ADVERTISEMENT

ದೀಪಾವಳಿಗೆ ಸರಣಿ ರಜೆ: ಜನಸಂದಣಿ ನಿರ್ವಹಣೆಗೆ 64 ಹೆಚ್ಚುವರಿ ಬಸ್‌

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2024, 5:31 IST
Last Updated 30 ಅಕ್ಟೋಬರ್ 2024, 5:31 IST
ಸ್ಲೀಪರ್‌ ಕೋಚ್‌ ಬಸ್‌
ಸ್ಲೀಪರ್‌ ಕೋಚ್‌ ಬಸ್‌   

ಕೊಪ್ಪಳ: ಬೆಳಕಿನ ಹಬ್ಬ ದೀಪಾವಳಿ ಸಮಯದಲ್ಲಿ ಬೆಂಗಳೂರಿನಿಂದ ಜಿಲ್ಲೆಗೆ ಓಡಾಡುವವರ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿದ್ದು ಇದನ್ನು ನಿರ್ವಹಣೆ ಮಾಡಲು ಕಲ್ಯಾಣ ಕರ್ನಾಟಕ ಸಾರಿಗೆ ವಿಭಾಗದ ಕೊಪ್ಪಳ ಘಟಕವು ಒಟ್ಟು 64 ಹೆಚ್ಚುವರಿ ಬಸ್‌ಗಳನ್ನು ಓಡಿಸುತ್ತಿದೆ.

ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರಗಳಿಂದ ನಿತ್ಯ 120 ಬಸ್‌ಗಳು ಬೆಂಗಳೂರು ಮಾರ್ಗಕ್ಕೆ ಸಂಚರಿಸುತ್ತವೆ. ಹಬ್ಬದ ಅಂಗವಾಗಿ ಹೆಚ್ಚುವರಿ ಬಸ್‌ಗಳು ಸೇರಿ ಒಟ್ಟು 184 ಬಸ್‌ಗಳು ಸಂಚಾರ ನಡೆಸಲಿವೆ. ಹಬ್ಬ ಆರಂಭವಾಗಲು ಸಮಯವಿರುವ ಕಾರಣ ಮಂಗಳವಾರ ರಾತ್ರಿ 19 ಹೆಚ್ಚುವರಿ ಬಸ್‌ಗಳನ್ನು ಬೆಂಗಳೂರಿನಿಂದ ಜಿಲ್ಲೆಗೆ ಸಂಚರಿಸಿದವು. ಅ. 30ರಂದು 30, 31ರಂದು 10 ಮತ್ತು ನ. 1ರಂದು ಐದು ಹೆಚ್ಚುವರಿ ಬಸ್‌ಗಳನ್ನು ಬಿಡಲಾಗಿದೆ.

ಆದರೆ ಜಿಲ್ಲಾ ಕೇಂದ್ರದಿಂದ ಬೆಂಗಳೂರಿಗೆ ಇದ್ದ ಸ್ಲೀಪರ್ ಕೋಚ್‌ ಬಸ್‌ಗೆ ಕೊಕ್ಕೆ ಹಾಕಲಾಗಿದ್ದು, ಇದು ಜನರ ಬೇಸರಕ್ಕೆ ಕಾರಣವಾಗಿದೆ.

ADVERTISEMENT

ನಗರ ಹಾಗೂ ಸುತ್ತಮುತ್ತಲಿನ ಜನ ಸ್ಲೀಪರ್‌ ಕೋಚ್‌ನಲ್ಲಿ ಇಲ್ಲಿಂದ ಸರ್ಕಾರಿ ಬಸ್‌ನಲ್ಲಿ ಪ್ರಯಾಣಿಸಬೇಕಾದರೆ ಯಲಬುರ್ಗಾದಿಂದ ಬರುವ ಹವಾನಿಯಂತ್ರಿತ ರಹಿತ ಸ್ಲೀಪರ್‌ ಬಸ್‌ ನೆಚ್ಚಿಕೊಳ್ಳಬೇಕು. ಅದೇ ಗಂಗಾವತಿಯಿಂದ ಬೆಂಗಳೂರಿಗೆ ತೆರಳುವ ಪ್ರಯಾಣಿಕರಿಗೆ ಸಿಂಧನೂರಿನಿಂದ ಬರುವ ಕಲ್ಯಾಣ ರಥ (ಎಸಿ ಸ್ಲೀಪರ್‌) ಹಾಗೂ ಪಲ್ಲಕ್ಕಿ ಬಸ್‌ಗಳ ಸೌಲಭ್ಯಗಳಿವೆ.

ಜಿಲ್ಲಾ ಕೇಂದ್ರವಾದರೂ ಇಲ್ಲಿಂದ ಒಂದೇ ಒಂದು ಸ್ಲೀಪರ್‌ ಬಸ್‌ಗಳು ಇಲ್ಲವೆಂದರೆ ಹೇಗೆ? ಎಂದು ಜನ ಪ್ರಶ್ನಿಸಿದ್ದಾರೆ. ಸ್ಲೀಪರ್‌ ಬಸ್‌ಗಾಗಿ ನೆರೆಯ ಹೊಸಪೇಟೆಗೆ ಹೋಗಬೇಕಾದ ಸ್ಥಿತಿಯಿದೆ. ಇತ್ತೀಚೆಗೆ ಜಿಲ್ಲೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಭೇಟಿ ನೀಡಿದ್ದ ವೇಳೆಯೂ ಇದರ ಬಗ್ಗೆ ಚರ್ಚೆಯಾಗಿದೆ.

ಕಲ್ಯಾಣ ಕರ್ನಾಟಕದ ವ್ಯಾಪ್ತಿಯ ಜಿಲ್ಲೆಯಾಗಿರುವ ಕೊಪ್ಪಳ ಆಡಳಿತಾತ್ಮಕ ವಿಭಾಗೀಯ ಕಚೇರಿಗಳ ಕೆಲಸಕ್ಕಾಗಿ ಕಲಬುರಗಿಗೆ ಹೋಗಬೇಕು. ಸುಮಾರು 300 ಕಿ.ಮೀ. ಪ್ರಯಾಣ ಮಾಡಲು ಸ್ಲೀಪರ್‌ ಬಸ್‌ಗಳಿಗಾಗಿ ಹೊಸಪೇಟೆ ಅಥವಾ ಗಂಗಾವತಿಯನ್ನು ನೆಚ್ಚಿಕೊಳ್ಳಬೇಕಾದ ಸ್ಥಿತಿ ಇಲ್ಲಿನ ಪ್ರಯಾಣಿಕರದ್ದು. ಹಲವು ತಿಂಗಳುಗಳ ಹಿಂದೆ ಕೊಪ್ಪಳ–ಬೀದರ್‌, ಕೊಪ್ಪಳ–ಬೆಂಗಳೂರಿಗೆ ಸ್ಲೀಪರ್‌ ಬಸ್‌ಗಳು ಸಂಚರಿಸುತ್ತಿದ್ದವು. ಇತ್ತೀಚೆಗೆ ಇವುಗಳ ಮಾರ್ಗದಲ್ಲಿ ಬಸ್‌ ಸೇವೆ ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಜನ ದುಬಾರಿ ಹಣ ತೆತ್ತು ಖಾಸಗಿ ಬಸ್‌ಗಳ ಮೊರೆ ಹೋಗುವುದು ಅನಿವಾರ್ಯವಾಗುತ್ತಿದೆ.

ಬಸ್‌ಗಳ ಗುಣಮಟ್ಟದ ಬಗ್ಗೆ ದೂರುಗಳು ಬಂದಿದ್ದವು. ಆದ್ದರಿಂದ ಬೆಂಗಳೂರು ಬೀದರ್‌ ಮಾರ್ಗದ ಸ್ಲೀಪರ್‌ ಬಸ್‌ಗಳ ಸೌಲಭ್ಯ ತೆಗೆಯಲಾಗಿದ್ದು ಹೊಸ ಬಸ್‌ ಬಂದ ತಕ್ಷಣ ಮರಳಿ ಆರಂಭಿಸಲಾಗುತ್ತದೆ.
ಎಂ. ವೆಂಕಟೇಶ ವಿಭಾಗೀಯ ಸಾರಿಗೆ ನಿಯಂತ್ರಣಾಧಿಕಾರಿ ಕೊಪ್ಪಳ

ಬಸ್ ಆರಂಭಿಸಲು ಮನವಿ

ಕೊಪ್ಪಳ: ಜಿಲ್ಲಾ ಕೇಂದ್ರದಿಂದ ಬೆಂಗಳೂರು ಹಾಗೂ ಬೀದರ್‌ಗೆ ಸ್ಲೀಪರ್‌ ಬಸ್‌ಗಳ ಸೌಲಭ್ಯ ಆರಂಭಿಸಬೇಕು ಎಂದು ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣ ಇಟ್ಟಂಗಿ ವಿಭಾಗೀಯ ನಿಯಂತ್ರಕರಿಗೆ ಮಂಗಳವಾರ ಮನವಿ ಮಾಡಿದ್ದಾರೆ. ‘ಕೊಪ್ಪಳದಿಂದ ಬೆಂಗಳೂರಿಗೆ ಅತ್ಯಧಿಕ ಸಂಖ್ಯೆಯಲ್ಲಿ ವಾರದ ಎಲ್ಲಾ ದಿನಗಳಲ್ಲಿಯೂ ಪ್ರಯಾಣಿಕರ ಸಂಚಾರ ಇರುತ್ತದೆ.

ಈ ಮಾರ್ಗದಲ್ಲಿ ಒಂದೇ ಒಂದು ಸ್ಲೀಪರ್ ಬಸ್‌ ಇರುವುದಿಲ್ಲ. ಮೊದಲು ಇದ್ದ ಬಸ್‌ ಏಕಾಏಕಿ ಸ್ಥಗಿತಗೊಳಿಸಲಾಗಿದೆ. ಗುಣಮಟ್ಟದ ರಸ್ತೆಯೂ ಇರುವ ಕಾರಣ ಕಡಿಮೆ ಅವಧಿಯಲ್ಲಿ ಬೆಂಗಳೂರು ತಲುಪಬಹುದು. ಬೆಳಗಿನ ಜಾವ ಇಲ್ಲಿಂದ ಹೊರಟು ಸಂಜೆ ಬೆಂಗಳೂರಿನಿಂದ ವಾಪಸ್‌ ರಾತ್ರಿ ವೇಳೆಗೆ ಕೊಪ್ಪಳಕ್ಕೆ ಬರಲು ಅನುಕೂಲವಾಗುವ ಬಸ್ ಸೌಲಭ್ಯ ಒದಗಿಸಬೇಕು’ ಎಂದು ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.