ADVERTISEMENT

ಸಾರ್ವಜನಿಕರ ಕೆಲಸ ತಕ್ಷಣ ಮಾಡಿ, ಅಲೆದಾಟ ತಪ್ಪಿಸಿ

ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಸಲಹೆ

​ಪ್ರಜಾವಾಣಿ ವಾರ್ತೆ
Published 26 ಜೂನ್ 2024, 5:26 IST
Last Updated 26 ಜೂನ್ 2024, 5:26 IST
ಕಾರಟಗಿ ತಾಲ್ಲೂಕಿನ ಮುಸ್ಟೂರು ಡಗ್ಗಿಕ್ಯಾಂಪ್‌ನಲ್ಲಿ ಸೋಮವಾರ ನಡೆದ ಸಾರ್ವಜನಿಕರ ಅಹವಾಲು ಸ್ವೀಕಾರ ಹಾಗೂ ಅಭಯ ಹಸ್ತ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಚಾಲನೆ ನೀಡಿದರು
ಕಾರಟಗಿ ತಾಲ್ಲೂಕಿನ ಮುಸ್ಟೂರು ಡಗ್ಗಿಕ್ಯಾಂಪ್‌ನಲ್ಲಿ ಸೋಮವಾರ ನಡೆದ ಸಾರ್ವಜನಿಕರ ಅಹವಾಲು ಸ್ವೀಕಾರ ಹಾಗೂ ಅಭಯ ಹಸ್ತ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಚಾಲನೆ ನೀಡಿದರು   

ಕಾರಟಗಿ: ‘ರಾಜ್ಯ ಸರ್ಕಾರ ಜನರಿಗೆ ನೀಡಿದ್ದ ಎಲ್ಲ ಭರವಸೆಗಳನ್ನು ಈಡೇರಿಸಿ ನುಡಿದಂತೆ ನಡೆದಿದೆ. ಪಾರದರ್ಶಕ ಆಡಳಿತ ನೀಡುತ್ತಿದ್ದು, ತಳ ಮಟ್ಟದಲ್ಲಿರುವ ಅಧಿಕಾರಿಗಳು ಸಾರ್ವಜನಿಕರ ಕೆಲಸವನ್ನು ತಕ್ಷಣ ಮಾಡಿ, ಜನರ ಅಲೆದಾಟ ತಪ್ಪಿಸಬೇಕು. ನಿರ್ಲಕ್ಷ್ಯ ವಹಿಸಿದರೆ ಕಠಿಣ ಕಾನೂನು ಕ್ರಮ ನಿಶ್ಚಿತ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ತಾಲ್ಲೂಕಿನ ಮುಸ್ಟೂರು ಡಗ್ಗಿಕ್ಯಾಂಪ್‌ನಲ್ಲಿ ಸೋಮವಾರ ನಡೆದ ಸಾರ್ವಜನಿಕರ ಕುಂದು ಕೊರತೆ ಆಲಿಕೆ, ಅಭಯ ಹಸ್ತ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ನೀಡಿದ್ದ ಭರವಸೆಯಂತೆ ನಿಮ್ಮ ಭಾಗಕ್ಕೆ ಅಧಿಕಾರಿಗಳೊಂದಿಗೆ ಬಂದಿದ್ದೇನೆ. ಸಮಸ್ಯೆಗಳನ್ನು ತಿಳಿಸಿ, ಪರಿಹಾರ ಕಂಡುಕೊಳ್ಳಿ. ಈಗಾಗಲೇ ವಿವಿಧ ಗ್ರಾ.ಪಂ ವ್ಯಾಪ್ತಿಯಲ್ಲಿ ಅಭಯ ಹಸ್ತ ಕಾರ್ಯಕ್ರಮ ಮಾಡಿ, ಜನರ ಅಲೆದಾಟ ತಪ್ಪಿಸಲಾಗಿದೆ. ಜವಬ್ದಾರಿತನ ಹೆಚ್ಚಾಗಿ, ಅದನ್ನೇ ಸಮರ್ಥವಾಗಿ ನಿರ್ವಹಿಸುತ್ತಿರುವುದರಿಂದ ನಿಮ್ಮ ಭಾಗಕ್ಕೆ ಬರಲು ವಿಳಂಬವಾಯಿತು. ಮುಂದಿನ ದಿನಗಳಲ್ಲಿ 2 ತಿಂಗಳಿಗೊಮ್ಮೆ ಪ್ರತಿ ಪಂಚಾಯಿತಿಗೆ ಭೇಟಿ ನೀಡುವೆ’ ಎಂದರು.

ADVERTISEMENT

ಸಾರ್ವಜನಿಕರು ಸಚಿವರಿಗೆ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಅಹವಾಲು ಸಲ್ಲಿಸಿದರು. ಸೊಸೈಟಿ ಜಾಗವನ್ನು ಅದರ ಹೆಸರಲ್ಲೇ ಮಾಡಲು 45 ವರ್ಷ ಗತಿಸಿದೆ ಎಂದು ಸಚಿವರ ಗಮನ ಸೆಳೆಯಲಾಯಿತು. ಸಂಬಂಧಿಸಿದ ಅಧಿಕಾರಿ ಗೈರು ಆಗಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಸಚಿವರು ಜು.6ರೊಳಗೆ ವರದಿ ಸಲ್ಲಿಸಲು ಸೂಚಿಸಿದರು.

ಶಾಲೆಗಳಲ್ಲಿ ಶಿಕ್ಷಕರ ಕೊರತೆ, ಶೌಚಾಲಯ, ಕುಡಿಯುವ ನೀರು, ವಿದ್ಯಾರ್ಥಿಗಳಿಗೆ ಡೆಸ್ಕ್‌, ಮುಸ್ಟೂರು- ಗಂಗಾವತಿ ರಸ್ತೆ ನಿರ್ಮಾಣ, ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರ, ಸಿಸಿ ರಸ್ತೆ, ಚರಂಡಿ ನಿರ್ಮಾಣ, ವೈದ್ಯರ ಸೌಲಭ್ಯ, ಮೊರಾರ್ಜಿ ವಸತಿ ಶಾಲೆ, ಸ್ಮಶಾನ ಅಭಿವೃದ್ಧಿ, ವಿದ್ಯುತ್‌ ಕಂಬದ ತಂತಿಗಳ ಸಮಸ್ಯೆ ಕುರಿತು ಜನರು ಸಚಿವರ ಗಮನ ಸೆಳೆದು, ಶೀಘ್ರ ಪರಿಹಾರಕ್ಕೆ ಜನರು ಆಗ್ರಹಿಸಿದರು.

‘ಈಗಾಗಲೇ ₹1.8 ಕೋಟಿ ವೆಚ್ಚದ ಮುಸ್ಟೂರು- ಹೆಬ್ಬಾಳ ಟಾರ್‌ ರಸ್ತೆ, ₹1.5 ಕೋಟಿ ವೆಚ್ಚದ ಮುಸ್ಟೂರು- ಮುಸ್ಟೂರು ಡಗ್ಗಿಕ್ಯಾಂಪ್‌ ಟಾರ್‌ ರಸ್ತೆ, ₹2.4 ಕೋಟಿ ವೆಚ್ಚದಲ್ಲಿ ಹೆಬ್ಬಾಳ- ಅಂಜೂರಿಕ್ಯಾಂಪ್‌ವರೆಗೆ ಟಾರ್‌ ರಸ್ತೆ ನಿರ್ಮಾಣ ಶೀಘ್ರವೇ ಆರಂಭಿಸಲಾಗುವುದು’ ಎಂದು ಸಚಿವರು ಭರವಸೆ ನೀಡಿದರು.

ಜಿ.ಪಂ ಮಾಜಿ ಉಪಾಧ್ಯಕ್ಷ ಬಿ. ಬಸವರಾಜಪ್ಪ, ಬ್ಲಾಕ್ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಶರಣೇಗೌಡ ಮಾಲಿಪಾಟೀಲ, ಎಪಿಎಂಸಿ ಮಾಜಿ ಅಧ್ಯಕ್ಷ ಶಶಿಧರಗೌಡ, ಗ್ಯಾರಂಟಿ ಯೋಜನೆ ಪ್ರಧಿಕಾರದ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ್, ತಾಪಂ ಮಾಜಿ ಅಧ್ಯಕ್ಷ ಪ್ರಕಾಶ ಭಾವಿ, ತಾಪಂ ಇಒ ಲಕ್ಷ್ಮೀದೇವಿ, ಪಿಆರ್‌ಇಡಿ ಎಂಜಿನಿಯರ್‌ ವಿಜಯಕುಮಾರ ಸಹಿತ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.