ADVERTISEMENT

ಗಂಗಾವತಿ | ವಕೀಲರ ವಿರುದ್ಧ ಎಫ್ಐಆರ್: ಎಸ್ಐ ಅಮಾನತು ಮಾಡಿ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2024, 15:40 IST
Last Updated 21 ಫೆಬ್ರುವರಿ 2024, 15:40 IST
ರಾಮನಗರ ಜಿಲ್ಲಾ ನ್ಯಾಯಾಲಯದ ವಕೀಲರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ ಐಜೂರು ಪೊಲೀಸ್ ಠಾಣೆ ಎಸ್ಐ ತನ್ವೀರ್ ಹುಸೇನ್ ಅವರ ಅಮಾನತಿಗೆ ಒತ್ತಾಯಿಸಿ ಮಂಗಳವಾರ ತಾಲ್ಲೂಕು ವಕೀಲರ ಸಂಘದ ಸದಸ್ಯರು ಗಂಗಾವತಿ ತಾಲ್ಲೂಕು ನ್ಯಾಯಾಲಯ ಸಂಕೀರ್ಣ ಆವರಣದಲ್ಲಿ ಪ್ರತಿಭಟನೆ ನಡೆಸಿದರು
ರಾಮನಗರ ಜಿಲ್ಲಾ ನ್ಯಾಯಾಲಯದ ವಕೀಲರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ ಐಜೂರು ಪೊಲೀಸ್ ಠಾಣೆ ಎಸ್ಐ ತನ್ವೀರ್ ಹುಸೇನ್ ಅವರ ಅಮಾನತಿಗೆ ಒತ್ತಾಯಿಸಿ ಮಂಗಳವಾರ ತಾಲ್ಲೂಕು ವಕೀಲರ ಸಂಘದ ಸದಸ್ಯರು ಗಂಗಾವತಿ ತಾಲ್ಲೂಕು ನ್ಯಾಯಾಲಯ ಸಂಕೀರ್ಣ ಆವರಣದಲ್ಲಿ ಪ್ರತಿಭಟನೆ ನಡೆಸಿದರು   

ಗಂಗಾವತಿ: ರಾಮನಗರ ಜಿಲ್ಲಾ ನ್ಯಾಯಾಲಯದ ನಲವತ್ತು ವಕೀಲರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ ಐಜೂರು ಪೊಲೀಸ್ ಠಾಣೆ ಎಸ್ಐ ತನ್ವೀರ್ ಹುಸೇನ್ ಅವರ ಅಮಾನತಿಗೆ ಒತ್ತಾಯಿಸಿ ಮಂಗಳವಾರ ಗಂಗಾವತಿ ತಾಲ್ಲೂಕು ವಕೀಲರ ಸಂಘದ ಸದಸ್ಯರು ತಾಲ್ಲೂಕು ನ್ಯಾಯಾಲಯ ಸಂಕೀರ್ಣ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ತಾಲ್ಲೂಕು ವಕೀಲರ ಸಂಘದ ಕಾರ್ಯದರ್ಶಿ ಎಚ್.ಎಂ ಮಂಜುನಾಥ ಮಾತನಾಡಿ,‘ಜ್ಞಾನವಾಪಿ ಮಸೀದಿಯಲ್ಲಿ ಪೂಜೆಗೆ ಕೋರ್ಟ್ ಅವಕಾಶ ನೀಡಿದ್ದ ಕುರಿತು ರಾಮ ನಗರದ ವಕೀಲ ಚಾಂದ್ ಪಾಷ ಫೇಸ್‌ಬುಕ್‌ನಲ್ಲಿ ಆಕ್ಷೇಪಾರ್ಹ ಪೋಸ್ಟ್‌ ಮಾಡಿದ್ದು, ರಾಮನಗರದ ಜಿಲ್ಲಾ ವಕೀಲರ ಸಂಘದ ಸದಸ್ಯರು ವಕೀಲ ಚಾಂದ್ ಪಾಷ ಅವರಿಗೆ ನೋಟಿಸ್ ನೀಡಿ, ಅವರ ವಿರುದ್ದ ಕ್ರಮಕೈಗೊಳ್ಳಲು ಸಂಘ ನಿರ್ಧರಿಸಿ, ಸಭೆ ನಡೆಸುತ್ತಿತ್ತು. ಈ ವಿಷಯ ತಿಳಿದ ವಕೀಲ ಚಾಂದ್ ಪಾಷ ಪರ ಕೆಲವರು ಕಚೇರಿಗೆ ಆಗಮಿಸಿ, ಕ್ರಮಕೈಗೊಳ್ಳದಂತೆ ಬೆದರಿಕೆ ಹಾಕಿದ್ದಾರೆ. ಘಟನಾ ಸ್ಥಳಕ್ಕೆ ಎಸ್ಐ ತನ್ವಿರ್ ಆಗಮಿಸಿ ಎಲ್ಲ ತಿಳಿದೂ ದೂರು ಸಹ ದಾಖಲಿಸಿಕೊಂಡಿದ್ದರು’ ಎಂದರು.

ಆದರೆ ರಫೀಕ್ ಖಾನ್ ಎಂಬುವವರಿಂದ ಪೊಲೀಸ್ ಠಾಣೆಗೆ ಸುಳ್ಳು ಮಾಹಿತಿ ಕೊಡಿಸಿ, 40 ಜನ ವಕೀಲರ ವಿರುದ್ಧ ದೂರು ನೀಡಿದ್ದು, ಸತ್ಯಾಸತ್ಯತೆ ಪರಿಶೀಲಿಸಿದೆ ಎಸ್ಐ ತನ್ವೀರ್ ಅವರು ಎಫ್ಐಆರ್ ದಾಖಲಿಸಿದ್ದಾರೆ. ಇದು ದುರುದ್ದೇಶದಿಂದ ಮಾಡಿದ ಕೆಲಸವಾಗಿದ್ದು, ಕೂಡಲೇ ಎಸ್ಐ ತನ್ವೀರ್ ಅವರನ್ನ ಸೇವೆಯಿಂದ ಅಮಾನತು ಮಾಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುತ್ತದೆ ಎಂದರು.

ADVERTISEMENT

ವಕೀಲರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮುಸಾಲಿ, ಹಿರಿಯ ವಕೀಲರಾದ ಸಿದ್ದನಗೌಡ ಪಾಟೀಲ, ಜಿ.ವೀರೇಶಪ್ಪ, ಪ್ರಹ್ಲಾದ, ಶರದ ದಂಡೀನ್, ಕೆ. ಕೃಷ್ಣಪ್ಪ, ಅನಂತರಾವ್, ಪ್ರಕಾಶ ಕೋರಿ ಶೆಟ್ಟರ್, ಸೈಯದ್ ಹಾಸಿಮುದ್ದಿನ್, ತಿಮ್ಮಣ್ಣ ನಾಯಕ, ಹೊನ್ನೂರು, ಡಿ.ಪ್ರಭು, ವೆಂಕಟೇಶ ಕಲ್ಗುಡಿ, ಶ್ರೀಧರ ನಾಯಕ, ವೀರೇಶಪ್ಪ ಬಾದನಟ್ಟಿ, ಸೈದಾಬಾನು, ಅಕ್ಕ ಮಹಾದೇವಿ, ಮಲ್ಲಮ್ಮ, ವಿಜಯಲಕ್ಷ್ಮಿ, ಸೌಭಾಗ್ಯ, ಕವಿತಾ, ವೆಂಕಟೇಶಗೌಡ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.