ADVERTISEMENT

ಯಲಬುರ್ಗಾ: ದುಡಿಮೆಗಾಗಿ ತಪ್ಪದ ಜನರ ವಲಸೆ

ಬರಗಾಲದ ಬರೆಗೆ ಪರದಾಡುತ್ತಿರುವ ಜನ: ಆಸರೆಯಾಗದ ನರೇಗಾ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2024, 6:19 IST
Last Updated 21 ಮಾರ್ಚ್ 2024, 6:19 IST
<div class="paragraphs"><p>ಯಲಬುರ್ಗಾ ತಾಲ್ಲೂಕಿನ ತರಲಕಟ್ಟಿತಾಂಡಾದ ಕೆಲ ಕುಟುಂಬದವರು ಎಂ.ಕೆ. ಹುಬ್ಬಳ್ಳಿ ಹೊರವಲಯದಲ್ಲಿರುವ ಕಬ್ಬಿನ ತೋಟದಲ್ಲಿ ಕಟಾವು ಕಾರ್ಯದಲ್ಲಿ ನಿರತರಾಗಿರುವುದು</p></div>

ಯಲಬುರ್ಗಾ ತಾಲ್ಲೂಕಿನ ತರಲಕಟ್ಟಿತಾಂಡಾದ ಕೆಲ ಕುಟುಂಬದವರು ಎಂ.ಕೆ. ಹುಬ್ಬಳ್ಳಿ ಹೊರವಲಯದಲ್ಲಿರುವ ಕಬ್ಬಿನ ತೋಟದಲ್ಲಿ ಕಟಾವು ಕಾರ್ಯದಲ್ಲಿ ನಿರತರಾಗಿರುವುದು

   

ಯಲಬುರ್ಗಾ: ಸ್ಥಳೀಯವಾಗಿ ಉದ್ಯೋಗ ಕಲ್ಪಿಸಿಕೊಟ್ಟು ಗುಳೆ ನಿಯಂತ್ರಣಕ್ಕಾಗಿ ನರೇಗಾ ಯೋಜನೆ ಪರಿಣಾಮಕಾರಿಯಾಗಿ ಜಾರಿಗಾಗಿ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ ಯಾದರೂ, ತಾಲ್ಲೂಕಿನ ಅನೇಕ ಗ್ರಾಮ ಮತ್ತು ತಾಂಡಾಗಳಲ್ಲಿನ ಕೆಲ ಕುಟುಂಬಗಳು ಗುಳೆ ಹೋಗಿ ವಿವಿಧ ಕೆಲಸವನ್ನು ನಿರ್ವಹಿಸಿ ಹಣ ಸಂಪಾದಿಸಿ ಕೊಂಡು ಬರುತ್ತಿರುವುದು ಸುಮಾರು ವರ್ಷಗಳಿಂದಲೂ ನಡೆಯುತ್ತಿದೆ.

ಕಬ್ಬು ಕಟಾವು, ಹಣ್ಣುಮೆಣಸಿನ ಕಾಯಿ ಬಿಡಿಸುವುದು, ಕಟ್ಟಡ ಕೆಲಸದಲ್ಲಿ ತೊಡಗುವುದು ಸೇರಿದಂತೆ ವಿವಿಧ ಕೆಲಸಗಳನ್ನು ನಿರ್ವಹಿಸುವುದು ಸಾಮಾನ್ಯವಾಗಿದೆ. ಸುಮಾರು ನಾಲ್ಕೈದು ತಿಂಗಳಕಾಲ ಊರು ಬಿಟ್ಟು ಅಲ್ಲಿಯೇ ಚಿಕ್ಕಜೋಪಡಿಯಲ್ಲಿ ಜೀವನ ನಡೆಸಿ ಮತ್ತೆ ಸ್ವಂತ ಊರಿಗೆ ಬರುವುದು ಸಂಪ್ರದಾಯದಂತೆಯೇ ನಡೆಯುತ್ತಿದೆ.

ADVERTISEMENT

ತರಲಕಟ್ಟಿ, ಹುಣಸಿಹಾಳ, ತಲ್ಲೂರು, ಬೋದೂರು ಸೇರಿದಂತೆ ವಿವಿಧ ಗ್ರಾಮಗಳ ತಾಂಡಾದಲ್ಲಿನ ಬಹುತೇಕ ಕುಟುಂಬಗಳು ಕಬ್ಬು ಕಟಾವು ಕೆಲಸಕ್ಕಾಗಿ ಎಂ.ಕೆ. ಹುಬ್ಬಳ್ಳಿ, ಹಂಪಿಹೊಳಿ, ಅಳ್ನಾವರ, ಮೈಸೂರು, ಮಂಡ್ಯ, ಹಳಿಯಾಳ, ಕಂಬರಗಡಿ, ಬಾಗಲಕೋಟೆ, ಯಂಕಂಚಿ ಹಾಗೂ ಬೆಳಗಾವಿ ಜಿಲ್ಲೆಯ ಅನೇಕ ಕಡೆಗಳಲ್ಲಿ ಈಗಾಗಲೇ ಹೋಗಿ ಕೆಲಸದಲ್ಲಿ ಭಾಗಿಯಾಗಿದ್ದಾರೆ. ನವೆಂಬರ್ ತಿಂಗಳಲ್ಲಿ ಹೊರಟು ಮಾರ್ಚ್‌ ತಿಂಗಳಲ್ಲಿ ಮರಳಿ ಬಂದು ನಂತರದಲ್ಲಿ ಸ್ವಂತ ಊರಲ್ಲಿ ವಿವಿಧ ದುಡಿಮೆಯಲ್ಲಿ ಭಾಗಿಯಾಗುತ್ತಾರೆ.

ಕಟ್ಟಡ ಕಾಮಗಾರಿಯಲ್ಲಿ ಕೆಲಸ ಮಾಡುವ ಕೆಲವರು ಬೆಂಗಳೂರು ಮತ್ತು ಮಂಗಳೂರು ಪ್ರದೇಶಕ್ಕೆ ಹೋಗಿದ್ದಾರೆ. ಮಾಟಲದಿನ್ನಿ ಯಾಪಲದಿನ್ನಿ, ಗುಂಟಮಡು, ಗುಳೆ ಹಾಗೂ ಇನ್ನಿತರ ಗ್ರಾಮದವರು ಕರ್ನಾಟಕದ ಕುಡತಿನಿ, ಶಿರಗುಪ್ಪಾ, ಕಂಪ್ಲಿ ಮತ್ತು ಆಂಧ್ರಪ್ರದೇಶದ ಗಡಿ ಭಾಗದ ಕೆಲ ಗ್ರಾಮಗಳಲ್ಲಿ ಕೆಂಪುಮೆಣಸಿನಕಾಯಿ ಬಿಡಿಸಲು ಮೂರ್ನಾಲ್ಕು ತಿಂಗಳಗಟ್ಟಲೇ ಗುಳೆಹೋಗಿ ಬರುತ್ತಾರೆ. ಸ್ಥಳೀಯವಾಗಿ ಸಿಗುವ ಆದಾಯಕ್ಕಿಂತಲೂ ಹೆಚ್ಚಿನ ಲಾಭ ಮಾಡಿಕೊಳ್ಳಲು ಸಾಧ್ಯವಾಗುವುದರಿಂದ ಗುಳೆ ಹೋಗುವುದು ಒಂದು ಸುಗ್ಗಿಯ ಕಾಯಕ ಎಂಬಂತಾಗಿದೆ. ಗುಳೆ ಹೋಗುವ ಕುಟುಂಬಗಳ ದುಡಿಮೆಯ ದಾವಂತದಲ್ಲಿ ಮಕ್ಕಳ ಶೈಕ್ಷಣಿಕ ವ್ಯವಸ್ಥೆ ಹಾಳಾಗುತ್ತಿದೆ. ಬಾಲ್ಯವು ಕೂಡಾ ಪಾಲಕರ ದುಡಿಮೆಗೆ ಸಹಕರಿಸುವುದರಲ್ಲಿಯೇ ಕಳೆದುಹೋಗುತ್ತಿದೆ. ಕೆಲ ಕುಟುಂಬದವರು ವಯೋವೃದ್ಧರನ್ನು ಬಿಟ್ಟು ಹೋಗಿರುತ್ತಾರೆ. ಅವರ ಆರೈಕೆಯಿಲ್ಲದೇ ನರಳಾಡುತ್ತಿರುತ್ತಾರೆ ಎಂದು ತರಲಕಟ್ಟಿ ಗ್ರಾಮದ ರೈತ ಯುವಮುಖಂಡ ಶ್ರೀಕಾಂತಗೌಡ ಕಳವಳ ವ್ಯಕ್ತಪಡಿಸಿದ್ದಾರೆ.

ಹೆಸರಿಗೆ ಮಾತ್ರ ಉದ್ಯೋಗಖಾತ್ರಿ ಯೋಜನೆ ಇದ್ದು, ಅಧಿಕಾರಿಗಳಿಗೆ ಪ್ರಯೋಜನವಾಗುವಷ್ಟು ಕೃಷಿ ಕಾರ್ಮಿಕರಿಗೆ ಆಗುತ್ತಿಲ್ಲ ಎಂಬುದೇ ಕಾರ್ಮಿಕ ಯಮನೂರಪ್ಪ ಕಾರಬಾರಿ ಅವರ ಬೇಸರದ ಮಾತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.