ADVERTISEMENT

ಮೋದಿ ಹೊಗಳಿದ್ದ ಸಂಗಣ್ಣ ಕರಡಿ ಈಗೇನು ಹೇಳುವರು: ದೊಡ್ಡನಗೌಡ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2024, 15:26 IST
Last Updated 16 ಏಪ್ರಿಲ್ 2024, 15:26 IST
<div class="paragraphs"><p>ಶಾಸಕ ದೊಡ್ಡನಗೌಡ ಪಾಟೀಲ</p></div>

ಶಾಸಕ ದೊಡ್ಡನಗೌಡ ಪಾಟೀಲ

   

ಕುಷ್ಟಗಿ (ಕೊಪ್ಪಳ ಜಿಲ್ಲೆ): ಪ್ರಧಾನಿ ನರೇಂದ್ರ ಮೋದಿ ವಿಶ್ವನಾಯಕ. ಅವರು ಮತ್ತೆ ಪ್ರಧಾನಿಯಾಗಬೇಕು ಎಂದೇ ಇತ್ತೀಚೆಗಿನವರೆಗೂ ಅವರನ್ನು ಹೊಗಳುತ್ತ ಬಂದ ಸಂಗಣ್ಣ ಕರಡಿ ಈಗ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಲು ಸಜ್ಜಾಗಿರುವುದು ಅಚ್ಚರಿ ಮೂಡಿಸಿದೆ. ಆದರೆ ಅವರ ನಿರ್ಧಾರದ ಹಿಂದೆ ಯಾವುದೇ ಅರ್ಥವೇ ಇಲ್ಲ ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.

'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದ ಪಾಟೀಲ ‘ಮೋದಿ ಪ್ರಧಾನಿಯಾಗಬೇಕು, ಅದಕ್ಕಾಗಿ ಯಾರಿಗೇ ಟಿಕೆಟ್‌ ಕೊಟ್ಟರೂ ಪಕ್ಷದ ಪರವಾಗಿ ದುಡಿಯುತ್ತೇನೆ ಹಾಗಾಗಿ ಡಾ. ಬಸವರಾಜ ಅವರನ್ನು ಗೆಲ್ಲಿಸುವ ಮೂಲಕ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗುವುದಕ್ಕೆ ಅವಕಾಶ ನೀಡಲು ಮತದಾರರಿಗೆ ಮನವಿ ಮಾಡಿದ್ದ ಸಂಗಣ್ಣ ಈಗ ಏನು ಹೇಳುವರೊ’ ಎಂದು ಪ್ರಶ್ನಿಸಿದರು.

ADVERTISEMENT

‘ದಶಕದಿಂದಲೂ ಸಂಸದರಾಗಿ, ಪಕ್ಷದ ಮುಖಂಡರಾಗಿದ್ದ ಸಂಗಣ್ಣ ಅವರು ಬಿಜೆಪಿಯಲ್ಲಿಯೇ ಉಳಿಯಬೇಕು ಎಂಬುದು ನಮ್ಮ ಒತ್ತಾಸೆಯಾಗಿತ್ತು. ಆದರೆ ಈಗ ಅವರು ಕಾಂಗ್ರೆಸ್‌ ಸೇರಲು ಮುಂದಾಗಿರುವುದು ಬೇಸರ ತಂದಿದೆ. ಹಿಂದೆ ಸಂಸದರಾಗಿದ್ದ ಶಿವರಾಮಗೌಡ ಅವರಿಗೆ ಟಿಕೆಟ್‌ ತಪ್ಪಿಸಿ ತಮಗೆ ಟಿಕೆಟ್ ನೀಡಿದ್ದನ್ನು ಸಂಗಣ್ಣ ನೆನಪಿಸಿಕೊಳ್ಳಬೇಕಿತ್ತು. ಪಕ್ಷದ ಹೈಕಮಾಂಡ್ ನಿರ್ಧಾರವನ್ನು ಗೌರವಿಸಬೇಕಿತ್ತು’ ಎಂದು ದೊಡ್ಡನಗೌಡ ಅಸಮಾಧಾನ ಹೊರಹಾಕಿದರು.

ಈಗಾಗಲೇ ಎಷ್ಟೋ ಜನ ಬಿಜೆಪಿ ಬಿಟ್ಟು ಹೋಗಿದ್ದಾರೆ ಅನೇಕ ಜನ ಪುನಃ ಮರಳಿ ಬಂದಿದ್ದಾರೆ, ಎಲ್ಲವನ್ನೂ ಸಹಿಸಿಕೊಳ್ಳುವ ಸಂಘಟನಾತ್ಮಕ ಶಕ್ತಿ ಬಿಜೆಪಿಯಲ್ಲಿದೆ. ಸಂಗಣ್ಣ ಅವರು ಪಕ್ಷ ಬಿಟ್ಟಿರುವುದು ರಾಜಕೀಯವಾಗಿ ಪಕ್ಷದ ಮೇಲೆ ಸ್ವಲ್ಪ ಮಟ್ಟಿನ ಪರಿಣಾಮ ಬೀರಿದರೂ ಅದೆಲ್ಲವನ್ನೂ ಪಕ್ಷ ಸರಿದೂಗಿಸಿಕೊಳ್ಳಲಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.