ADVERTISEMENT

ಅಂಗನವಾಡಿ ಕೇಂದ್ರಗಳಿಗೆ ರಕ್ಷಣೆ ನೀಡಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2024, 15:39 IST
Last Updated 15 ನವೆಂಬರ್ 2024, 15:39 IST
ಕನಕಗಿರಿಯ ಸಿಡಿಪಿಒ ಕಚೇರಿಯ ಮುಂದೆ ಅಂಗನವಾಡಿ ನೌಕರರು ಶುಕ್ರವಾರ ನಡೆಸಿದ ಪ್ರತಿಭಟನೆಯಲ್ಲಿ ಅಂಗನವಾಡಿ ನೌಕರರ ಸಂಘದ ರಾಜ್ಯ ಸಮಿತಿ ಅಧ್ಯಕ್ಷೆ ವರಲಕ್ಷ್ಮಿ ಮಾತನಾಡಿದರು
ಕನಕಗಿರಿಯ ಸಿಡಿಪಿಒ ಕಚೇರಿಯ ಮುಂದೆ ಅಂಗನವಾಡಿ ನೌಕರರು ಶುಕ್ರವಾರ ನಡೆಸಿದ ಪ್ರತಿಭಟನೆಯಲ್ಲಿ ಅಂಗನವಾಡಿ ನೌಕರರ ಸಂಘದ ರಾಜ್ಯ ಸಮಿತಿ ಅಧ್ಯಕ್ಷೆ ವರಲಕ್ಷ್ಮಿ ಮಾತನಾಡಿದರು   

ಕನಕಗಿರಿ: ಐಸಿಡಿಎಸ್ ಯೋಜನೆ ಅಡಿಯಲ್ಲಿ ಬರುವ 371 ಅಂಗನವಾಡಿ ಕೇಂದ್ರಗಳಲ್ಲಿ 740 ಜನ  ಅಂಗನವಾಡಿ ಕಾರ್ಯಕರ್ತೆರು ಮತ್ತು ಸಹಾಯಕಿಯರಾಗಿ ಹಲವು ವರ್ಷಗಳಿಂದ ದುಡಿಯುತ್ತಿದ್ದಾರೆ. ಅವರಿಗೆ ರಕ್ಷಣೆ ಇಲ್ಲವಾಗಿದೆ ಎಂದು ಅಂಗನವಾಡಿ ನೌಕರರ ರಾಜ್ಯ ಸಮಿತಿ ಅಧ್ಯಕ್ಷೆ ಎಸ್.ವರಲಕ್ಷ್ಮಿ ತಿಳಿಸಿದರು.

ಇಲ್ಲಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯ ಮುಂದೆ ಶುಕ್ರವಾರ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಅಂಗನವಾಡಿ ಕೇಂದ್ರಗಳಿಗೆ ಈಚೆಗೆ ಕೆಲ ಪತ್ರಕರ್ತರು, ಕನ್ನಡ ಸಂಘದವರು ಎಂದು ಹೇಳಿಕೊಂಡು ಕೆಲಸದ ವೇಳೆಯಲ್ಲಿ ಅಂಗನವಾಡಿ ಕೇಂದ್ರದಲ್ಲಿ ನಡೆಯುವ ಚಟುವಟಿಕೆಗಳನ್ನು ತಮ್ಮ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡುವುದು ಹಾಗೂ ಅಂಗನವಾಡಿ ಕೇಂದ್ರಕ್ಕೆ ಸಂಬಂಧ ಪಡದ ಕೆಲವು ವ್ಯಕ್ತಿಗಳಿಂದ ಹೇಳಿಕೆ ತೆಗೆದುಕೊಂಡು ಅಂಗನವಾಡಿ ಕಾರ್ಯಕರ್ತೆಯರನ್ನು ಹೆದರಿಸುವ ಕೆಲಸ ನಡೆಯುತ್ತಿದೆ. ಇಂತಿಷ್ಟು ಹಣ ಕೊಡಬೇಕು, ಇಲ್ಲದಿದ್ದರೆ ವಿಡಿಯೊ ಹೊರಗಡೆ ಬಿಡುತ್ತೇವೆ ಎಂದು ಹೆದರಿಸುವುದು ನಡೆಯುತ್ತಿದೆ ಎಂದು ಅವರು ಅಳಲು ತೋಡಿಕೊಂಡರು.

ADVERTISEMENT

ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದಿರುವ ಅಂಗನವಾಡಿ ನೌಕರರು ಹಲವು ವರ್ಷಗಳಿಂದ ಯಾವುದೇ ರೀತಿಯ ಕಾನೂನಿನ ಸೌಲಭ್ಯ ಇಲ್ಲದೇ ಕೇವಲ ಕಡಿಮೆ ಗೌರವಧನಕ್ಕೆ ದುಡಿಯುತ್ತಿದ್ದಾರೆ. ಇಂತಹ ಮಹಿಳೆಯರ ಸಬಲೀಕರಣಕ್ಕಾಗಿ ನಿಲ್ಲುವ ಬದಲಿಗೆ ಅಂಗನವಾಡಿ ಕೇಂದ್ರಗಳಿಗೆ ಬರುವ ಪೌಷ್ಟಿಕ ಆಹಾರದ ಬಗ್ಗೆ ಆರೋಪಗಳನ್ನು ಮಾಡುವುದು ಸರಿಯಾದ ಕ್ರಮವಲ್ಲ. ಅಂಗನವಾಡಿ ಕೇಂದ್ರಗಳಿಗೆ ಬರುವ ಆಹಾರದ ಬಗ್ಗೆ ಅಂಗನವಾಡಿ ಕೇಂದ್ರಗಳ ಕಾರ್ಯಾಚರಣೆಯ ಬಗ್ಗೆ ಮೇಲ್ವಿಚಾರಣೆ ಮಾಡಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಇದ್ದಾರೆ. ತಾಲ್ಲೂಕು ಮತ್ತು ಜಿಲ್ಲಾಡಳಿತವಿದೆ. ಈ ಬಗ್ಗೆ ವಸೂಲಿಗಾರರಿಗೆ ಏಕೆ ಉಸಾಬರಿ ಎಂದು ಪ್ರಶ್ನಿಸಿದರು.

ತಾಲ್ಲೂಕು ಅಧ್ಯಕ್ಷೆ ಅಮರಮ್ಮ ಮಾತನಾಡಿ, ಯಾವುದೇ ವ್ಯಕ್ತಿ, ಸಂಘ ಸಂಸ್ಥೆಗಳಿಗೆ ಅಂಗನವಾಡಿ ಕೇಂದ್ರಗಳ ಕಾರ್ಯಾಚರಣೆಯ ಬಗ್ಗೆ ದೂರುಗಳಿದ್ದರೆ, ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಿ ಸರಿಪಡಿಸಬೇಕೇ ಹೊರತು ನೇರವಾಗಿ ಅಂಗನವಾಡಿ ಕೇಂದ್ರಗಳಿಗೆ ಹೋಗಿ ಬೆದರಿಕೆ ಹಾಕುವುದು ಸರಿಯಲ್ಲ ಎಂದು ಹೇಳಿದರು.

ತಾಲ್ಲೂಕು ಆಡಳಿತ ಹಾಗೂ ಇಲಾಖೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸಿಐಟಿಯು ಜಿಲ್ಲಾಧ್ಯಕ್ಷ ನಿರುಪಾದಿ ಬೆಣಕಲ್, ಜಿಲ್ಲಾ ಕಾರ್ಯದರ್ಶಿ ಖಾಸಿಂಸಾಬ ಸರ್ದಾರ, ಶಿವಕುಮಾರ ಸುಳೇಕಲ ಮಾತನಾಡಿದರು. ಸಿಐಟಿಯುನ ಮುಖಂಡರಾದ ಮಲ್ಲಪ್ಪ ಮ್ಯಾಗಡೆ, ಪರಶುರಾಮ, ವೆಂಕಟೇಶ, ಸಣ್ಣನಿಂಗಪ್ಪ, ನಬಿಸಾಬ ಚಳ್ಳಮರದ, ಅನುಸೂಯಾ, ಲಕ್ಷ್ಮಿ ಸಜ್ಜನ್, ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.