ಗಂಗಾವತಿ (ಕೊಪ್ಪಳ ಜಿಲ್ಲೆ): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಂಗಾವತಿಯಲ್ಲಿ ಶನಿವಾರ ರಾತ್ರಿ ‘ಝೀರೊ ಟ್ರಾಫಿಕ್’ ನಡುವೆ ತೆರಳುವಾಗ ಶಾಸಕ ಜನಾರ್ದನ ರೆಡ್ಡಿ ಅವರ ವಾಹನ ಸಿ.ಎಂ ಬೆಂಗಾವಲು ವಾಹನಕ್ಕೆ ವಿರುದ್ಧವಾಗಿ ತೆರಳಿದ್ದು, ರೆಡ್ಡಿ ವಾಹನ ಚಾಲಕನ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಮುಖ್ಯಮಂತ್ರಿ ರಾಯಚೂರು ಜಿಲ್ಲೆಯ ಪ್ರವಾಸ ಮುಗಿಸಿ ಗಂಗಾವತಿ ಮಾರ್ಗದ ಮೂಲಕ ಬಳ್ಳಾರಿಗೆ ತೆರಳುವಾಗಿ ಸಿಬಿಎಸ್ ವೃತ್ತದಲ್ಲಿ ಈ ಘಟನೆ ನಡೆದಿದೆ.
ಸಿಎಂ ಭದ್ರತಾ ದೃಷ್ಟಿಯಿಂದ ಪೊಲೀಸ್ ಇಲಾಖೆ ನಗರದಲ್ಲಿ ‘ಝೀರೊ ಟ್ರಾಫಿಕ್’ ಮಾಡಿದ್ದರಿಂದ ಸಿಬಿಎಸ್ ವೃತ್ತದಲ್ಲಿ ಸಂಚಾರ ದಟ್ಟಣೆಯಾಗಿತ್ತು. ಶಾಸಕ ರೆಡ್ಡಿ ಕಾರು ಕೂಡ ಇದರಲ್ಲಿ ಸಿಲುಕಿತ್ತು. ಸಿ.ಎಂ. ಬೆಂಗಾವಲು ವಾಹನ ಬೇಗನೇ ಬಾರದ ಕಾರಣ ತಾಳ್ಮೆ ಕಳೆದುಕೊಂಡ ರೆಡ್ಡಿ ಕಾರು ಚಾಲಕ ರಸ್ತೆ ವಿಭಜಕದಿಂದಲೇ ಮಧ್ಯದಲ್ಲಿ ನುಗ್ಗಿ ಸಿ.ಎಂ. ಕಾರು ಬರುವ ವಿರುದ್ಧ ದಿಕ್ಕಿನಲ್ಲಿ ವಾಹನ ಚಲಾಯಿಸಿದ್ದು, ಇದಾದ ಕೆಲವೇ ಸೆಕೆಂಡುಗಳ ಅಂತರದಲ್ಲಿ ಬೆಂಗಾವಲು ವಾಹನಗಳು ಬಂದಿವೆ.
ಸಂಚಾರ ನಿಯಮ ಉಲ್ಲಂಘಿಸಿದ ಕಾರಣಕ್ಕಾಗಿ ಗಂಗಾವತಿ ಸಂಚಾರ ಪೊಲೀಸ್ ಠಾಣೆಯ ಎಎಸ್‌ಐ ಹಮೀದ್ ಹುಸೇನ್ ನೀಡಿದ ದೂರಿನ ಮೇರೆಗೆ ರೆಡ್ಡಿ ವಾಹನ ಚಾಲಕನ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ತಂಗಡಗಿ ಗರಂ: ರೆಡ್ಡಿ ನಡೆಗೆ ಆಕ್ರೋಶ ವ್ಯಕ್ತಪಡಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ‘ಸಚಿವರಾಗಿದ್ದ ರೆಡ್ಡಿಗೆ ಮುಖ್ಯಮಂತ್ರಿ ತೆರಳುವಾಗ ಹೇಗೆ ನಡೆದುಕೊಳ್ಳಬೇಕು ಎನ್ನುವ ಸಾಮಾನ್ಯ ಜ್ಞಾನವೂ ಇಲ್ಲ. ರಸ್ತೆ ವಿಭಜಕದ ಮೇಲೆಯೇ ಕಾರು ಚಲಾಯಿಸಲು ಇದು ಸಿನಿಮಾವೇನು? ಇಂಥ ಅತಿರೇಕದ ವರ್ತನೆ ಸರಿಯಲ್ಲ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.