ಅಳವಂಡಿ: ದೀಪಾವಳಿ ಹಬ್ಬ ಎಂದರೇ ಲಂಬಾಣಿ ಸಮುದಾಯಕ್ಕೆ ವಿಶೇಷ ಮತ್ತು ಭಕ್ತಿಯ ಆಗರ. ಹಬ್ಬದಲ್ಲಿಯೇ ಲಂಬಾಣಿ ಸಮುದಾಯದ ಯುವತಿಯರು ಲಂಬಾಣಿ ವೇಷಭೂಷಣ ದೊಂದಿಗೆ ನರೇಗಾ ಜಾಗೃತಿ ಮೂಡಿಸಿದ್ದು ವಿಶೇಷವಾಗಿತ್ತು.
ಕೊಪ್ಪಳ ತಾಲ್ಲೂಕಿನ ಹೈದರ್ ನಗರ ಗ್ರಾಮದಲ್ಲಿ ದೀಪಾವಳಿ ಹಬ್ಬವನ್ನು ಲಂಬಾಣಿ ಸಮುದಾಯದವರು ಸಂಭ್ರಮದಿಂದ ಆಚರಿಸಿದರು. ಅಮಾವಾಸ್ಯೆ ದಿನದಂದು ಗ್ರಾಮದ ಹಿರಿಯ ನಾಯಕ ಅವರ ಮನೆಯಿಂದ ದೀಪ ತರಲಾಯಿತು. ಪ್ರತಿ ಮನೆ ಮನೆಗೆ ಹೋಗಿ ದೀಪ ಬೆಳಗಿಸುವುದರ ಜೊತೆಗೆ ಅವರ ಮನೆ ಬೆಳಗಲಿ ಎಂದು ಹಾರೈಸಿದರು.
ಅಮಾವಾಸ್ಯೆ ಮರುದಿನ ಬೆಟ್ಟ, ಗುಡ್ಡ, ಜಮೀನುಗಳಿಗೆ ತೆರಳಿ ವಿಶೇಷ ಬಗೆಯ ಹೂವುಗಳನ್ನು ತಂದು ಪ್ರತಿ ಮನೆ ಮನೆಗೆ ಹೋಗಿ ಗೋಮಾತೆಯ ಸಗಣಿಯ ಮೇಲೆ ಹೂಗಳಿಂದ ಅಲಂಕರಿಸಿ ಪ್ರತಿಯೊಬ್ಬರ ಏಳ್ಗೆ ಬಯಸಿದ್ದು ಕಂಡು ಬಂತು. ದೇವಾಲಯಗಳ ಮುಂದೆ ನೃತ್ಯ ಮಾಡುತ್ತಾ, ಹೂಗಳನ್ನು ತರಲು ಹೋದಾಗ ಮದುವೆ ಗೊತ್ತುಪಡಿಸಿದವರು ತಮ್ಮ ಸ್ನೇಹಿತೆಯರನ್ನು ಪರಸ್ಪರ ಅಪ್ಪಿಕೊಂಡು ಅಳಲು ತೋಡಿಕೊಂಡರು.
ಲಂಬಾಣಿ ಸಮುದಾಯದ ಕುಲದೇವರಾದ ಸಂತ ಸೇವಾಲಾಲ್ ಮತ್ತು ದುರ್ಗಾದೇವಿಯ ಮೂರ್ತಿಗಳನ್ನು ಮೆರವಣಿಗೆ ಮೂಲಕ ನದಿಗೆ ತೆಗೆದುಕೊಂಡು ಹೋಗಿ ಪವಿತ್ರ ಸ್ನಾನ ಮಾಡಿಸಿದರು. ಮೆರವಣಿಗೆಯಲ್ಲಿ ಲಂಬಾಣಿ ಜನಾಂಗದ ಮೂಲ ಕಲೆ ನೃತ್ಯ ಮಾಡುವದು, ಲಂಬಾಣಿ ಗೀತೆಯ ಮೂಲಕ ಸಂಭ್ರಮಿಸುವುದು ಗಮನ ಸೆಳೆಯಿತು. ನದಿಯಿಂದ ಪುನ: ಬಂದ ಮೇಲೆ ಸಂತ ಸೇವಾಲಾಲ್ ಮತ್ತು ದುರ್ಗಾದೇವಿಗೆ ಇಳೆ ಮಾಡುವುದು ಹಾಗು ಎಲ್ಲರೂ ದೇವಸ್ಥಾನದ ಹತ್ತಿರ ಸೇರಿಕೊಂಡು ದೇವರಿಗೆ ಪ್ರಸಾದ ನೈವೇದ್ಯ ಮಾಡಿ ಹಂಚಲಾಯಿತು.
ಲಂಬಾಣಿ ವೇಷ ಭೂಷಣದ ಮೂಲಕ ನರೇಗಾ ಜಾಗೃತಿ: ಲಂಬಾಣಿ ಕುಲದೇವರು ಸಂತ ಸೇವಾಲಾಲ್ ಮತ್ತು ದುರ್ಗಾದೇವಿಯ ಮೆರವಣಿಗೆ ಸಂದರ್ಭದಲ್ಲಿ ಮಹಿಳೆಯರು ತಮ್ಮ ವೇಷ ಭೂಷಣದೊಂದಿಗೆ ತಮ್ಮ ಕೈಯಲ್ಲಿ ಮಹಾತ್ಮಾ ಗಾಂಧಿ ನರೇಗಾ ಯೋಜನೆಯ ಜಾಬ್ ಕಾರ್ಡ್ ಹಿಡಿದುಕೊಂಡು ತಾಂಡಾದ ಜನರಿಗೆ ನರೇಗಾ ಯೋಜನೆಯ ಕುರಿತು ಜಾಗೃತಿ ಮೂಡಿಸಿದರು. ತಾಂಡಾದವರು ಯೋಜನೆಯಲ್ಲಿ ಸಕ್ರೀಯವಾಗಿ ಭಾಗವಹಿಸಿ ಆರ್ಥಿಕ ಸಬಲರಾಗುವಂತೆ ಕರೆ ನೀಡಿದರು.
ಲಂಬಾಣಿ ಮಹಿಳೆಯರು ಖುಷಿಯಿಂದ ಪಾಲ್ಗೊಂಡು ತಮ್ಮ ಮೂಲ ವೇಷಭೂಷಣ ಮೂಲಕ ದೀಪಾವಳಿ ಆಚರಣೆ ಮಾಡುವದು ಸೌಭಾಗ್ಯವಾಗಿದೆ. ನರೇಗಾ ಜಾಗೃತಿ ಮೂಡಿಸಿದ್ದು ಖುಷಿಯಾಗಿದೆ-ಲಕ್ಷ್ಮೀ ಪರಮೇಶ್ ಬಡಿಗೇರ, ಹೈದರನಗರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.