ಗಂಗಾವತಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈಚೆಗೆ ಮಂಡಿಸಿದ ಬಜೆಟ್‌ನಲ್ಲಿ ಕೊಪ್ಪಳ ಜಿಲ್ಲೆಗೆ ಜಾನಪದ ಲೋಕ ಮಂಜೂರು ಮಾಡಿದ್ದು ಸ್ವಾಗತಾರ್ಹ. ಈ ಯೋಜಿತ ಜಾನಪದ ಲೋಕವನ್ನು ವಿರುಪಾಪುರಗಡ್ಡೆಯಲ್ಲಿ ಸ್ಥಾಪಿಸಬೇಕು ಎಂದು ಇತಿಹಾಸ ಸಂಶೋಧಕ ಡಾ.ಶರಣಬಸಪ್ಪ ಕೋಲ್ಕಾರ ಒತ್ತಾಯಿಸಿದ್ದಾರೆ.
ಆನೆಗೊಂದಿ ಪ್ರಾಗೈತಿಹಾಸಿಕ, ಚಾರಿತ್ರಿಕ, ಪೌರಾಣಿಕವಾಗಿ ಸಮೃದ್ಧ ಪರಂಪರೆ ಹೊಂದಿದೆ. ಜತೆಗೆ ವಿಶ್ವ ಪರಂಪರೆ ತಾಣ ಹಂಪಿಯ ಒಂದು ಭಾಗ. ಪೌರಾಣಿಕವಾಗಿ ಪಂಪಾ ಕ್ಷೇತ್ರವೆಂದು, ರಾಮಾಯಣ ಮಹಾಕಾವ್ಯದ ಕಿಷ್ಕಿಂದಾ ರಾಜ್ಯವೆಂದು ಪ್ರಸಿದ್ಧವಾಗಿದೆ. ಇಲ್ಲಿಯೇ ಹನುಮನ ಜನ್ಮವಾಗಿದ್ದು, ಅಂಜನಾದ್ರಿ ಇದೀಗ ದೇಶದ್ಯಾಂತ ಪ್ರಖ್ಯಾತಿ ಪಡೆದಿದೆ. ವಿಜಯನಗರ ಸಾಮ್ರಾಜ್ಯದ ಮಾತೃಸ್ಥಾನ ಸಹ ಆನೆಗೊಂದಿಯೇ ಆಗಿದೆ. ಕ್ಷೇತ್ರದಲ್ಲಿ ಹಿರೇಬೆಣಕಲ್ ಬೆಟ್ಟದ ಸುತ್ತಲು ಸಹ ಅನೇಕ ಪ್ರಾಚೀನ ಕಾಲದ ಮಾನವನ ಅವ ಶೇಷಗಳು, ಸಾವಿರಾರು ವರ್ಷಗಳ ಶಿಲಾಯುಗದ ಗವಿಚಿತ್ರಗಳು ಸಹ ಇವೆ ಎಂದರು.
ಜತೆಗೆ ಚಾರಿತ್ರಿಕ ಕಾಲದ ಕೋಟೆ ಕೊತ್ತಲಗಳು, ದೇವಾಲಯ, ಮಂಟಪ, ಸ್ಮಾರಕ, ಶಿಲ್ಪಗಳಿಂದ ಈ ಪ್ರದೇಶ ತುಂಬಿ ಹೋಗಿದೆ. ತುಂಗಭದ್ರಾ ನದಿ ಪರಿಸರದ ಈ ಪ್ರದೇಶ ನಿಬಿಡ ಬೆಟ್ಟಗುಡ್ಡಗಳಿಂದ ಕೂಡಿ ಪ್ರಾಕೃತಿಕವಾಗಿ ಅತ್ಯಂತ ರಮಣೀಯವಾಗಿದೆ. ಇಲ್ಲಿ ಅನೇಕ ಪ್ರಕಾರದ ಜಾನಪದ ಪರಂಪರೆ ಇನ್ನೂ ಜೀವಂತವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಆನೆಗೊಂದಿ ಭಾಗದ ವಿರುಪಾಪುರ ಗಡ್ಡೆಯಲ್ಲಿ ಜಾನಪದ ಲೋಕವನ್ನು ಸ್ಥಾಪಿಸಬೇಕು. ಇಲ್ಲಿ ಅಂದಾಜು 300 ಎಕರೆಯಷ್ಟು ಸರ್ಕಾರಿ ಜಮೀನು ಇದ್ದು, ಇದನ್ನು ಬಳಸಿ ಸುಂದರವಾದ ಜಾನಪದ ಲೋಕವನ್ನು ನಿರ್ಮಿಸಬಹುದಾಗಿದೆ ಎಂದರು.
ಇದರಿಂದ ಅಂಜನಾದ್ರಿ ಆನೆಗೊಂದಿಗೆ ಬರುವ ದೇಶ ವಿದೇಶಗಳ ಪ್ರವಾಸಿಗರಿಗೆ ನಮ್ಮ ನಾಡಿನ ಜಾನಪದ ಪರಂಪರೆ ಪರಿಚಯಿಸಲು ಅವಕಾಶವಾದಂತಾಗುತ್ತದೆ. ಈ ಬಗ್ಗೆ ಸರ್ಕಾರ ಆಸಕ್ತಿವಹಿಸಿ ಜಿಲ್ಲಾಡಳಿತ ವಿರುಪಾಪುರಗಡ್ಡೆಯಲ್ಲಿ ಜಾನಪದ ಲೋಕವನ್ನು ಸ್ಥಾಪಿಸಲು ಸರ್ಕಾರಕ್ಕೆ ಸೂಕ್ತ ಪ್ರಸ್ತಾವನೆ ಸಲ್ಲಿಸಬೇಕು. ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ, ಶಾಸಕ ಜಿ. ಜನಾರ್ದನರೆಡ್ಡಿ ಈ ಬಗ್ಗೆ ವಿಶೇಷ ಮುತುವರ್ಜಿವಹಿಸಿ, ತಕ್ಷಣ ಪ್ರಯತ್ನಶೀಲರಾಗಬೇಕೆಂದು ಒತ್ತಾಯಿಸಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.