ಅಂಜನಾದ್ರಿ (ಕೊಪ್ಪಳ ಜಿಲ್ಲೆ): ಹನುಮಮಾಲೆ ವಿಸರ್ಜನೆ ಮಾಡಲು ಬೇರೆ ಬೇರೆ ಕಡೆಯಿಂದ ಬಂದಿರುವ ಭಕ್ತರಿಗೆ ಎರಡು ದಿನಗಳಿಂದ ಜಿಲ್ಲಾಡಳಿತವೇ ಊಟದ ವ್ಯವಸ್ಥೆ ಮಾಡಿದೆ.
ಶನಿವಾರ ಹೊರ ಜಿಲ್ಲೆಗಳಿಂದ ಸಾವಿರಾರು ಭಕ್ತರು ಪಾದಯಾತ್ರೆ ಮೂಲಕ ಅಂಜನಾದ್ರಿಗೆ ಬಂದಿದ್ದಾರೆ. ಅವರಿಗೆ ಶನಿವಾರ ರಾತ್ರಿಯಿಂದಲೇ ಊಟದ ವ್ಯವಸ್ಥೆಯಿತ್ತು. ಮಾಲೆ ವಿಸರ್ಜನೆ ಮಾಡಿ ಹೋಗುವವರಿಗೆ ಅನ್ನ, ಸಾರು, ಸಿರಾ, ಬೇಳೆ ಹುಗ್ಗಿ, ಟೊಮೆಟೊ ಉಪ್ಪಿನಕಾಯಿ ನೀಡಲಾಯಿತು. ಸುಮಾರು ಒಂದು ಲಕ್ಷ ಭಕ್ತರು ಬರಬಹುದು ಎನ್ನುವ ನಿರೀಕ್ಷೆಯಲ್ಲಿ ಜಿಲ್ಲಾಡಳಿತ ಹೊಂದಿದೆ.
50 ಸಾವಿರ ಮಾಲಾಧಾರಿಗಳಿಗೆ ವಿತರಿಸಲು ಎರಡು ಲಡ್ಡು, ಒಂದು ತೀರ್ಥದ ಬಾಟಲಿ, ಹನುಮ ದೇವರ ಫೋಟೊ ಇರುವ ಕಿಟ್ ತಯಾರಿಸಲಾಗಿದೆ. ಈ ಕಿಟ್ ಭಕ್ತರು ಹಣ ನೀಡಿ ಖರೀದಿಸಬೇಕಾಗಿದೆ.
ಬೆಳಗಿನ ನಾಲ್ಕು ಗಂಟೆಯಿಂದಲೇ ಊಟದ ವ್ಯವಸ್ಥೆ ಆರಂಭಿಸಲಾಗಿದೆ.
ಮಾರ್ಗದುದ್ದಕ್ಕೂ ಊಟ: ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿರುವ ಅಂಜನಾದ್ರಿ ದೇವಸ್ಥಾನದ ವತಿಯಿಂದ ಊಟದ ವ್ಯವಸ್ಥೆ ಮಾಡಲಾಗಿದೆ.
ಅಂಜನಾದ್ರಿಯ ಸುತ್ತಮುತ್ತಲಿನ ಗ್ರಾಮಗಳ ಜನ ಹಾಗೂ ಗ್ರಾಮ ಪಂಚಾಯಿತಿಗಳು ಕೂಡ ಸ್ವಯಂ ಪ್ರೇರಣೆಯಿಂದ ಊಟದ ವ್ಯವಸ್ಥೆ ಮಾಡಿದವು. ಕೊಪ್ಪಳದಿಂದ ಬರುವಾಗ ಹಿಟ್ನಾಳ ಟೋಲ್ ನಿಂದ ಅಗಳಕೇರಾ, ಹುಲಿಗಿ, ಶಿವಪುರ, ಹೊಸ ಬಂಡಿ ಹರ್ಲಾಪುರ, ಬಸಾಪುರ, ತಿರುಮಲಾಪುರ, ಸಾಣಾಪುರ, ಗಂಗಾವತಿಯಿಂದ ಬರುವಾಗ ಆನೆಗೊಂದಿಯಲ್ಲಿ ಮಾಲಾಧಾರಿಗಳಿಗೆ ನೀರು, ಚಹಾ ಹಾಗೂ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.