ಕುಷ್ಟಗಿ (ಕೊಪ್ಪಳ ಜಿಲ್ಲೆ): ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ತಾವರಗೇರಾ ಪಟ್ಟಣದ ಶಶಿಧರ ಸ್ವಾಮಿ ವಿದ್ಯಾನಿಕೇತನ ಜೂನಿಯರ್ ಕಾಲೇಜಿನಲ್ಲಿ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಕೇಂದ್ರದಲ್ಲಿ ಸಾಮೂಹಿಕ ನಕಲಿಗೆ ಶಿಕ್ಷಕರು ಹಾಗೂ ಸಾರ್ವಜನಿಕರು ಸಹಕರಿಸುತ್ತಿದ್ದು ಸೋಮವಾರ ನಡೆದ ಗಣಿತ ವಿಷಯದ ಪರೀಕ್ಷೆಯಲ್ಲಿ ಕಂಡುಬಂದಿತು.
ಪರೀಕ್ಷಾ ಕೇಂದ್ರದ ಪಕ್ಕದಲ್ಲಿ ಜೆರಾಕ್ಸ್ ಅಂಗಡಿ ಇದ್ದು ಅದು ಪ್ರೌಢಶಾಲಾ ಶಿಕ್ಷಕರಿಗೆ ಸೇರಿದ್ದು ಎನ್ನಲಾಗಿದೆ. ಒಳಗಡೆ ಬಾಗಿಲು ಮುಚ್ಚಿಕೊಂಡು ಗಣಿತ ವಿಷಯ ಶಿಕ್ಷಕರು ಉತ್ತರ ಬಿಡಿಸುತ್ತಿದ್ದರು.
ಪರೀಕ್ಷೆಗಳನ್ನು ಕಟ್ಟುನಿಟ್ಟಾಗಿ ಜರಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಹೇಳಿದ್ದರಾದರೂ ತಾವರಗೇರಾ, ದೋಟಿಹಾಳ, ಕುಷ್ಟಗಿ ಸೇರಿದಂತೆ ಅನೇಕ ಪರೀಕ್ಷಾ ಕೇಂದ್ರಗಳಲ್ಲಿ ಅರಾಜಕತೆ ತಾಂಡವಾಡುತ್ತಿದ್ದು ಕಂಡುಬಂದಿತು.
ಶಿಕ್ಷಕರು ಉತ್ತರ ಬರೆದು ನಕಲು ಮಾಡಿದ ಗಣಿತ ಪ್ರಶ್ನೆಗಳ ಉತ್ತರದ ಪ್ರತಿಗಳು ಪ್ರಜಾವಾಣಿಗೆ ಲಭ್ಯವಾಗಿವೆ.
ಯಾವ ಅಳುಕು ಅಂಜಿಕೆ ಇಲ್ಲದೆ ಶಿಕ್ಷಕರೇ ಗಣಿತ ಪ್ರಶ್ನೆ ಪತ್ರಿಕೆಗೆ ಸಂಬಂಧಿಸಿದ ಪ್ರತಿಯೊಂದು ಉತ್ತರಗಳನ್ನು ಬಿಳಿ ಹಾಳಿಯ ಮೇಲೆ ಬರೆದು ಪರೀಕ್ಷಾ ಕೇಂದ್ರದ ಒಳಗೆ ಕಳುಹಿಸುತ್ತಿದ್ದರು.
ಪರೀಕ್ಷಾ ಕೇಂದ್ರದ ಸುತ್ತ ನಿಷೇಧಾಜ್ಞೆ ನಡುವೆಯೂ ಸಾರ್ವಜನಿಕರು ಗುಂಪುಗೂಡಿದ್ದು ಜನರನ್ನು ನಿಯಂತ್ರಿಸಲು ಪೊಲೀಸರೂ ಇರಲಿಲ್ಲ
ಎಂದು ಸಾರ್ವಜನಿಕರು ದೂರಿದರು.
ಪರೀಕ್ಷಾ ಕೇಂದ್ರದಲ್ಲಿ ಯಾವ ಕಟ್ಟುನಿಟ್ಟಿನ ಕ್ರಮಗಳು ಇರಲಿಲ್ಲ. ಹೊರಗಡೆ ಇರುವ ಜೆರಾಕ್ಸ್ ಅಂಗಡಿಗಳಲ್ಲಿ ಉತ್ತರ ಪ್ರತಿಗಳನ್ನು ನಕಲು ಮಾಡಿ ಪರೀಕ್ಷಾ ಕೇಂದ್ರದ ಒಳಗೆ ಕಳುಹಿಸುವಷ್ಟರ ಮಟ್ಟಿಗೆ ಪರೀಕ್ಷಾ ಕೇಂದ್ರಗಳಲ್ಲಿ ಅವ್ಯವಸ್ಥೆ ಕಂಡು ಬಂದಿತು.
ಈ ಕುರಿತು ಪ್ರತಿಕ್ರಿಯಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಂದ್ರ ಕಾಂಬಳೆ ಪರೀಕ್ಷೆಯನ್ನು ಕಟ್ಟು ನಿಟ್ಟಾಗಿ ನಡೆಸುವ ನಿಟ್ಟಿನಲ್ಲಿ ಕೇಂದ್ರದ ಸಿಬ್ಬಂದಿಗೆ ತಾಕಿದ್ದು ಮಾಡಲಾಗಿದೆ. ತಾವರಗೇರಾ ಕೇಂದ್ರದಲ್ಲಿ ಸಾಮೂಹಿಕ ನಕಲು ಪ್ರಕರಣದ ಬಗ್ಗೆ ಪರಿಶೀಲಿಸುವುದಾಗಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.