ಜುನಾಸಾಬ ವಡ್ಡಟ್ಟಿ
ಅಳವಂಡಿ: ಹಾರ್ಡ್‌ವೇರ್ ಅಂಗಡಿಯ ಕೆಲಸಕ್ಕೆ ವಿದಾಯ ಹೇಳಿ ಕೃಷಿ ಚಟುವಟಿಕೆಯಲ್ಲಿ ನುಗ್ಗೆ ಬೆಳೆದಿರುವ ಅಳವಂಡಿ ಸಮೀಪದ ಹಿರೇಸಿಂದೋಗಿಯ ಗ್ರಾಮದ ರೈತ ಯಂಕರಡ್ಡಿ ಭರ್ಜರಿ ಫಸಲು ಪಡೆದಿದ್ದಾರೆ. ಇದಕ್ಕೆ ನರೇಗಾ ನೆರವು ಪಡೆದಿದ್ದಾರೆ.
ಯಂಕರಡ್ಡಿ ಒಂದೂವರೆ ದಶಕದಿಂದ ಕೊಪ್ಪಳದಲ್ಲಿ ಹಾರ್ಡ್‌ವೇರ್ ಅಂಗಡಿ ನಡೆಸಿಕೊಂಡು ಬಂದಿದ್ದು, ಇದರಿಂದ ಬಂದ ಆದಾಯವೇ ಬದುಕಿಗೆ ಆಸರೆಯಾಗಿತ್ತು. ವರ್ಷಗಳು ಉರುಳಿದಂತೆ ವ್ಯಾಪಾರ ಕಡಿಮೆಯಾಗಿ ಆದಾಯ ಕ್ಷೀಣಿಸಿತು. ಸಾಕಷ್ಟು ಬಂಡವಾಳ ಹೂಡಿ ಖರೀದಿಸಿದ ಸಾಮಗ್ರಿಗಳು ಮಾರಾಟವಾಗದ್ದರಿಂದ ಸಾಲದ ಬರೆ ಎಳೆಯಿತು.
ಯಂಕರಡ್ಡಿ ಯೋಚನೆ ವ್ಯವಸಾಯ ಕಡೆಗೆ ಹೆಚ್ಚಿತು. ತೋಟಗಾರಿಕೆ ಬೆಳೆಗಳ ಮೂಲಕ ಜೀವನ ನಡೆಸಬೇಕೆಂಬ ಹಂಬಲ ಹೊಂದಿ ತೋಟಗಾರಿಕೆ ಬೆಳೆಯ ಜೊತೆಗೆ ಇತರೇ ಬೆಳೆ ಬೆಳೆದರೆ ಲಾಭದಾಯಕ ಎನ್ನುವ ಮಹತ್ವಕಾಂಕ್ಷಿ ಉಳ್ಳವರು. ನೀರಾವರಿ ಮೂಲಕ ಸೂರ್ಯಕಾಂತಿ, ಮೆಕ್ಕೆಜೋಳ, ಶೆಂಗಾ ಇತ್ಯಾದಿಗಳನ್ನು ಬೆಳೆಯುವದರ ಜೊತೆಗೆ ನುಗ್ಗೆ ಬೆಳೆಯಬೇಕೆಂಬ ಕೂತುಹಲ ಹೊಂದಿ ಯಂಕರಡ್ಡಿ ನರೇಗಾ ಕೆಲಸ ಕೈ ಹಿಡಿಯಿತು.
ಬಾಗಲಕೊಟೆ ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ ಮಾಹಿತಿ ಪಡೆದು ಅಲ್ಲಿಯೇ ಲಭ್ಯವಿದ್ದ ಭಾಗ್ಯ ಎಂಬ ನುಗ್ಗೆ ಬೀಜಗಳನ್ನು ₹1,000ಗೆ ಅರ್ಧ ಕೆಜಿಯಷ್ಟು ಖರೀದಿಸಿ ತಮ್ಮ ಹೊಲದಲ್ಲಿ ನಾಟಿ ಮಾಡಿದರು. ಇವರ ಒಂದು ಎಕರೆ ಜಮೀನಿನಲ್ಲಿ ನುಗ್ಗೆ ಜೊತೆಗೆ ಅಂತರಬೇಸಾಯದ ಮೂಲಕ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದಾರೆ.
ಜಮೀನಿನಲ್ಲಿ ಬರುವ ಕಳೆ, ಗೊಬ್ಬರ ಹಾಕುವದು, ಕಟಾವು ಇತ್ಯಾದಿಗಳಿಗೆ ಹೆಗಲು ಕೊಟ್ಟು ನಿಲ್ಲುವದರಿಂದ ಹೆಚ್ಚಿನ ಕಾಳಜಿ ವಹಿಸುತ್ತಾ ನುಗ್ಗೆ ಬೆಳೆ ನಿರೀಕ್ಷೆಗೂ ಮೀರಿ ಫಸಲು ಬಂದಿದೆ. ವರ್ಷಕೊಮ್ಮೆ 25 ಟನ್ ಫಸಲು ಕಟಾವು ಮಾಡಲಾಗುತ್ತಿದೆ. ಈಗ ಪ್ರತಿ ಟನ್‌ಗೆ ₹5000ರಂತೆ ಬೆಲೆಯಿದೆ. ಫಸಲು ಬೆಳೆಯಲು ಮಾಡಿದ ಖರ್ಚು ತೆಗೆದರೂ ಉತ್ತಮ ಆದಾಯ ಲಭಿಸುತ್ತಿದೆ.
ಬಾಡಿಗೆ ಆಧಾರದ ಮೇಲೆ ಟ್ರಾಕ್ಟರ್ ಬಳಕೆ, ಎತ್ತುಗಳನ್ನು ಮಾಡಿಕೊಂಡು ವ್ಯವಸಾಯ ಮಾಡುತ್ತಿದ್ದಾರೆ. ನುಗ್ಗೆ ಬೆಳೆದು ಗಳಿಸಿದ ಆದಾಯದಿಂದ ಇಬ್ಬರು ಹೆಣ್ಣು ಮಕ್ಕಳ ಮದುವೆ ಖರ್ಚು ಭರಿಸಿದ್ದಾರೆ. ಮಗನಿಗೆ ಉತ್ತಮ ಶಿಕ್ಷಣ ನೀಡಿದ್ದೇನೆ ಎನ್ನುತ್ತಾರೆ 62 ವರ್ಷದಲ್ಲಿಯೂ ತರುಣನಂಥ ಉತ್ಸಾಹ ಹೊಂದಿರುವ ಯಂಕರಡ್ಡಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.