ಕೊಪ್ಪಳ: ‘ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆ ಗಳಿಸಲು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಮತ್ತೊಮ್ಮೆ ಮನವರಿಕೆ ಮಾಡಿಕೊಡಲಾಗುವುದು. ಇನ್ನೊಂದು ತಿಂಗಳಲ್ಲಿ ಮರಳಿ ಮನವಿ ಸಲ್ಲಿಸಲಾಗುವುದು’ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಮಹಾಪ್ರಧಾನ ಕಾರ್ಯದರ್ಶಿ ಎಸ್.ಎಂ. ಜಾಮದಾರ ಹೇಳಿದರು.
ನಗರದಲ್ಲಿ ಭಾನುವಾರ ನಡೆದ ಮಹಾಸಭಾದ ಕಾರ್ಯಕಾರಿ ಸಮಿತಿ ಸಭೆ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ‘ಲಿಂಗಾಯತದಲ್ಲಿ ದಲಿತರು, ಎಸ್.ಟಿಗಳು ಇದ್ದಾರೆ. ಲಿಂಗಾಯತರಿಗೆ ಸ್ವತಂತ್ರ ಧರ್ಮದ ಮಾನ್ಯತೆ ನೀಡಿದರೆ ಹಲವು ಸೌಲಭ್ಯಗಳು ನಿಲ್ಲುತ್ತವೆ ಎಂದು ಕೇಂದ್ರ ಕಾರಣ ನೀಡಿದೆ. ಬೌದ್ಧ ಧರ್ಮದಲ್ಲಿರುವ ಬಹುತೇಕರು ದಲಿತರು. ಅವರಿಗೆ ಸೌಲಭ್ಯ ನಿಂತಿಲ್ಲ. ಹೀಗಾಗಿ ಸ್ವತಂತ್ರ ಧರ್ಮ ಮಾನ್ಯತೆ ನಿರಾಕರಿಸಿ ಕೇಂದ್ರ ನೀಡಿದ ಕಾರಣ ಸರಿಯಲ್ಲ’ ಎಂದು ಅಭಿಪ್ರಾಯಪಟ್ಟರು.
‘ಎಲ್ಲ ವೀರಶೈವರು ಲಿಂಗಾಯತರು. ಆದರೆ ಎಲ್ಲ ಲಿಂಗಾಯತರು ವೀರಶೈವರಲ್ಲ. ಐದಾರು ವರ್ಷಗಳ ಹಿಂದೆಯಷ್ಟೇ ನಮ್ಮ ಸಂಘಟನೆ ಆರಂಭಿಸಲಾಗಿದ್ದು ಸ್ವತಂತ್ರ ಧರ್ಮಕ್ಕಾಗಿ ಹೋರಾಟ ನಿರಂತರವಾಗಿರುತ್ತದೆ. ರಾಜ್ಯದ ಎಲ್ಲ ಕಡೆಯೂ ಆದಷ್ಟು ಬೇಗನೆ ಸಾಂಸ್ಥಿಕ ಚುನಾವಣೆಗಳನ್ನು ನಡೆಸುತ್ತೇವೆ. ಜಿಲ್ಲಾಮಟ್ಟದಲ್ಲಿ ಹೊಸ ಘಟಕಗಳನ್ನು ಪ್ರಾರಂಭಿಸುತ್ತೇವೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.