ADVERTISEMENT

ಚೆಂಡು ಹೂವಿನ ಕೃಷಿ: ಆರ್ಥಿಕತೆಗೆ ಆಧಾರ

ಮಂಜುನಾಥ ಅಂಗಡಿ
Published 28 ಅಕ್ಟೋಬರ್ 2024, 4:30 IST
Last Updated 28 ಅಕ್ಟೋಬರ್ 2024, 4:30 IST
ಭರ್ಜರಿ ಅರಳಿದ ಚೆಂಡು ಹೂವು
ಭರ್ಜರಿ ಅರಳಿದ ಚೆಂಡು ಹೂವು   

ಕುಕನೂರು: ಪಟ್ಟಣದ ಖಾಜಾಸಾಬ್ ರಾಜೂರು ಎಂಬ ರೈತ ಸುಮಾರು 6 ವರ್ಷಗಳಿಂದ ಚೆಂಡು ಹೂವು ಕೃಷಿಯಲ್ಲಿ ತೊಡಗಿದ್ದು, ಆರ್ಥಿಕವಾಗಿ ಅಭಿವೃದ್ಧಿ ಸಾಧಿಸಿದ್ದಾರೆ.

ಪಟ್ಟಣದ ಹೊರವಲಯದ ಸರ್ಕಾರಿ ಪದವಿಪೂರ್ವ ಕಾಲೇಜಿನ ಬಳಿ ಎರಡು ಎಕರೆ ಜಮೀನಿನಲ್ಲಿ ಆರು ವರ್ಷಗಳಿಂದ ಚೆಂಡು ಹೂವು ಬೆಳೆಯುತ್ತಿದ್ದಾರೆ. ಖಾಜಾಸಾಬ್ ಅವರು ತಾವು ಬೆಳೆದ ಚೆಂಡು ಹೂವುಗಳನ್ನು ಖುದ್ದಾಗಿ ಮಾರಾಟ ಮಾಡುವ ಮೂಲಕ ಉತ್ತಮ ಲಾಭ ಗಳಿಸುತ್ತಿದ್ದಾರೆ. ಈ ವರ್ಷ ಮುಂಗಾರು ಮಳೆ ಕೊರತೆಯಿಂದ ಜೋಳ, ತೊಗರಿ, ಹತ್ತಿ ಬೆಳೆಗಳು ನಿರೀಕ್ಷಿತವಾಗಿ ಬೆಳೆಯದೆ ನಷ್ಟ ಅನುಭವಿಸಿದ್ದ ಖಾಜಾಸಾಬ್ ಅವರಿಗೆ ಚೆಂಡು ಹೂವು ಕೈಹಿಡಿದಿದೆ.

90 ದಿನಗಳ ಬೆಳೆಯಾದ ಈ ಚೆಂಡು ಹೂವು ಬೀಜವನ್ನು ಹಾಕುವ ಮೂಲಕ ದಸರಾ ಹಾಗೂ ದೀಪಾವಳಿ ಹಬ್ಬಕ್ಕೆ ಬರುವಂತೆ ಬೆಳೆ ಬೆಳೆಯುತ್ತಾರೆ. ಜಮೀನಿನ ಸಿದ್ಧತೆ, ಜಿಗಿ ಕೀಟದ ಬಾಧೆಯನ್ನು ತಡೆಯಲು ಹಾಗೂ ವಿಶೇಷವಾಗಿ ಚೆಂಡು ಹೂಗಳ ಬಣ್ಣ ಬದಲಾಗದಂತೆ ತಡೆಯಲು ತಮಿಳುನಾಡಿನಿಂದ ಕೀಟನಾಶಕಗಳನ್ನು ತಂದು ಸಿಂಪಡಣೆ ಮಾಡುತ್ತಿದ್ದಾರೆ.

ADVERTISEMENT

ಇದುವರೆಗೂ ಚೆಂಡು ಹೂವು ಕೃಷಿಗೆ ₹40 ಸಾವಿರ ದವರೆಗೆ ಖರ್ಚು ಮಾಡಿದ್ದು, ಈ ವರ್ಷ ಎರಡು ಎಕರೆಯಲ್ಲಿ ಎರಡು ಟನ್‌ವರೆಗೆ ಬೆಳೆಯ ಇಳುವರಿಯ ನಿರೀಕ್ಷೆ ಇದೆ ಎಂದು ಖಾಜಾಸಾಬ್ ಹೇಳುತ್ತಾರೆ.

ಪ್ರಸ್ತುತ ನಾಗರಾಜ ಅವರ ಜಮೀನಿನ ಗಿಡಗಳಲ್ಲಿ ಸಮೃದ್ಧವಾಗಿ ಹೂಗಳು ಬಿಟ್ಟಿವೆ. ಜಮೀನಿನ ತುಂಬಾ ಕಣ್ಣುಹಾಯಿಸಿದಲ್ಲೆಲ್ಲ ಕೇಸರಿ ಹಾಗೂ ಹಳದಿ ಬಣ್ಣದ ಹೂವುಗಳೇ ಆಕರ್ಷಕವಾಗಿ ಕಾಣುತ್ತಿವೆ.

ಮಾರಾಟ: ಚೆಂಡು ಹೂವುಗಳ ಮಾರಾಟಕ್ಕಾಗಿ ದೂರದ ಚಿತ್ರದುರ್ಗ, ರಾಣೆಬೆನ್ನೂರು, ದಾವಣಗೆರೆ, ಕೆ.ಆರ್. ಪುರಂ ಮಾರುಕಟ್ಟೆಗಳನ್ನು ಸ್ಥಳೀಯ ರೈತರು ಹೆಚ್ಚಾಗಿ ನೆಚ್ಚಿಕೊಳ್ಳುತ್ತಾರೆ. ಸಾಗಣಿಕೆ ವೆಚ್ಚ ಅಧಿಕವಾಗುವ ಕಾರಣ ಸ್ಥಳಿಯವಾಗಿ ಮಾರುಕಟ್ಟೆಯನ್ನು ಸೃಷ್ಟಿಸಿಕೊಳ್ಳಲು ಖಾಜಾಸಾಬ್ ಮುಂದಾಗಿದ್ದಾರೆ.

ದಸರಾ ಹಬ್ಬದ ಸಂದರ್ಭದಲ್ಲಿ ಎರಡು ದಿನಗಳ ಮಟ್ಟಿಗೆ ಪಟ್ಟಣದ ವೀರಭದ್ರಪ್ಪ ವೃತ್ತದಲ್ಲಿ ತಾತ್ಕಾಲಿಕ ಮಾರಾಟ ಮಳಿಗೆ ತೆರೆದು ಸುಮಾರು ಎರಡು ಕ್ವಿಂಟಲ್ ಮೊತ್ತದ ಚೆಂಡು ಹೂಗಳನ್ನು ಮಾರಾಟ ಮಾಡಿ ಉತ್ತಮ ಲಾಭಾಂಶ ಗಳಿಸಿದ್ದಾರೆ. ಮುಂದಿನ ಎರಡು ದಿನಗಳ ದೀಪಾವಳಿ ಹಬ್ಬಕ್ಕೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಚೆಂಡು ಹೂಗಳು ಮಾರಾಟವಾಗುವ ಭರವಸೆಯನ್ನು ಅವರು ಹೊಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.