ADVERTISEMENT

ಹರಿಗೋಲು ವಶಕ್ಕೆ ಪಡೆದ ಅರಣ್ಯ ಇಲಾಖೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2024, 6:40 IST
Last Updated 7 ಮಾರ್ಚ್ 2024, 6:40 IST
ಗಂಗಾವತಿ ತಾಲ್ಲೂಕಿನ ಸಾಣಾಪುರ ಗ್ರಾಮದ ಕೆರೆಯಿಂದ ಹರಿಗೋಲು ಜಪ್ತಿ ಮಾಡಿರುವುದು  
ಗಂಗಾವತಿ ತಾಲ್ಲೂಕಿನ ಸಾಣಾಪುರ ಗ್ರಾಮದ ಕೆರೆಯಿಂದ ಹರಿಗೋಲು ಜಪ್ತಿ ಮಾಡಿರುವುದು     

ಗಂಗಾವತಿ: ತಾಲ್ಲೂಕಿನ ಸಾಣಾಪುರ ಗ್ರಾಮದ ಕೆರೆಯಲ್ಲಿ ಕಾನೂನು ಬಾಹಿರವಾಗಿ ಹರಿಗೋಲು ಹಾಕುತ್ತಿರುವ ಮಾಹಿತಿಯನ್ವಯ ಬುಧವಾರ ಬೆಳಿಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಕೆರೆ ಬಳಿ ಕಾರ್ಯಚರಣೆ ನಡೆಸಿ ಹರಿಗೋಲು ವಶಕ್ಕೆ ಪಡೆದಿದ್ದಾರೆ.

ಸಾಣಾಪುರ ಗ್ರಾಮಸ್ಥರು ವಾಟರ್ ಫಾಲ್ ಮತ್ತು ಕೆರೆಯಲ್ಲಿ ಆಕ್ರಮವಾಗಿ ಹರಿಗೋಲು ಹಾಕಿ ಪ್ರವಾಸಿಗರಿಂದ ಅಧಿಕ ಹಣ ವಸೂಲಿ ಮಾಡುತ್ತಿದ್ದ ಬಗ್ಗೆ ವ್ಯಾಪಕ ದೂರುಗಳಿದ್ದವು.

ಈ ಕುರಿತು ಜ. 5ರಂದು ಪ್ರಜಾವಾಣಿಯಲ್ಲಿ ವರದಿ ಪ್ರಕಟವಾದ ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ಹರಿಗೋಲುಗಳನ್ನು ವಶಕ್ಕೆ ಪಡೆದಿದ್ದರು. ಬಳಿಕ ಶಾಸಕ ಜನಾರ್ದನ ರೆಡ್ಡಿ ಸೂಚನೆ ಮೇರೆಗೆ ಹರಿಗೋಲು ಹಾಕಲು ಅವಕಾಶ ಕಲ್ಪಿಸಲಾಗಿತ್ತು. ಅಷ್ಟೇ ಅಲ್ಲ; ಸ್ವತಃ ಶಾಸಕರೇ ಕುಟುಂಬ ಸಮೇತ ಸಾಣಾಪುರ ಕೆರೆಯಲ್ಲಿ ಹರಿಗೋಲು ಸವಾರಿಗೆ ಚಾಲನೆ ಕೊಟ್ಟಿದ್ದರು.

ADVERTISEMENT

ಮೊದಲಿಗೆ 15 ಜನ ಹರಿಗೋಲು ಮಾಲೀಕರಿಗೆ ಪರವಾನಗಿ ನೀಡುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದು, ಸಾಣಾಪುರ ಗ್ರಾಮದಲ್ಲಿ ಎಲ್ಲರಿಗೂ ಅನುಮತಿ ನೀಡಬೇಕು ಎಂದು ದುಂಬಾಲು ಬಿದ್ದಿದ್ದರು. ಅಧಿಕಾರಿಗಳು ಪರವಾನಗಿ ನೀಡುವ ಭರವಸೆ ನೀಡಿದ್ದರೂ ಅಕ್ರಮವಾಗಿ ಹರಿಗೋಲು ಹಾಕಲಾಗುತ್ತಿತ್ತು. ಈಗ ಅರಣ್ಯ ಇಲಾಖೆಯವರೇ ಜಪ್ತಿ ಮಾಡಿದ್ದಾರೆ.

‘ಹರಿಗೋಲು ಹಾಕಬೇಡಿ ಎಂದು ಮಾಲಿಕರಿಗೆ ಹಲವು ಬಾರಿ ತಿಳಿಸಲಾಗಿದೆ. ಆದರೂ ಕಣ್ಣುತಪ್ಪಿಸಿ ಹಾಕುತ್ತಿರುವ ಬಗ್ಗೆ ಮಾಹಿತಿ ಬಂದ ಕಾರಣ 20ಕ್ಕೂ ಹೆಚ್ಚು ಹರಿಗೋಲುಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಗಂಗಾವತಿ ವಲಯ ಅರಣ್ಯ ಅಧಿಕಾರಿ ಸುಭಾಷ್ ಚಂದ್ರ ನಾಯಕ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.