ADVERTISEMENT

ಕೊಪ್ಪಳ: ಗರ್ಭಾಶಯದಲ್ಲಿದ್ದ 4.5 ಕೆ.ಜಿ ಗಡ್ಡೆ ಹೊರತೆಗೆದ ವೈದ್ಯರು

​ಪ್ರಜಾವಾಣಿ ವಾರ್ತೆ
Published 14 ಜೂನ್ 2024, 15:54 IST
Last Updated 14 ಜೂನ್ 2024, 15:54 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಕೊಪ್ಪಳ: ಕೊಪ್ಪಳ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್‌) ಅಧೀನದಲ್ಲಿರುವ ತಾಯಿ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಕ್ಲಿಷ್ಟಕರವಾದ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, 45 ವರ್ಷದ ಮಹಿಳೆಯೊಬ್ಬರ ಗರ್ಭಾಶಯದಲ್ಲಿದ್ದ ನಾಲ್ಕೂವರೆ ಕೆ.ಜಿ. ತೂಕದ ಗಡ್ಡೆಯನ್ನು ಹೊರತೆಗೆಯಲಾಗಿದೆ.

ತಾಲ್ಲೂಕಿನ ಬಿಸರಳ್ಳಿ ಗ್ರಾಮದ ಮಹಿಳೆಯೊಬ್ಬರು ಹೊಟ್ಟೆನೋವಿನಿಂದ ಬಳಲುತ್ತಿದ್ದರು. ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಮುಖ್ಯಸ್ಥ ಡಾ.ಬಿ.ಎಚ್‌. ನಾರಾಯಣಿ ಹಲವು ಪರೀಕ್ಷೆಗಳನ್ನು ನಡೆಸಿದಾಗ ಮಹಿಳೆಯ ಗರ್ಭಾಶಯದಲ್ಲಿ ದೊಡ್ಡ ಗಡ್ಡೆ ಇರುವುದು ಗೊತ್ತಾಗಿದೆ. ನಾರಾಯಣಿ ಮತ್ತು ಅವರ ತಂಡದ ಸದಸ್ಯರಾದ ಡಾ.ಧನಲಕ್ಷ್ಮೀ ಕೆ.ಆರ್, ಡಾ.ಸೀಮಾ ಬಿ.ಎನ್ ಹಾಗೂ ಡಾ.ರಾಜೇಶ ಬಿ.ಎನ್. ಸತತ ಮೂರು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ಮಾಡಿ ಗಡ್ಡೆ ಹೊರ ತೆಗೆದಿದ್ದಾರೆ.

ADVERTISEMENT

‘ಸಾಮಾನ್ಯವಾಗಿ ಗರ್ಭಾಶಯದಿಂದ ಹುಟ್ಟುವ ಗಡ್ಡೆಗಳು ಗರಿಷ್ಠ 500ರಿಂದ 1000 ಗ್ರಾಂ ತೂಕವಿರುತ್ತವೆ. ಆದರೆ ಈ ಪ್ರಕರಣದಲ್ಲಿ ರೋಗಿಯ ಗರ್ಭಾಶಯದಲ್ಲಿ 4.5 ಕೆ.ಜಿ ತೂಕದ ಗಡ್ಡೆಯಿತ್ತು. ವಿರಳವಾದ ಹಾಗೂ ಕ್ಲಿಷ್ಟಕರ ಪ್ರಕರಣ ಇದಾಗಿದ್ದು, ಸರ್ಕಾರಿ ಆಸ್ಪತ್ರೆ ವೈದ್ಯರು ಸುರಕ್ಷಿತವಾಗಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಮಹಿಳೆ ಆರೋಗ್ಯವಾಗಿದ್ದಾಳೆ’ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸುಶೀಲಕುಮಾರ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.