ಮಂಜುನಾಥ ಎಸ್. ಅಂಗಡಿ
ಕುಕನೂರು: ಮಳೆಗಾಲವೇ ಇರಲಿ, ಭೀಕರ ಬರಗಾಲವೇ ಇರಲಿ ರೈತ ಮಾತ್ರ ಯಾವುದಕ್ಕೂ ಎದೆಗುಂದದೆ ತನ್ನ ಕೆಲಸ ತಾನು ಮಾಡುತ್ತಲೇ ಇರುತ್ತಾನೆ. ಅಂತೆಯೇ ಈ ವರ್ಷವೂ ಸಹ ರೈತರು ಮಾಗಿ ಉಳುಮೆ ಮುಗಿಸಿ ಬಿತ್ತನೆಗಾಗಿ ಕಾದು ಕುಳಿತ್ತಿದ್ದು ಮುಂಗಾರು ಮಳೆಗಾಗಿ ಮೋಡದತ್ತ ಮುಖ ಮಾಡಿದ್ದಾರೆ.
ತಾಲ್ಲೂಕಿನ ಬಹುತೇಕ ರೈತರು ಮಳೆಯನ್ನೇ ಆಶ್ರಯಿಸಿದ್ದಾರೆ. ಈಗಾಗಲೇ ರೈತರು ಮಾಗಿ ಉಳುಮೆಯಲ್ಲಿ ನಿರತರಾಗಿದ್ದು ಭೂಮಿಯನ್ನು ರಂಟೆ ಹೊಡೆದು ಹರಗಿ ಬಿತ್ತನೆಗಾಗಿ ಸಿದ್ಧಗೊಳಿಸಿದ್ದಾರೆ. ತಾಲ್ಲೂಕಿನಲ್ಲಿ ಕೆಲವೊಂದು ಗ್ರಾಮಗಳಲ್ಲಿ ಇನ್ನೂ ಭೂಮಿಯನ್ನ ಹದಗೊಳಿಸದೆ ಮಳೆಗಾಗಿ ಕಾಯುತ್ತಿದ್ದಾರೆ.
ಈ ವರ್ಷ ಕುಕನೂರು ತಾಲ್ಲೂಕಿನಲ್ಲಿ, 26 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಬೆಳೆಯಲಾಗುವುದು ಎಂದು ತಾಲ್ಲೂಕ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ. ಹೆಸರು 2,341 ಹೆಕ್ಟೇರ್ ಪ್ರದೇಶದಲ್ಲಿ, ಮೆಕ್ಕೆಜೋಳ 12,500 ಹೆಕ್ಟೇರ್ ಪ್ರದೇಶದಲ್ಲಿ, ಸಜ್ಜಿ 4,000 ಹೆಕ್ಟೇರ್ ಪ್ರದೇಶದಲ್ಲಿ, ಸೂರ್ಯಕಾಂತಿ 1700 ಹೆಕ್ಟೇರ್ ಪ್ರದೇಶದಲ್ಲಿ, ಶೇಂಗಾ 2,400 ಹೆಕ್ಟೇರ್ ಪ್ರದೇಶದಲ್ಲಿ, ತೊಗರಿ -600 ಹೆಕ್ಟೇರ್ ಪ್ರದೇಶದಲ್ಲಿ, ಬೆಳೆಯಲಾಗುವುದು. ಇದಕ್ಕೆ ಸಂಬಂಧಪಟ್ಟ ಬೀಜಗಳು ರೈತ ಸಂಪರ್ಕ ಕೇಂದ್ರದಲ್ಲಿ ಮಾರಾಟಕ್ಕೆ ಸಿದ್ಧವಿದೆ.
ಜೊತೆಗೆ ತಾಲ್ಲೂಕಿನಲ್ಲಿ ಗೊಬ್ಬರ ಸಹ ದಾಸ್ತಾನು ಇದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಾಣೇಶ್ ಹಾದಿಮನಿ ಪ್ರಜಾವಾಣಿಗೆ ತಿಳಿಸಿದ್ದು ರೈತರು ಕಡಿಮೆ ಬೆಲೆಯಲ್ಲಿ ದೊರೆಯತ್ತದೆ ಎಂದು ಇಲಾಖೆಯಿಂದ ಪರವಾನಿಗಿ ಪಡೆಯದ ಕಂಪನಿಯ ಗೊಬ್ಬರ ಹಾಗೂ ಬೀಜ ಖರೀದಿಸಬಾರದು ಎಂದು ಮನವಿ ಮಾಡಿದ್ದಾರೆ.
ರೈತರು ಹೆಸರು, ಮೆಕ್ಕೆಜೋಳ ಬೀಜವನ್ನೂ ಖರೀದಿಸಿ ಇಟ್ಟುಕೊಂಡಿದ್ದು ಮಳೆ ಬಿದ್ದ ತಕ್ಷಣ ಬಿತ್ತನೆ ಕಾರ್ಯ ಆರಂಭಿಸಲಿದ್ದಾರೆ. ರೈತರು ಹೆಚ್ಚಾಗಿ ಮೆಕ್ಕೆಜೋಳ ಬೀಜವನ್ನೇ ಕೇಳುತ್ತಿದ್ದು, ಪೇಟೆಯಲ್ಲಿ ಇದರ ಬೆಲೆ ದುಪ್ಪಾಟ್ಟಾಗಿದೆ. ಆದರೂ ಕೂಡ ರೈತರು ಮೆಕ್ಕೆಜೋಳ ಬೀಜದ ಖರೀದಿ ನಿಲ್ಲಿಸಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.