ADVERTISEMENT

ಗ್ಯಾರಂಟಿ ಯೋಜನೆಗಳ ಕುರಿತ ಅಪಪ್ರಚಾರಕ್ಕೆ ಕಿವಿಗೊಡಬೇಡಿ: ಶಾಸಕ ಹಿಟ್ನಾಳ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2023, 7:00 IST
Last Updated 19 ಆಗಸ್ಟ್ 2023, 7:00 IST
ಕೊಪ್ಪಳ ತಾಲ್ಲೂಕಿನ ಗಬ್ಬೂರು ಗ್ರಾಮದಲ್ಲಿ ಶಾಸಕ ಕೆ ರಾಘವೇಂದ್ರ ಹಿಟ್ನಾಳ ಜನಸಂಪರ್ಕ ಸಭೆ ಉದ್ದೇಶಿಸಿ ಮಾತನಾಡಿದರು
ಕೊಪ್ಪಳ ತಾಲ್ಲೂಕಿನ ಗಬ್ಬೂರು ಗ್ರಾಮದಲ್ಲಿ ಶಾಸಕ ಕೆ ರಾಘವೇಂದ್ರ ಹಿಟ್ನಾಳ ಜನಸಂಪರ್ಕ ಸಭೆ ಉದ್ದೇಶಿಸಿ ಮಾತನಾಡಿದರು   

ಕೊಪ್ಪಳ: ‘ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ವಿನಾಕಾರಣ ಅಪಪ್ರಚಾರ ಮಾಡಲಾಗುತ್ತಿದ್ದು, ಯಾರೂ ಅವುಗಳಿಗೆ ಕಿವಿಗೊಡಬಾರದು. ಯಾವ ಗ್ಯಾರಂಟಿ ಯೋಜನೆಗಳೂ ಸ್ಥಗಿತವಾಗುವುದಿಲ್ಲ’ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.

ತಾಲ್ಲೂಕಿನ ಗಿಣಗೇರಾ ಹಾಗೂ ಹಿಟ್ನಾಳ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಗಬ್ಬೂರು, ಗುಳದಲ್ಲಿ, ಕೆರೆಹಳ್ಳಿ ಲಿಂಗದಹಳ್ಳಿ, ಶಹಾಪುರ ಹಾಗೂ ಬೇವಿನಹಳ್ಳಿ ಗ್ರಾಮಗಳಲ್ಲಿ ಶುಕ್ರವಾರ ಜನಸಂಪರ್ಕ ಸಭೆ ವೇಳೆ ಮಾತನಾಡಿದ ಅವರು ‘ಕಾಂಗ್ರೆಸ್‌ ನುಡಿದಂತೆ ನಡೆದಿದೆ. ಈಗಾಗಲೇ ಮೂರು ಗ್ಯಾರಂಟಿ ಯೋಜನೆಗಳನ್ನು ಈಡೇರಿಸಿದ್ದೇವೆ. ಇನ್ನುಳಿದ ಯೋಜನೆಗಳನ್ನು ಅನುಷ್ಠಾನ ಮಾಡುತ್ತೇವೆ’ ಎಂದರು.

‘ಗ್ಯಾರಂಟಿ ಯೋಜನೆಗಳ ಮೂಲಕ ಸರ್ಕಾರ ಬಡವರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದೆ. ಈ ಯೋಜನೆಗಳಿಂದ ಪ್ರತಿ ಮನೆಗೆ ₹4ರಿಂದ ₹5 ಸಾವಿರ ಸಂದಾಯವಾಗುತ್ತಿದೆ ಈ ಮೂಲಕ ಬಡತನ ನಿರ್ಮೂಲನೆಯ ಕನಸು ನನಸಾಗುತ್ತಿದೆ’ ಎಂದರು. 

ADVERTISEMENT

ಗುಳದಲ್ಲಿ ಗ್ರಾಮದಲ್ಲಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಮೊಟ್ಟೆ, ಬಾಳೆಹಣ್ಣು, ಶೇಂಗಾಚಿಕ್ಕಿ ವಿತರಣೆ ಕಾರ್ಯಕ್ರಮಕ್ಕೆ ಅವರು ಚಾಲನೆ ನೀಡಿದರು. ಗಬ್ಬೂರು ಗ್ರಾಮದಲ್ಲಿ 2022-23ನೇ ಸಾಲಿನ ಎಸ್.ಸಿ.ಪಿ ಹಾಗೂ ಟಿ.ಎಸ್.ಪಿ ಯೋಜನೆ ಅಡಿಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಪಂಪ್ ಮೋಟಾರ್ ಹಾಗೂ ಪೂರಕ ಸಾಮಗ್ರಿ ವಿತರಿಸಲಾಯಿತು.

ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ರಡ್ಡಿ, ತಹಶೀಲ್ದಾರ್‌ ವಿಠ್ಠಲ ಚೌಗುಲೆ, ತಾಲ್ಲೂಕು ಪಂಚಾಯಿತಿ ಇಒ ದುಂಡೇಶ್ ತುರಾದಿ, ಪಕ್ಷದ ಮುಖಂಡರಾದ ಗೂಳಪ್ಪ ಹಲಿಗೇರಿ, ಅಲಿಸಾಬ್, ಗಿರೀಶ ಹಿರೇಮಠ, ನಿಂಗಜ್ಜ ಶಹಾಪುರ, ಸಿದ್ದರಾಮಪ್ಪ ಕೆರೆಹಳ್ಳಿ, ಅಣ್ಣಪ್ಪ ಗಬ್ಬೂರು, ಕುಬೇರಪ್ಪ ಗಬ್ಬೂರು, ಹನಮಂತಪ್ಪ ಹುಲಿಗಿ, ಗುಡದಪ್ಪ ಗುಳದಲ್ಲಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.