ADVERTISEMENT

ಕಾರಟಗಿ: ಮಾಂಸದ ಅಂಗಡಿಗಳ ಸ್ಥಳಾಂತರಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 8 ಜನವರಿ 2024, 16:06 IST
Last Updated 8 ಜನವರಿ 2024, 16:06 IST
ಕಾರಟಗಿಯ ಗ್ರಾಮೀಣ ಸಂತೆ ಮೈದಾನಕ್ಕೆ ಸೋಮವಾರ ಭೇಟಿ ನೀಡಿದ್ದ ಬಿಜೆಪಿ ಮುಖಂಡ ವೀರೇಶ ಸಾಲೋಣಿ, ಪುರಸಭೆ ಸದಸ್ಯರು ವೀಕ್ಷಿಸಿದರು
ಕಾರಟಗಿಯ ಗ್ರಾಮೀಣ ಸಂತೆ ಮೈದಾನಕ್ಕೆ ಸೋಮವಾರ ಭೇಟಿ ನೀಡಿದ್ದ ಬಿಜೆಪಿ ಮುಖಂಡ ವೀರೇಶ ಸಾಲೋಣಿ, ಪುರಸಭೆ ಸದಸ್ಯರು ವೀಕ್ಷಿಸಿದರು   

ಕಾರಟಗಿ: ಪಟ್ಟಣದ ಎಲ್ಲೆಂದರಲ್ಲಿ ಮಾಂಸ ಮಾರಾಟದ ಅಂಗಡಿಗಳು ಆರಂಭಗೊಂಡಿದ್ದು, ಸ್ವಚ್ಛತೆಗೆ ಸಮಸ್ಯೆಯಾಗಿದೆ. 3 ದಿನಗಳ ಒಳಗೆ ಪಟ್ಟಣದಾದ್ಯಂತ ಇರುವ ಮಾಂಸದ ಅಂಗಡಿಗಳನ್ನು ಮಾರುಕಟ್ಟೆಗೆ ಸ್ಥಳಾಂತರಿಸಬೇಕು. ಇಲ್ಲದಿದ್ದರೆ ಪುರಸಭೆ ಮುಂದೆ ಮಾಂಸ ಮಾರಾಟ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ಮುಖಂಡ ವೀರೇಶ ಸಾಲೋಣಿ ಹೇಳಿದರು.

ಪಟ್ಟಣದ ಗ್ರಾಮೀಣ ಸಂತೆ ಮಾರುಕಟ್ಟೆಯಲ್ಲಿರುವ ಮಾಂಸ ಮಾರಾಟದ ಅಂಗಡಿಗಳಿಗೆ ಸೋಮವಾರ ಪುರಸಭೆ ಸದಸ್ಯರು, ಬೆಂಬಲಿಗರೊಂದಿಗೆ ಭೇಟಿ ನೀಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಜನರು ದೂರಿದಾಗ ಅಂಗಡಿಗಳನ್ನು ತೆರವುಗೊಳಿಸಿ ಬಳಿಕ ಮಾರಾಟಕ್ಕೆ ಅನುವು ಮಾಡಿಕೊಟ್ಟ ಪುರಸಭೆ ಆಡಳಿತ ವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಇದೇ ವೇಳೆ ಪುರಸಭೆ ಸದಸ್ಯರಾದ ರಾಜಶೇಖರ ಸಿರಿಗೇರಿ, ಆನಂದ ಮ್ಯಾಗಳಮನಿ ಮಾರುಕಟ್ಟೆಯಲ್ಲಿಯ ಸಮಸ್ಯೆಗಳನ್ನು ಪುರಸಭೆ ಮುಖ್ಯಾಧಿಕಾರಿಗೆ ಮನವರಿಕೆ ಮಾಡಿ, ವಿವಿಧೆಡೆ ಇರುವ ಮಾಂಸದ ಅಂಗಡಿಗಳನ್ನು ಮಾರುಕಟ್ಟೆಗೆ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿದರು.

ರೈತ ಮುಖಂಡ ಮರಿಯಪ್ಪ ಮಾತನಾಡಿ, ಎಲ್ಲಾ ಮಾಂಸದ ಅಂಗಡಿಗಳನ್ನು ಮಾರುಕಟ್ಟೆಗೆ ಸ್ಥಳಾಂತರಿಸಿ, ಅಗತ್ಯ ಸೌಲಭ್ಯ ಒದಗಿಸಬೇಕು ಎಂದು ಕೋರಿದರು. ಆರೋಗ್ಯ ನಿರೀಕ್ಷಕಿ ಭೇಟಿ ನೀಡಿ, ವಿಷಯವನ್ನು ಮುಖ್ಯಾಧಿಕಾರಿಗಳ ಗಮನಕ್ಕೆ ತರುವುದಾಗಿ ಹೇಳಿದರು.

ಮುಖಂಡರಾದ ಬಸವರಾಜ ಎತ್ತಿನಮನಿ, ಧನಂಜಯ್ ಎಲಿಗಾರ, ಚಿಕನ್ ಮಾರಾಟಗಾರರಾದ ಹೊನ್ನೂರಸಾಬ, ಜಾವೇದ ಖುರೇಶಿ, ಗಫೂರ್, ಜಿಲಾನಿಪಾಶಾ, ಹುಸೇನ್‌ಸಾಬ, ಮೌಲಾಸಾಬ, ಖಾದರಸಾಬ, ಸಮದಾನಿ, ರಾಜಾಹುಸೇನ್, ಮಕ್ಬೂಲ್‌ಸಾಬ, ನಬಿಸಾಬ, ಶರ್ಮಾ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.