ಕಟ್ಟಡ ಉದ್ಘಾಟನೆಯಾಗಿ ಒಂದೂವರೆ ವರ್ಷ ಕಳೆದರೂ ಕಾರ್ಯಾರಂಭವಾಗದೆ ಪಾಳುಬಿದ್ದಿದೆ.

ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ನಿರ್ಮಿಸಿದ ಈ ಸಮುದಾಯ ಆರೋಗ್ಯ ಕೇಂದ್ರವನ್ನು 2022ರ ಆಗಸ್ಟ್ 1ರಂದು ಉದ್ಘಾಟನೆ ಮಾಡಲಾಗಿದೆ. ಹನುಮಸಾಗರ ಗ್ರಾಮದ ಸುತ್ತಮುತ್ತಲಿನ ಕನಿಷ್ಠ 10 ಹಳ್ಳಿಗಳಿಗೆ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಜನರಿಗೆ ಅನುಕೂಲವಾಗಬೇಕಾಗಿದ್ದ ಈ ಕಟ್ಟಡ ನಿರ್ಲಕ್ಷ್ಯಕ್ಕೆ ಒಳಗಾಗಿದೆ.

ಮೂಲಸೌಲಭ್ಯ ಸೇರಿದಂತೆ ಸಮುದಾಯ ಆರೋಗ್ಯ ಅಧಿಕಾರಿ, ಆರೋಗ್ಯ ಸಿಬ್ಬಂದಿ ನೇಮಿಸಿಲ್ಲ ಎಂದು ಕನ್ನಡ ಸಂಘಟನೆಗಳು ಹಾಗೂ ರೈತ ಸಂಘಟನೆಗಗಳ ಆರೋಪವಾಗಿದೆ. ಇಡೀ ಆರೋಗ್ಯ ಕೇಂದ್ರ ದೂಳಿನಿಂದ ಕೂಡಿದ್ದು ಬೆಡ್‌ಗಳು, ಪೀಠೋಪಕರಣಗಳು ಎಲ್ಲೆಂದರಲ್ಲಿ ಚೆಲ್ಲಾಪಿಲ್ಲಿಯಾಗಿ ಆಸ್ಪತ್ರೆ ತುಂಬಾ ಬಿದ್ದಿವೆ.

ADVERTISEMENT

‘ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಸಮುದಾಯ ಆರೋಗ್ಯ ಕೇಂದ್ರದ ಕಾರ್ಯಾರಂಭಕ್ಕೆ ಗಮನಹರಿಸಿ ಶೀಘ್ರದಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸುವ ಜೊತೆಗೆ ಸಮುದಾಯ ಆರೋಗ್ಯ ಅಧಿಕಾರಿ ಹಾಗೂ ಇನ್ನಿತರ ಸಿಬ್ಬಂದಿಯನ್ನು ಒದಗಿಸಿಕೊಡಬೇಕು’ ಎಂದು ಪ್ರಮುಖರಾದ ರಾಹುಲ್ ದೇವಸಿಂಗ್, ಶ್ರೀಕಾಂತ ಕಂದಗಲ್, ಮುತ್ತಣ್ಣ ಕಟಗಿ, ಗುರುಸಂಗಪ್ಪ ಮೋಟಗಿ, ಉಮೇಶ ಬಚಲಾಪುರ, ಮಂಜುನಾಥ ಶಿರೋಳ ಮನವಿ ಮಾಡಿದ್ದಾರೆ.

‘ಸಮುದಾಯ ಆರೋಗ್ಯ ಕೇಂದ್ರ ಕಳೆದ ಒಂದೂವರೆ ವರ್ಷಗಳಿಂದ ಉಪಯೋಗವಿಲ್ಲದೆ ಪಾಳುಬಿದ್ದಿದೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಆಸ್ಪತ್ರೆಯ ಸಿಬ್ಬಂದಿ ಮತ್ತು ವೈದ್ಯಾಧಿಕಾರಿಗಳನ್ನು ನೀಡಿ ಆರಂಭಿಸಬೇಕು. ಇಲ್ಲವಾದರೆ ಹೋರಾಟ ಮಾಡಬೇಕಾಗುತ್ತದೆ’ ಎಂದು ರೈತ ಮುಖಂಡ ಯಮನೂರಪ್ಪ ಮಡಿವಾಳರ ಎಚ್ಚರಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ತಾಲ್ಲೂಕು ವೈದ್ಯಾಧಿಕಾರಿ ಆನಂದ ಗೋಟುರ, ‘ಸಮುದಾಯ ಆರೋಗ್ಯ ಕೇಂದ್ರಕ್ಕೆ ಸರ್ಕಾರದಿಂದ ಹುದ್ದೆಗಳು ಮಂಜೂರಾಗಬೇಕು. ಅದಕ್ಕೆ ಆರ್ಥಿಕ ಇಲಾಖೆಯಿಂದ ಅನುಮೋದನೆ ಬೇಕು. ಆದಷ್ಟು ಬೇಗ ಸಿಬ್ಬಂದಿ ನೇಮಕಕ್ಕೆ ಕ್ರಮ ಕೈಗೊಳ್ಳಲು ನಾವು ಕೂಡ ಮೇಲಧಿಕಾರಿಗಳಿಗೆ ಪತ್ರ ಬರೆದಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ’ ಎಂದರು.

‘ಹನುಮಸಾಗರದ ಆಸ್ಪತ್ರೆಯಲ್ಲಿ ಕಳೆದ ಮೂರು ವರ್ಷಗಳಿಂದ ಎಂಬಿಬಿಎಸ್ ಮುಗಿಸಿರುವ ವೈದ್ಯರು ಕೆಲಸ ಮಾಡಲು ಆಸಕ್ತಿ ತೋರುತ್ತಿಲ್ಲ. ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಬಹುದಾಗಿದ್ದು, ಯಾರಾದರೂ ಇದ್ದರೆ ನಮ್ಮನ್ನು ಸಂಪರ್ಕಿಸಬಹುದು’ ಎಂದು ಅವರು ತಿಳಿಸಿದರು.

ಸಮುದಾಯ ಆರೋಗ್ಯ ಕೇಂದ್ರ ಕೊಠಡಿಯಲ್ಲಿ ಕಸ
ಹನಮಸಾಗರದ 30 ಹಾಸಿಗೆಯ ಸಮುದಾಯ ಆರೋಗ್ಯ ಕೇಂದ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.