ಕೊಪ್ಪಳ: ಯಲಬುರ್ಗಾ ತಾಲ್ಲೂಕಿನ ಜಮೀನುಗಳಲ್ಲಿ ಸ್ವಚ್ಛಂದವಾಗಿ ಓಡಾಡುತ್ತಿದ್ದ ಕೃಷ್ಣಮೃಗಗಳನ್ನು ಮಾಂಸ ಮತ್ತು ಚರ್ಮಕ್ಕಾಗಿ ಬೇಟಿಯಾಡುತ್ತಿದ್ದು, ಅಕ್ರಮ ಬೇಟೆಗಾರರ ಜಾಲವನ್ನು ಮಂಗಳೂರಿನ ಅರಣ್ಯ ಸಂಚಾರಿ ದಳದ ಪೊಲೀಸರು ಬೇಧಿಸಿ, ಆರೋಪಿಗಳನ್ನು ಬಂಧಿಸಿದ್ದಾರೆ.
ಸತತ 3 ವರ್ಷದ ಕಾರ್ಯಾಚರಣೆ ನಡೆಸಿದ ಅರಣ್ಯದಳಕ್ಕೆ ಯಶಸ್ಸು ದೊರೆತಿದೆ. ಅಕ್ರಮ ಬೇಟೆಗಾರರಿಂದ 20 ಕೃಷ್ಷಮೃಗಗಳ ಚರ್ಮ, 2 ಕೊಂಬು ವಶಪಡಿಸಿಕೊಂಡು 7 ಜನರನ್ನು ಬಂಧಿಸಲಾಗಿದೆ. ಒಬ್ಬ ಪರಾರಿಯಾಗಿದ್ದು, ಪತ್ತೆಗೆ ತಂಡ ರಚನೆ ಮಾಡಲಾಗಿದೆ.
ಅಕ್ರಮದ ಹಿನ್ನೆಲೆ: ದಕ್ಷಿಣ ಕನ್ನಡದ ಕಾರ್ಕಳಕ್ಕೆ 2018ರಲ್ಲಿ ದುಡಿಯಲು ಹೋಗಿದ್ದ ಯಲಬುರ್ಗಾ ತಾಲ್ಲೂಕಿನ ಮರಡಿ-ಹುಣಸಿಹಾಳ ತಾಂಡಾದ ಸಂತೋಷ ಎಂಬ ವ್ಯಕ್ತಿಗೆ ವನ್ಯಜೀವಿ ಅಕ್ರಮ ಮಾರಾಟದ ಜಾಲದ ಸಂಪರ್ಕ ಬಂದಿದೆ. ಅಲ್ಲದೇ ಜಿಂಕೆ ಚರ್ಮಕ್ಕೆ ಬೇಡಿಕೆ ಇರುವುದೂ ಸಹ ತಿಳಿದುಬಂದಿದೆ.
ಯಲಬುರ್ಗಾ ತಾಲ್ಲೂಕಿನಲ್ಲಿ 5 ಸಾವಿರಕ್ಕೂ ಹೆಚ್ಚು ಜಿಂಕೆ, ಕೃಷ್ಣಮೃಗಗಳು ಇವೆ. ತಂಡದೊಂದಿಗೆ ಇಲ್ಲಿಗೆ ಬಂದು ಜಿಂಕೆಯೊಂದನ್ನು ಕೊಂದು ಸಾಗಿಸುತ್ತಿರುವಾಗ ಪೊಲೀಸರು ಬಂಧಿಸಿದ್ದಾರೆ. ಆತನ ಮೊಬೈಲ್ ವಶಪಡಿಸಿಕೊಂಡು ಸತತ ಮೂರು ವರ್ಷದ ನಿಗಾ ನಂತರ ಸೋಮವಾರ 'ದೊಡ್ಡ ಬೇಟೆಯನ್ನೇ' ಅರಣ್ಯ ಇಲಾಖೆ ಬಲಿಗೆಡವಿದೆ.
ಮೊಬೈಲ್ ಜಾಡು ಹಿಡಿದ ಇಲಾಖೆಯ ಅಧಿಕಾರಿಗಳು ಗ್ರಾಹಕರಂತೆ ಬಂದು, ಒಂದು ಕೃಷ್ಣಮೃಗ ಚರ್ಮಕ್ಕೆ ₹ 50 ಸಾವಿರ ನೀಡುವುದಾಗಿ ಹೇಳುವ ನೆಪದಲ್ಲಿ ಚರ್ಮವನ್ನು ಮಾರಾಟಮಾಡುವಾಗ ಆರೋಪಿಗಳನ್ನು ಬಂಧಿಸಿದ್ದಾರೆ.
ಕೊಪ್ಪಳ ಅರಣ್ಯ ವಲಯ ಬಳ್ಳಾರಿ ಅರಣ್ಯ ವಿಭಾಗದ ವ್ಯಾಪ್ತಿಗೆ ಬರುತ್ತದೆ. ಕುಷ್ಟಗಿ-ಕೊಪ್ಪಳ ರಾಜ್ಯ ಹೆದ್ದಾರಿಯ ಮುರಡಿ ಕ್ರಾಸ್ ಹತ್ತಿರ ಕೃಷ್ಣಮೃಗಗಳ ಚರ್ಮಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿತರನ್ನು ಬಂಧಿಸಲಾಗಿದೆ.
ಬಂಧಿತರನ್ನು ಹುಣಸಿಹಾಳ ತಾಂಡಾದ ತುಗ್ಗೆಪ್ಪ ಮಾಳಿ, ಶರಣಪ್ಪ ಚೌವಾಣ, ಮಲ್ಲಯ್ಯ, ಶಿವಯ್ಯ ಹಿರೇಮಠ, ಸಂಗಪ್ಪ, ಹನಮಂತ ಕಟ್ಟಿಮನಿ ಎನ್ನಲಾಗಿದೆ. ತಂಡದ ಇನ್ನೊಬ್ಬ ಪರಾರಿಯಾಗಿದ್ದಾನೆ.
ಬಂಧಿತರಿಂದ ವಶಪಡಿಸಿಕೊಂಡ ವಸ್ತುಗಳನ್ನು ಮುನಿರಾಬಾದ್ ಅರಣ್ಯ ಸಂಗ್ರಹಗಾರದಲ್ಲಿ ಇರಿಸಿದ್ದು, ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.