ಕೊಪ್ಪಳ: ಅಜ್ಜನ ಜಾತ್ರೆ ಎಂದೇ ಖ್ಯಾತಿ ಪಡೆದ ಇಲ್ಲಿನ ಗವಿಸಿದ್ಧೇಶ್ವರ ಮಠದ ಜಾತ್ರೆಗೆ ಈ ಬಾರಿ ಎಂಟು ಲಕ್ಷ ಶೇಂಗಾ ಹೋಳಿಗೆಗಳು ಬರಲಿವೆ.
ಇದಕ್ಕಾಗಿ ಈಗಾಗಲೇ ಸಿದ್ಧತಾ ಕಾರ್ಯಗಳು ನಡೆದಿದ್ದು, ಮಠದ ಮಹಾದಾಸೋಹಕ್ಕಾಗಿ ಸಿಂಧನೂರು, ಕಾರಟಗಿ ಹಾಗೂ ಮಸ್ಕಿ ತಾಲ್ಲೂಕಿನ ಸುತ್ತಮತ್ತಲಿನ 50 ಗ್ರಾಮಗಳ ಭಕ್ತರು 15 ದಿನ ಶ್ರಮಪಟ್ಟು ಹೋಳಿಗೆ ತಯಾರಿಸಿದ್ದಾರೆ. ಮಹಾರಥೋತ್ಸವ ನಡೆಯುವ ಜ. 27ರಂದು ಮಠಕ್ಕೆ ಹೋಳಿಗೆಗಳನ್ನು ತರಲಾಗುತ್ತಿದೆ.
ತೆಪ್ಪೋತ್ಸವ: ದಕ್ಷಿಣ ಭಾರತದ ಕುಂಭಮೇಳ ಎಂದು ಕರೆಯಿಸಿಕೊಳ್ಳುವ ಈ ಜಾತ್ರೆಯಲ್ಲಿ ತೆಪ್ಪೋತ್ಸವ ವಿಶೇಷ ಆಕರ್ಷಣೆಯಾಗಿದ್ದು, ಈ ಕಾರ್ಯಕ್ರಮ ಬುಧವಾರ ನಡೆಯಲಿದೆ. ತೆಪ್ಪೋತ್ಸವಕ್ಕೆ ಭಕ್ತರು ಆಗಮಿಸಿ ಸಂಕಲ್ಪ ಮಾಡಿಕೊಂಡರೆ ಇಷ್ಟಾರ್ಥ ಸಿದ್ಧಿಸುತ್ತದೆಂಬ ಎಂಬ ನಂಬಿಕೆ ಇಲ್ಲಿನ ಜನರದ್ದು.
ಎರಡು ತೆಪ್ಪಗಳ ನಡುವೆ ಹಲಗೆಯಿಂದ ನಿರ್ಮಿಸಲಾದ ವೇದಿಕೆಯಲ್ಲಿ ಗವಿಸಿದ್ದೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ಕರೆತಂದು ಬಾಳೆ, ಕಬ್ಬು, ಮಾವಿನ ತಳಿರು ತೋರಣ ಹಾಗೂ ಹೂವಿನಿಂದ ಅಲಂಕಾರ ಮಾಡಲಾಗುತ್ತದೆ. ಕೆರೆಯಲ್ಲಿ ತೆಪ್ಪೋತ್ಸವ ಮಾಡಲಾಗುತ್ತದೆ. ಸಂಗೀತ ಕಲಾವಿದ ಅಯ್ಯಪ್ಪಯ್ಯ ಹಲಗಲಿಮಠ ಅವರಿಂದ ಕಾರ್ಯಕ್ರಮ ನಡೆಯಲಿದೆ. ಗಂಗಾ ಆರತಿ ಕೂಡ ಆಯೋಜನೆ ಮಾಡಲಾಗಿದೆ.
ಜಾಗೃತಿ ಅಭಿಯಾನ: ಬುಧವಾರ ಬೆಳಿಗ್ಗೆ 8 ಗಂಟೆಗೆ ತಾಲ್ಲೂಕು ಕ್ರೀಡಾಂಗಣದಿಂದ ‘ಸ್ವಯಂ ಉದ್ಯೋಗ’ ಹಾಗೂ ‘ವೃತ್ತಿ ಕೌಶಲ್ಯದ ಸಂಕಲ್ಪ’ ಜಾಗೃತಿಗೆ ಕಾಯಕ ದೇವೋಭವ ಜಾಗೃತಿ ಜಾಥಾ ನಡೆಯಲಿದೆ. ‘ಸ್ವಾವಲಂಬಿ ಬದುಕು, ಸಮೃದ್ಧಿ ಬದುಕು, ಸಂತೋಷದ ಬದುಕು’ಎಂಬ ಘೋಷವಾಕ್ಯದೊಂದಿಗೆ ಜಾಥಾ ಹಮ್ಮಿಕೊಳ್ಳಲಾಗಿದೆ.
ಜಿಲ್ಲಾಧಿಕಾರಿ ನಲಿನ್ ಅತುಲ್ ಜಾಥಾಕ್ಕೆ ಚಾಲನೆ ನೀಡಲಿದ್ದು, ಕ್ರೀಡಾಂಗಣದಿಂದ ಅಶೋಕ ವೃತ್ತ, ಜವಾಹರ ರಸ್ತೆ, ಗಡಿಯಾರ ಕಂಬದ ಮೂಲಕ ಗವಿಮಠದ ಜಾತ್ರಾ ಮಹಾದಾಸೋಹಕ್ಕೆ ತಲುಪಿ ಸಮಾರೋಪಗೊಳ್ಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.