ADVERTISEMENT

ಕುಷ್ಟಗಿ: ತೆಗ್ಗಿಹಾಳ ಸರ್ಕಾರಿ ಶಾಲೆಗೆ 1.05 ಎಕರೆ ಜಮೀನು ದಾನ

ಮಾತೆಯ ಸ್ಮರಣೆಗೆ ಶಾಲೆಗೆ ಭೂಮಿ ನೀಡಿದ ಮಗ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2024, 13:53 IST
Last Updated 16 ನವೆಂಬರ್ 2024, 13:53 IST
ಕುಷ್ಟಗಿಯಲ್ಲಿ ಶನಿವಾರ ತೆಗ್ಗಿಹಾಳದ ಭೂದಾನಿ ವೆಂಕಟರಾವ್ ಕುಲಕರ್ಣಿ ಅವರನ್ನು ತಹಶೀಲ್ದಾರ್ ಅಶೋಕ ಶಿಗ್ಗಾವಿ ಸನ್ಮಾನಿಸಿದರು
ಕುಷ್ಟಗಿಯಲ್ಲಿ ಶನಿವಾರ ತೆಗ್ಗಿಹಾಳದ ಭೂದಾನಿ ವೆಂಕಟರಾವ್ ಕುಲಕರ್ಣಿ ಅವರನ್ನು ತಹಶೀಲ್ದಾರ್ ಅಶೋಕ ಶಿಗ್ಗಾವಿ ಸನ್ಮಾನಿಸಿದರು   

ಕುಷ್ಟಗಿ: ತಾಲ್ಲೂಕಿನ ತೆಗ್ಗಿಹಾಳ ಗ್ರಾಮದಲ್ಲಿನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ 1.05 ಎಕರೆ ಭೂಮಿಯನ್ನು ಬೆಂಗಳೂರು ಮೂಲದ ವಕೀಲ ವೆಂಕಟರಾವ್ ಹನುಮಂತರಾವ್ ಕುಲಕರ್ಣಿ ಅವರು ತಮ್ಮ ತಾಯಿ ಸುಂದರಾಬಾಯಿ ಹನುಮಂತರಾವ ಕುಲಕರ್ಣಿ ಅವರ ಸ್ಮರಣಾರ್ಥ ದಾನ ನೀಡಿದ್ದಾರೆ.

ಗ್ರಾಮದಲ್ಲಿನ ಅವರ ಜಮೀನಿನ 5 ಗುಂಟೆ ಜಾಗದಲ್ಲಿ ಈ ಹಿಂದೆ ಶಾಲಾ ಕಟ್ಟಡ ನಿರ್ಮಿಸಲಾಗಿತ್ತು. ಶಾಲೆಗೆ ಇನ್ನಷ್ಟು ಅಗತ್ಯವಾಗಿದ್ದುದು ಗಮನಕ್ಕೆ ಬಂದ ನಂತರ ವೆಂಕಟರಾವ್ ಅವರು ಶಾಲೆಗೆ ಇನ್ನೂ ಒಂದು ಎಕರೆ ಜಮೀನನ್ನು ದಾನ ಮಾಡಿ ಶನಿವಾರ ಅದನ್ನು ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ರಾಜ್ಯಪಾಲರ ಹೆಸರಿನಲ್ಲಿ ನೋಂದಾಯಿಸಿದರು.

ಶಾಲೆಗೆ ಅಗತ್ಯವಾದ ಜಮೀನು ದಾನ ನೀಡಿದ ವೆಂಕಟರಾವ್ ಅವರ ಮಾದರಿ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ತಹಶೀಲ್ದಾರ್ ಅಶೋಕ ಶಿಗ್ಗಾವಿ ತಮ್ಮ ಕಚೇರಿಯಲ್ಲಿ ಸರ್ಕಾರದ ಪರವಾಗಿ ಸನ್ಮಾನಿಸಿದರು.

ADVERTISEMENT

ಈ ಸಂದರ್ಭದಲ್ಲಿ ಮಾತನಾಡಿದ ಅವರು, ತಮ್ಮ ಹೆತ್ತವರ ಸ್ಮರಣಾರ್ಥ ಸರ್ಕಾರಿ ಶಾಲೆಗೆ ಬೆಲೆಬಾಳುವ ಜಮೀನು ನೀಡುವ ಮೂಲಕ ಗ್ರಾಮದ ಶೈಕ್ಷಣಿಕ ಬೆಳವಣಿಗೆಗೆ ಉತ್ತಮ ಕೊಡುಗೆ ನೀಡಿರುವುದು ಮಾದರಿಯಾಗಿದೆ ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಂದ್ರ ಕಾಂಬಳೆ ಭೂದಾನಿ ವೆಂಕಟರಾವ್ ಅವರನ್ನು ಅಭಿನಂದಿಸಿ, ಅವರ ಶೈಕ್ಷಣಿಕ ಕಾಳಜಿ ಮತ್ತು ಆದರ್ಶ ವ್ಯಕ್ತಿತ್ವವನ್ನು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ತೆಗ್ಗಿಹಾಳ ಶಾಲೆಯ ಎಸ್‌ಡಿಎಂಸಿ ಸದಸ್ಯ ನಡುಗಡ್ಡೆಪ್ಪ ಜಗ್ಗಲರ್, ಶಿವಪ್ಪ ತುರ್ವಿಹಾಳ, ಸಿಆರ್‌ಪಿ ಸೋಮಲಿಂಗಪ್ಪ ಗುರಿಕಾರ, ಬಿಆರ್‌ಸಿ ಸಮನ್ವಯಾಧಿಕಾರಿ ಶ್ರೀಕಾಂತ್ ಬೆಟಗೇರಿ, ಪ್ರಭಾರ ಮುಖ್ಯಶಿಕ್ಷಕ ಡಿ.ಬಿ.ವೀರೇಶ, ಲೋಕೇಶ್, ಜೀವನಸಾಬ್ ವಾಲಿಕಾರ್, ಎಚ್.ಎಚ್.ಉಸ್ತಾದ್, ಶಿಕ್ಷಕ ಚನ್ನಬಸಪ್ಪ, ಅಡಿವೆಪ್ಪ, ಊರಿನ ಪ್ರಮುಖರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.