ADVERTISEMENT

ಕನಕಗಿರಿ: ಬಸ್‌ ಚಾಲಕರಿಗೆ ತಲೆನೋವು ತಂದ ರಸ್ತೆಗಳು

ಕನಕಗಿರಿ ತಾಲ್ಲೂಕಿನ ರಸ್ತೆಗಳ ಸ್ಥಿತಿಗತಿಗಳ ಸಮೀಕ್ಷಾ ವರದಿ ಸಲ್ಲಿಕೆ

ಪ್ರಜಾವಾಣಿ ವಿಶೇಷ
Published 8 ಡಿಸೆಂಬರ್ 2023, 6:36 IST
Last Updated 8 ಡಿಸೆಂಬರ್ 2023, 6:36 IST
ಕನಕಗಿರಿ ಸಮೀಪದ ಗುಡದೂರಿನಿಂದ ಕೆ.ಮಲ್ಲಾಪುರಕ್ಕೆ ತೆರಳುವ ರಸ್ತೆಯಲ್ಲಿ ಕಾಣುತ್ತಿರುವ ಕಬ್ಬಿಣದ ಸರಳು
ಕನಕಗಿರಿ ಸಮೀಪದ ಗುಡದೂರಿನಿಂದ ಕೆ.ಮಲ್ಲಾಪುರಕ್ಕೆ ತೆರಳುವ ರಸ್ತೆಯಲ್ಲಿ ಕಾಣುತ್ತಿರುವ ಕಬ್ಬಿಣದ ಸರಳು   

ಕನಕಗಿರಿ: ಈ ತಾಲ್ಲೂಕು ವ್ಯಾಪ್ತಿಯಲ್ಲಿ 64 ಗ್ರಾಮಗಳಿದ್ದು, ಬಹುತೇಕ ಗ್ರಾಮಗಳ ರಸ್ತೆಗಳು ಹದಗೆಟ್ಟಿವೆ. ಅಲ್ಪಮಳೆಗೂ ತಗ್ಗುಗುಂಡಿಗಳಲ್ಲಿ ನೀರು ನಿಂತು ಸಂಚಾರಕ್ಕೆ ಅಡಚಣೆಯಾಗುತ್ತಿದೆ. ದಶಕದ ಹಿಂದೆ ಡಾಂಬರೀಕರಣಗೊಂಡ ರಸ್ತೆಗಳು  ಕಿತ್ತು ಹೋಗಿವೆ.

ಹುಲಿಹೈದರ, ನವಲಿ ಹಾಗೂ ಕನಕಗಿರಿ ಕಂದಾಯ ವ್ಯಾಪ್ತಿಯ ಹಲವು ಗ್ರಾಮಗಳ ರಸ್ತೆಗಳ ಸ್ಥಿತಿ ನೋಡತೀರದಾಗಿದೆ. ಡಾಂಬರೀಕರಣವಿಲ್ಲದ ರಸ್ತೆಯಲ್ಲಿ ಬಸ್ ಓಡಿಸುವುದು ಸಾರಿಗೆ ಸಂಸ್ಥೆಯ ಚಾಲಕರಿಗೆ ತಲೆನೋವಾಗಿದೆ.

ನೀರ್ಲೂಟಿ, ಚಿಕ್ಕಖೇಡ, ಹಿರೇಖೇಡ, ಗುಡದೂರು ಮಾರ್ಗವಾಗಿ ಕೆ.ಮಲ್ಲಾಪುರ ಗ್ರಾಮಕ್ಕೆ ತೆರಳುವ ರಸ್ತೆ ಹದಗೆಟ್ಟಿದೆ. ಇದೇ ಮಾರ್ಗದ ಕಿರುಸೇತುವೆ ಹಾಳಾಗಿ ಆರೇಳು ವರ್ಷಗಳೇ ಕಳೆದಿವೆ. ಸೇತುವೆ ಮೇಲ್ದರ್ಜೆಗೆ ಏರಿಸುವುದಾಗಲಿ ಅಥವಾ ರಸ್ತೆ ದುರಸ್ತಿ ಕೆಲಸವಾಗಲಿ ಆಗಿಲ್ಲ. ರಸ್ತೆಗೆ ಹಾಕಿರುವ ಕಬ್ಬಿಣದ ಸರಳುಗಳು ಕಾಣಿಸುತ್ತಿದ್ದು ಸಾಕಷ್ಟು ಜನರ ವಾಹನಗಳ ಟೈರ್‌ಗಳು ಪಂಚರ್ ಆಗಿವೆ ಎಂದು ಅಲ್ಲಿನ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ADVERTISEMENT

ಉಮಳಿ ಕಾಟಾಪುರದಿಂದ ಮಲ್ಲಾಪುರಕ್ಕೆ ಹೋಗುವ ರಸ್ತೆಯ ಡಾಂಬರೀಕರಣವಾಗಿಲ್ಲ. ರಸ್ತೆಯ ಎರಡು ಬದಿಯಲ್ಲಿಯೂ ಮುಳ್ಳು ಜಾಲಿ, ಇತರೆ ಗಿಡಗಳು ಬೆಳೆದು ನಿಂತಿದ್ದು ಬಸ್ ಸವಾರರಿಗೆ ಸಮಸ್ಯೆಯಾಗಿದೆ. 

ತಾಲ್ಲೂಕಿನ ವಿವಿಧ ಮಾರ್ಗಗಳಲ್ಲಿ ನಿತ್ಯ ಬಸ್ ಓಡಿಸುವ ಚಾಲಕರು ಹಿಡಿ ಶಾಪ ಹಾಕುತ್ತಾ ವಾಹನ ಓಡಿಸುತ್ತಿದ್ದಾರೆ. ಅಕ್ಟೋಬರ್ 1ರಂದು ಟೈರ್ ಬ್ಲಾಸ್ಟ್ ಆದ ಪರಿಣಾಮ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೃದ್ದೆಯೊಬ್ಬರ ಕಾಲು ಮುರಿದಿದೆ ಅವರ ಚಿಕಿತ್ಸೆಯ ವೆಚ್ಚವನ್ನು ವಾಹನ ಚಾಲಕರ ಭರಿಸಿದ್ದಾರೆ.

ವರದಿ ಸಲ್ಲಿಕೆ: ಕಳೆದ ಒಂದು ತಿಂಗಳ ಹಿಂದೆ ಸಾರಿಗೆ (ಕೆಎಸ್‌ಆರ್‌ಟಿಸಿ) ಇಲಾಖೆಯ ಅಧಿಕಾರಿಗಳು ತಾಲ್ಲೂಕಿನ ರಸ್ತೆಗಳ ಸ್ಥಿತಿಗತಿಗಳನ್ನು ಸಮೀಕ್ಷೆ ಮಾಡಿದ್ದಾರೆ.

ನವಲಿಯಿಂದ ಈಚನಾಳ, ಕ್ಯಾರಿಹಾಳ, ಸಂಕನಾಳ, ಉದ್ಯಾಳ, ಕಲಕೇರಿಯಿಂದ ಜೀರಾಳ, ಮಲ್ಲಿಗೆವಾಡ,ಕಾಟಾಪುರ, ವಡಕಿ, ಬಂಕಾಪುರ, ದೇವಲಾಪುರ, ಹೊಸಗುಡ್ಡ, ಲಾಯದುಣಸಿ ಸೇರಿ ಇತರೆ ರಸ್ತೆಗಳು ‘ಕೆಟ್ಟ ರಸ್ತೆ’ಗಳಾಗಿವೆ (ಬ್ಯಾಡ್ ರೋಡ್) ಎಂದು ಸಾರಿಗೆ ಸಂಸ್ಥೆಯ ಅಧಿಕಾರಿಗಳು ವರದಿ ಸಲ್ಲಿಸಿದ್ದಾರೆ. ಲೋಕೋಪಯೋಗಿ, ಜಿಲ್ಲಾ ಪಂಚಾಯಿತಿ ರಸ್ತೆ ಡಾಂಬರೀಕರಣ ಮಾಡುವ ಕೆಲಸವನ್ನು ಮಾಡಬೇಕು ನಾವು ವರದಿ ಸಲ್ಲಿಕೆ ಮಾತ್ರ ಮಾಡಿದ್ದೇವೆ ಎಂದು ಸಾರಿಗೆ ಇಲಾಖೆಯ ಅಧಿಕಾರಿಗಳು ತಿಳಿಸಿದರು.

ರಸ್ತೆಗಳು ಹಾಳಾಗಲು ಅಕ್ರಮ ಮರಳು ದಂಧೆ ಕಾರಣವಾಗಿದೆ ಎಂದು ವೆಂಕಟೇಶ ದೂರಿದರು. ಟ್ಯ್ರಾಕ್ಟರ್‌, ಟಿಪ್ಪರ್‌ಗಳು ಅಗತ್ಯಕ್ಕಿಂತ ಹೆಚ್ಚು ಮರಳನ್ನು ತುಂಬಿಕೊಂಡು ವೇಗವಾಗಿ ಹಗಲಿರುಳು ಓಡಿಸುತ್ತಿರುವ ಪರಿಣಾಮ ರಸ್ತೆಗಳು ಹಾಳಾಗಿವೆ. 

ತಾವರಗೇರಾದಿಂದ ನವಲಿ ಮಾರ್ಗವಾಗಿ ಕಾರಟಗಿಗೆ ತೆರಳುವ ರಸ್ತೆ ಹಾಳಾದ ಪರಿಣಾಮ ಎರಡು ಸಲ ಸಂಚರಿಸಬೇಕಾದ ಬಸ್ ದಿನದಲ್ಲಿ ಒಂದು ಸಲ ಮಾತ್ರ ಸಂಚರಿಸುತ್ತಿದೆ. ಕನಕಗಿರಿಯಿಂದ 32 ಕಿ.ಮೀ ಕಾರಟಗಿಗೆ ತಲುಪಬೇಕಾದರೆ ಎರಡೂವರೆ ಗಂಟೆ ಸಮಯ ತೆಗೆದುಕೊಳ್ಳುತ್ತಿದೆ.

ಕಾರಟಗಿ, ಯಲಬುರ್ಗಾ, ಕುಕನೂರು, ವಂಕಲಕುಂಟೆ ಸೇರಿ ತಾಲ್ಲೂಕು, ಹೋಬಳಿ ಪ್ರದೇಶಗಳಿಗೆ ತೆರಳಲು ಸರಿಯಾದ ಸಮಯಕ್ಕೆ ಬಸ್ ಸೌಲಭ್ಯ ಇಲ್ಲ. ಗಂಗಾವತಿ, ಕಾರಟಗಿ ಹಾಗೂ ಕನಕಗಿರಿ ತಾಲ್ಲೂಕುಗಳ ನಡುವೆ ಒಂದೇ ಬಸ್ ಡಿಪೊ ಇರುವುದರಿಂದ ಬಸ್ ಸಂಚಾರ ನಿರ್ವಹಣೆ ಸಮಸ್ಯೆಯಾಗಿದೆ. ಹೊಸ ತಾಲ್ಲೂಕು ಕೇಂದ್ರವಾಗಿರುವ ಕುಕನೂರಿನಲ್ಲಿ ಬಸ್ ಡಿಪೊ ಇದೆ. ಅಲ್ಲಿಂದ ಇಲ್ಲಿಗೆ ಒಂದು ಬಸ್ ಬರುತ್ತಿಲ್ಲ. ಕನಕಗಿರಿ, ಕಾರಟಗಿಗೆ ಬಸ್ ಡಿಪೊ ಮಂಜೂರು ಮಾಡಿಸಬೇಕು ಎಂದು ಮುಖಂಡ ದುರ್ಗಾದಾಸ ಯಾದವ ಒತ್ತಾಯಿಸಿದ್ದಾರೆ.

ಕನಕಗಿರಿ ಸಮೀಪದ ವಡಕಿ ಗ್ರಾಮದ ಹದಗೆಟ್ಟ ರಸ್ತೆ
ಕ್ಷೇತ್ರದ ಪ್ರತಿಯೊಂದು ಗ್ರಾಮಗಳ ರಸ್ತೆ ಸ್ಥಿತಿಗತಿ ಬಗ್ಗೆ ಅರಿವು ಇದ್ದು ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿಯ ಪ್ರದೇಶಾಭಿವೃದ್ದಿ ಅನುದಾನ ಹಾಗೂ ಆಯಾ ಇಲಾಖೆಯ ಅನುದಾನದಲ್ಲಿ ಡಾಂಬರೀಕರಣಕ್ಕೆ ಒತ್ತು ನೀಡಲಾಗಿದೆ. ಹಂತ ಹಂತವಾಗಿ ಹದಗೆಟ್ಟ ರಸ್ತೆಗಳನ್ನು ಅಭಿವೃದ್ದಿ ಪಡಿಸಲಾಗುವುದು. ವಿದ್ಯಾರ್ಥಿಗಳಿಗೆ ಸಮಸ್ಯೆಯಾಗದಂತೆ ಬಸ್ ಓಡಿಸುವಂತೆ ಅಧಿಕಾರಿಗಳಿಗ ಸೂಚಿಸಲಾಗಿದೆ.
-ಶಿವರಾಜ ತಂಗಡಗಿ ಜಿಲ್ಲಾ ಉಸ್ತುವಾರಿ ಸಚಿವ
ಚಿಕ್ಕತಾಂಡಾ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಬಸ್ ಸಂಚಾರ ಇಲ್ಲದ ವಿಷಯವನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ.
-ಶ್ರೀರಾಮ ನಾಯಕ ಸಾರಿಗೆ ನಿಯಂತ್ರಕ ಕನಕಗಿರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.