ADVERTISEMENT

ದಾರಿ ತಪ್ಪಿದ ಯುವಜನತೆ: ಬಿ.ವಿ. ನಾಗರಾಳ್‌

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2024, 4:29 IST
Last Updated 22 ನವೆಂಬರ್ 2024, 4:29 IST
ಕೊಪ್ಪಳದಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ಯುವಜನ ಸಂಕಲ್ಪ ಸಮಾವೇಶದಲ್ಲಿ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿದರು
ಕೊಪ್ಪಳದಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ಯುವಜನ ಸಂಕಲ್ಪ ಸಮಾವೇಶದಲ್ಲಿ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿದರು   

ಕೊಪ್ಪಳ: ‘ಯುವಜನತೆ ಮೊಬೈಲ್‌ ದಾಸರಾಗಿ ಮಾನಸಿಕವಾಗಿ ಕುಗ್ಗಿ ಹೋಗುತ್ತಿದ್ದಾರೆ. ಪ್ರೀತಿ, ಪ್ರೇಮದ ವ್ಯತ್ಯಾಸ ಗೊತ್ತಿಲ್ಲದೆ ಕುತೂಹಲಕ್ಕೆ ಮೂಡಿದ ವಿಷಯಗಳು ಚಟವಾಗಿ ಬದಲಾಗುತ್ತಿರುವುದು ನೋವಿನ ಸಂಗತಿ’ ಎಂದು ಮಾನಸಿಕ ರೋಗಗಳ ನಿವಾರಣಾ ತಜ್ಞ ಬಿ.ವಿ. ನಾಗರಾಳ್‌ ಹೇಳಿದರು.

ನಗರದಲ್ಲಿ ಗುರುವಾರ ಅಖಿಲ ಭಾರತ ಪ್ರಜಾಸತ್ತಾತ್ಮಕ ಯುವಜನ ಸಂಘಟನೆ ವತಿಯಿಂದ ‘ಮಹಿಳೆಯ ಘನತೆ ಮತ್ತು ಮಾನವ ಮೌಲ್ಯಗಳ ಉಳಿಸೋಣ’ ಎನ್ನುವ ಆಶಯದೊಂದಿಗೆ ನಡೆದ ಜಿಲ್ಲಾ ಮಟ್ಟದ ಯುವಜನರ ಸಂಕಲ್ಪ ಸಮಾವೇಶದಲ್ಲಿ ಅವರು ಯುವ ಮನಸ್ಸಿನ ತಲ್ಲಣಗಳು ವಿಷಯದ ಕುರಿತು ಮಾತನಾಡಿದರು.

‘ಕ್ಲಿಷ್ಟಕರ ವಾತಾವರಣದಲ್ಲಿ ಈಗಿನ ಯುವಜನತೆ ಬದುಕುತ್ತಿದ್ದಾರೆ. ಲೈಂಗಿಕ ವಿಷಯಗಳ ಬಗ್ಗೆ  ಮುಕ್ತವಾಗಿ ಮಾತನಾಡುವ ಲೈಂಗಿಕ ಶಿಕ್ಷಣ ಅವರಿಗೆ ಸಿಗುತ್ತಿಲ್ಲ. ತಮ್ಮ ಸಂಕಷ್ಟಗಳನ್ನು ಯಾರ ಮುಂದೆ ಹೇಳಿಕೊಳ್ಳಲೂ ಅವರಿಗೆ ಆಗುತ್ತಿಲ್ಲ. ಅವರಿಗೆ ವಿಷಯ ತಜ್ಞರ ಸಲಹೆ ಅಗತ್ಯಯಿದೆ’ ಎಂದು ಅಭಿಪ್ರಾಯಪಟ್ಟರು.

ADVERTISEMENT

ಸಂಘಟನೆಯ ರಾಜ್ಯ ಕಾರ್ಯದರ್ಶಿ ಸಿದ್ಧಲಿಂಗ ಬಾಗೇವಾಡಿ ‘ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರ, ಪ್ರೀತಿ ನಿರಾಕರಿಸಿದ್ದಕ್ಕೆ ಪ್ರೀತಿಸಿದಾಕೆಯನ್ನೇ ಕೊಲೆ ಮಾಡುವುದನ್ನು ನೋಡಿದಾಗ ನಾವು ಎಂಥ ಸಮಾಜದಲ್ಲಿದ್ದೇವೆ ಎನ್ನುವ ಯಕ್ಷ ಪ್ರಶ್ನೆ ಮೂಡುತ್ತದೆ’ ಎಂದರು.

‘ಲೈಂಗಿಕ ಅಪರಾಧಗಳು-ಕಾರಣ ಮತ್ತು ಪರಿಹಾರ‘ ವಿಷಯದ ಕುರಿತು ಧಾರವಾಡದ ಜನಜಾಗೃತಿ ಅಭಿಯಾನದ ಸಲಹೆಗಾರ ರಾಮಾಂಜನಪ್ಪ ಆಲ್ದಳ್ಳಿ  ಮಾತನಾಡಿ ‘ನಿರುದ್ಯೋಗದ ಪ್ರಮಾಣ ಹೆಚ್ಚಾಗುತ್ತಿರುವುದು ಅಸಮಾನತೆಗೆ ಕಾರಣವಾಗುತ್ತಿದೆ. ಈ ಅಸಮಾನತೆಯಿಂದ ಯುವಜನರು ಮಾನಸಿಕವಾಗಿ ಕುಗ್ಗಿ ವ್ಯಸನಗಳ ದಾಸರಾಗುತ್ತಿದ್ದಾರೆ’ ಎಂದು ಕಳವಳ ವ್ಯಕ್ತಪಡಿಸಿದರು.

ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಶರಣು ಪಾಟೀಲ, ಶರಣು ಗಡ್ಡಿ, ಜಿಲ್ಲಾ ಸಂಘಟನಾಕಾರರಾದ ದೇವರಾಜ ಹೊಸಮನಿ, ಸುಭಾನ್, ಮೌನೇಶ್, ಕುನಾಲ್, ಕಾರ್ತಿಕ್, ಸುರೇಶ್, ಮಲ್ಲಮ್ಮ, ನಾಗರಾಜ, ಕೃಷ್ಣ, ಮಲ್ಲಪ್ಪ, ಸುಮಯ, ಮಹಾಲಕ್ಷ್ಮಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ದೇಶ ಇಂದು ವ್ಯಕ್ತಿ ಆರಾಧನೆಯಲ್ಲಿ ತೊಡಗಿದೆ. ವ್ಯಕ್ತಿಗಿಂತ ವಿಚಾರ ಮುಖ್ಯ ಎಂಬುದು ನಾವೆಲ್ಲ ಸಾರಬೇಕಿದೆ. ಹೆಸರಿಗಷ್ಟೇ ಕಲ್ಯಾಣ ರಾಜ್ಯ ಆದರೆ ಜನಕ್ಕಿಂತ ಶ್ರೀಮಂತರ ಕಲ್ಯಾಣವಷ್ಟೇ ಆಗುತ್ತಿದೆ.
ಅಲ್ಲಮಪ್ರಭು ಬೆಟ್ಟದೂರು ಬಂಡಾಯ ಸಾಹಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.