ಕುಕನೂರು: ತಾಲ್ಲೂಕಿನ ನೆಲಜೇರಿ ಗ್ರಾಮದ ಶೇಖರಗೌಡ ಪಾಟೀಲ್ ಅವರು ತಮ್ಮ 1 ಎಕರೆ ಜಮೀನಿನಲ್ಲಿ ಪಪ್ಪಾಯ ಬೆಳೆ ಬೆಳೆದು ಲಕ್ಷಾಂತರ ರೂಪಾಯಿ ಆದಾಯ ಗಳಿಸಿದ್ದಾರೆ.
ಕೇವಲ 1 ಎಕರೆ ಜಮೀನಿನಲ್ಲಿ 8 ಟನ್ ಇಳುವರಿ ಪಡೆದು ₹ 2.40 ಲಕ್ಷ ಆದಾಯ ಗಳಿಸಿದ್ದಾರೆ. ಪಾರಂಪರಿಕವಾಗಿ ಬೆಳೆಯುವ ವಾರ್ಷಿಕ ಬೆಳೆಗಳ ಬದಲಾಗಿ ಬಹುವಾರ್ಷಿಕ ಬೆಳೆಗಳನ್ನು ಬೆಳೆದು ಕಡಿಮೆ ಖರ್ಚಿನಲ್ಲಿ ಪಪ್ಪಾಯ ಬೆಳೆದು ಹೆಚ್ಚಿನ ಆದಾಯ ಗಳಿಸಿ ಮಾದರಿ ಕೃಷಿಕರಾಗಿದ್ದಾರೆ.
ಸಾಮಾನ್ಯವಾಗಿ ಎಲ್ಲಾ ಕೃಷಿಕರು ತೋಟಗಾರಿಕೆ ಸೌಲಭ್ಯವಿದ್ದರೂ ವಾರ್ಷಿಕ ಬೆಳೆಗಳಾದ ಮೆಕ್ಕೆಜೋಳ, ಸೂರ್ಯಕಾಂತಿ, ಕಬ್ಬು, ತೊಗರಿ, ಅಲಸಂದೆ, ಶೇಂಗಾ, ಗೋಧಿ ಸೇರಿ ತರಕಾರಿ ಬೆಳೆಗಳನ್ನು ಬೆಳೆಯುತ್ತಾರೆ. ಆದರೆ ವಾರ್ಷಿಕ ಬೆಳೆ ಪದ್ದತಿಯಲ್ಲಿ ಬಹಳಷ್ಟು ಶ್ರಮದಾಯಕ ಕೆಲಸ ಇರುತ್ತದೆ. ಅದಕ್ಕೆ ಹೆಚ್ಚಿನ ಕೂಲಿಕಾರರ ಅವಶ್ಯಕತೆ ಇರುತ್ತದೆ. ಉಳುಮೆ, ಬಿತ್ತುವುದು, ಕಳೆ ತೆಗೆಯುವುದು, ಕೊಯ್ಲು, ರಾಶಿ ಹಂತಗಳು ಸೇರಿದಂತೆ ಪ್ರತಿ ಹಂತದಲ್ಲಿ ಕೂಲಿಕಾರರ ಸಮಸ್ಯೆ ಹೆಚ್ಚು ಇರುತ್ತದೆ. ಅದಕ್ಕಾಗಿ ಬಹು ವಾರ್ಷಿಕ ಕೃಷಿ ಮಾಡುವುದು ಉತ್ತಮ ಎನ್ನುವುದು ಕೃಷಿಕ ಶೇಖರಗೌಡ ಪಾಟೀಲ್ ಅವರ ಅಭಿಪ್ರಾಯ.
ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಪಪ್ಪಾಯ ಬೆಳೆಗೆ ₹ 68,879 ಸಹಾಯಧನ ದೊರೆತಿದೆ. ಪಪ್ಪಾಯ ಬೆಳೆಯಲು ₹ 80 ಸಾವಿರ ಖರ್ಚು ಮಾಡಿದ್ದು, 2.40 ಲಕ್ಷ ಆದಾಯ ಬಂದಿದೆ ಎಂದಿದೆ ರೈತ ಶೇಖರಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.
****
ಪಾರಂಪರಿಕ ವಾರ್ಷಿಕ ಬೆಳೆ ಬದಲು ನೀರಾವರಿ ಸೌಲಭ್ಯ ಹೊಂದಿರುವ ರೈತರು ತಮ್ಮ ಜಮೀನಿನಲ್ಲಿ ಬಹುವಾರ್ಷಿಕ ಬೆಳೆ ಬೆಳೆಯುವುದು ಹೆಚ್ಚು ಲಾಭದಾಯಕ.
-ಶೇಖರಗೌಡ ಮಾಲಿಪಾಟೀಲ್, ಕೃಷಿಕ
****
ಗ್ರಾಮೀಣ ಪ್ರದೇಶದ ಮಹತ್ವಾಕಾಂಕ್ಷಿ ನರೇಗಾ ಯೋಜನೆಯಡಿ ತೋಟಗಾರಿಕೆ ಬೆಳೆ ಬೆಳೆಯಲು ಅವಕಾಶವಿದೆ. ಶೇಖರಗೌಡ ಮಾಲಿಪಾಟೀಲ್ ಪಪ್ಪಾಯ ಬೆಳೆದು ಯಶಸ್ಸು ಕಂಡಿದ್ದಾರೆ.
-ಸಂತೋಷ ಬಿರಾದಾರ ಪಾಟೀಲ್, ತಾಲ್ಲೂಕು ಪಂಚಾಯಿತಿ ಇಒ, ಕುಕನೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.