ADVERTISEMENT

ಕುಷ್ಟಗಿ ಎಪಿಎಂಸಿಯಲ್ಲಿ ಬೇವಿನ ಬೀಜದ ಆವಕಕ್ಕೆ ಬರ: ಪ್ರಾಂಗಣವೆಲ್ಲ ಭಣ ಭಣ

ನಾರಾಯಣರಾವ ಕುಲಕರ್ಣಿ
Published 11 ಜುಲೈ 2024, 3:25 IST
Last Updated 11 ಜುಲೈ 2024, 3:25 IST
ಬೇವಿನ ಆವಕ ಕಡಿಮೆಯಾಗಿರುವ ಕಾರಣಕ್ಕೆ ಕುಷ್ಟಗಿ ಎಪಿಎಂಸಿಯಲ್ಲಿ ಶ್ರಮಿಕರು ಕೆಲಸವಿಲ್ಲದೆ ಕುಳಿತಿರುವುದು
ಬೇವಿನ ಆವಕ ಕಡಿಮೆಯಾಗಿರುವ ಕಾರಣಕ್ಕೆ ಕುಷ್ಟಗಿ ಎಪಿಎಂಸಿಯಲ್ಲಿ ಶ್ರಮಿಕರು ಕೆಲಸವಿಲ್ಲದೆ ಕುಳಿತಿರುವುದು   

ಕುಷ್ಟಗಿ: ಬೇವಿನ ಬೀಜ ಎಂದಾಕ್ಷಣ ನೆನಪಿಗೆ ಬರುವುದು ಇಲ್ಲಿಯ ಎಪಿಎಂಸಿ. ಈ ಭಾಗದಲ್ಲಿ ಯಥೇಚ್ಛವಾಗಿ ಬೆಳೆಯುವ ಮರ, ಬೇಸಿಗೆ ನಂತರ ಕೆಲಸವಿಲ್ಲದ ದಿನಗಳಲ್ಲಿ ಬೀಜಗಳನ್ನು ಆಯ್ದು ಒಂದಷ್ಟು ಆರ್ಥಿಕ ಹೊರೆ ನೀಗಿಸಿಕೊಳ್ಳುವುದಕ್ಕೆ ಜನರಿಗೆ ಅನುಕೂಲವಾಗುತ್ತಿತ್ತು. ಆದರೆ ಈ ಬಾರಿ ಬೇವಿಗೂ ಬರ ಬಂದು ಬಡವರು, ಕೃಷಿಕೂಲಿಕಾರರ ಪಾಲಿಗೆ ಬೇವು ವರವಾಗಲಿಲ್ಲ.

ಕೊಪ್ಪಳ ಜಿಲ್ಲೆಯಲ್ಲಿಯೇ ಇಲ್ಲಿಯ ಎಪಿಎಂಸಿಯಲ್ಲಿ ನಡೆಯುವ ಬೇವಿನ ಬೀಜದ ವಹಿವಾಟು ಅಧಿಕ. ಅಷ್ಟೇ ಅಲ್ಲ ಸುತ್ತಲಿನ ಬಾಗಲಕೋಟೆ, ರಾಯಚೂರು ಜಿಲ್ಲೆಗಳಿಂದಲೂ ದೊಡ್ಡ ಪ್ರಮಾಣದ ವರ್ತಕರು ತಮ್ಮ ಬೇವಿನಬೀಜವನ್ನು ಇಲ್ಲಿ ತಂದು ಮಾರಾಟ ಮಾಡುವುದು ಉಂಟು.

ಸಾಮಾನ್ಯವಾಗಿ ಬೇವಿನ ಬೀಜದ ವ್ಯಾಪಾರ ವಹಿವಾಟು ಆರಂಭವಾಯಿತೆಂದರೆ ಅದರ ಘಾಟು ಸುತ್ತಲಿನ ಪ್ರದೇಶದಲ್ಲಿ ವ್ಯಾಪಿಸಿರುತ್ತದೆ. ಬೇವಿನ ಮೂಟೆಗಳನ್ನು ಹೊತ್ತು ಬರುವ ಮತ್ತು ಸಾಗಿಸುವ ವಾಹನಗಳ ಭರಾಟೆ ಇರುತ್ತದೆ. ಬೇವಿನ ಬೀಜ ಹೊರತುಪಡಿಸಿ ಬೇರೆ ಯಾವ ಕಾಳುಕಡಿ ಇಲ್ಲದ ಸಂದರ್ಭದಲ್ಲಿ ಎಪಿಎಂಸಿಯಲ್ಲಿ ಕೂಲಿ ಮಾಡುವ ಶ್ರಮಿಕರಿಗೆ ಕೈತುಂಬ ಕೆಲಸ. ದಲ್ಲಾಳಿಗಳದ್ದೂ ಉತ್ತಮ ವ್ಯಾಪಾರ ಇರುತ್ತಿತ್ತು. ಎಪಿಎಂಸಿಗೆ ಹೆಚ್ಚಿನ ಆದಾಯ ತಂದುಕೊಡುವಲ್ಲಿ ಬೇವು ಪ್ರಮುಖ ಉತ್ಪನ್ನವಾಗಿದೆ. ಆದರೆ ಈ ವರ್ಷದ ಪರಿಸ್ಥಿತಿ ಹಾಗಿಲ್ಲ, ಅಂಥ ಯಾವ ಚಟುವಟಿಕೆಗಳೂ ಇಲ್ಲ. ಕೆಲಸವಿಲ್ಲದೆ ಶ್ರಮಿಕರು ಖಾಲಿ ಕುಳಿತಿರುವುದು ಕಂಡುಬರುತ್ತಿದೆ. ಸಮಿತಿಗೆ ಆದಾಯವಿಲ್ಲ, ದಲ್ಲಾಳಿಗಳಿಗೂ ಕೆಲಸವಿಲ್ಲದಂತಾಗಿದೆ.

ADVERTISEMENT

ಮೌಲ್ಯವರ್ಧನೆಗೊಳ್ಳುವ ಬೇವಿನಬೀಜಗಳನ್ನು ಗೊಬ್ಬರ, ಔಷಧ ಸೇರಿದಂತೆ ವಿವಿಧ ಉತ್ಪನ್ನಗಳ ತಯಾರಿಕೆಗಾಗಿ ಇಲ್ಲಿಯ ಎಪಿಎಂಸಿಯಿಂದ ಮೈಸೂರು, ತಮಿಳುನಾಡು, ಕೇರಳ, ಮಹಾರಾಷ್ಟ್ರ ರಾಜ್ಯಗಳಿಗೂ ಕಳಿಸಲಾಗುತ್ತದೆ. ಹಾಗಾಗಿ ಬೇವಿನಬೀಜದ ಮಾರಾಟಕ್ಕೆ ಈ ಪಟ್ಟಣ ಪ್ರಮುಖ ವ್ಯಾಪಾರದ ಸ್ಥಳವಾಗಿದೆ. ಆದರೆ ಕಳೆದ ಒಂದು ತಿಂಗಳಿನಿಂದ ಬೇವಿನ ಬೀಜದ ವಹಿವಾಟು ಆರಂಭಗೊಂಡು ಮುಕ್ತಾಯ ಹಂತ ತಲುಪಿದರೂ ಮಾರುಕಟ್ಟೆಗೆ ನಿರೀಕ್ಷಿತ ಪ್ರಮಾಣದಲ್ಲಿ ಆವಕವಾಗಿಲ್ಲ ಎಂಬುದು ತಿಳಿದಿದೆ.

ಮಾರಾಟ ದರದಲ್ಲಿಯೂ ಬೇವು ಕಳೆದ ಒಂದು ದಶಕದ ಅವಧಿಯಲ್ಲಿ ಏರಿಳಿತ ಕಂಡಿದ್ದು ಕ್ವಿಂಟಲ್‌ಗೆ ಕನಿಷ್ಟ ₹800 ರಿಂದ ಗರಿಷ್ಟ ₹1,200 ವರೆಗೂ ಮಾರಾಟವಾಗಿರುವುದು ಕಂಡುಬಂದಿದೆ. ಈ ವರ್ಷ ಉತ್ತಮ ಬೆಲೆ ಇದ್ದರೂ ಆವಕದ ಕೊರತೆ ಇದೆ ಎಂದು ಸಮಿತಿ ಮೂಲಗಳು ತಿಳಿಸಿವೆ.

2014-15ನೇ ವ‍ರ್ಷದಲ್ಲಿ 40 ಸಾವಿರ ಕ್ವಿಂಟಲ್‌ ಆವಕವಾಗಿದ್ದರೆ 2015-16ರಲ್ಲಿ ಅತಿ ಹೆಚ್ಚು ಎಂದರೆ 1.17 ಲಕ್ಷ ಕ್ವಿಂಟಲ್‌ ಬಂದಿತ್ತು. ತೀರಾ ಕಡಿಮೆ ಎಂದರೂ 2022-23ರಲ್ಲಿ 12 ಸಾವಿರ ಕ್ವಿಂಟಲ್‌ ಆವಕವಾಗಿತ್ತು. ಆದರೆ ಈ ವರ್ಷ ಆವಕದ ಪ್ರಮಾಣ ಕಡಿಮೆಯಾಗಿರಲಿದೆ ಎಂಬ ಮಾಹಿತಿ ಇದೆ. 

ಬೇವಿನಬೀಜ ಆವಕದ ದಿನಗಳಲ್ಲಿ ಅಳೆಯುವುದು ಲಾರಿ ಭರ್ತಿ ಮಾಡುವುದು ಹೀಗೆ ಬಿಡುವಿಲ್ಲದ ಕೆಲಸ ಇರುತ್ತಿತ್ತು. ಈ ಬಾರಿ ಕೆಲಸವಿಲ್ಲದೆ ಬರಿಗೈಯಲ್ಲಿ ಮನೆಗೆ ಹೋಗುವಂತಾಗಿದೆ
ಯಮನೂರಪ್ಪ ಎಪಿಎಂಸಿ ಶ್ರಮಿಕ
ಬೇವಿನ ಸೀಜನ್‌ ಬಂತೆಂದರೆ ಕಾಲಿಡುವುದಕ್ಕೂ ಪ್ರಾಂಗಣದಲ್ಲಿ ಜಾಗ ಇರುತ್ತಿರಲಿಲ್ಲ. ಈ ಬಾರಿ ಬೇವಿನ ಬೀಜ ಬಾರದ ಕಾರಣ ಪ್ರಾಂಗಣ ನಿಶಬ್ದವಾಗಿದೆ
ಬಸವರಾಜ ಬೇವಿನಬೀಜದ ವರ್ತಕ

ಬೇವಿಗೆ ಏಕಿಷ್ಟು ಬರ?

ಬೇವಿನ ಕಡಿಮೆ ಆವಕ ಕುರಿತು ಎಪಿಎಂಸಿ ಕಾರ್ಯದರ್ಶಿ ನೀಲಪ್ಪ ಶೆಟ್ಟರ ವಿವರಿಸಿದ್ದು ಹೀಗೆ. ‘ಹವಾಮಾನ ವೈಪರೀತ್ಯದಿಂದ ಬೇವಿಗ ಗಿಡಗಳು ಹೆಚ್ಚು ಹೂವು ಬಿಟ್ಟು ಕಾಯಿಕಟ್ಟದಿರುವುದು. ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗಿದ್ದರಿಂದ ರೈತರು ಕೂಲಿಕಾರ್ಮಿಕರೆಲ್ಲ ಬಿತ್ತನೆ ಚಟುವಟಿಕೆಯಲ್ಲಿ ತೊಡಗಿದ್ದು ಮತ್ತು ಹೊಲಗಳಲ್ಲಿ ಬೆಳೆಗಳು ಹಾಳಾಗುತ್ತವೆ ಎಂಬ ಕಾರಣಕ್ಕೆ ರೈತರು ಬೇವಿನ ಬೀಜಗಳನ್ನು ಆಯ್ದುಕೊಳ್ಳುವುದಕ್ಕೆ ಅವಕಾಶ ನೀಡದಿರುವುದು. ಈ ಎಲ್ಲ ಕಾರಣಗಳು ಬೇವಿನ ವಹಿವಾಟಿನ ಮೇಲೆ ಪರಿಣಾಮ ಬೀರಿವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.