ADVERTISEMENT

ಗವಿಮಠದಲ್ಲಿ 5 ಸಾವಿರ ವಿದ್ಯಾರ್ಥಿಗಳಿಗೆ ಉಚಿತ ಹಾಸ್ಟೆಲ್‌: ಜು. 1ರಂದು ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 26 ಜೂನ್ 2024, 13:52 IST
Last Updated 26 ಜೂನ್ 2024, 13:52 IST
   

ಕೊಪ್ಪಳ: ಅನ್ನ, ಅಕ್ಷರ, ಅರಿವು ಮತ್ತು ಆಧ್ಯಾತ್ಮ ದಾಸೋಹಕ್ಕೆ ಹೆಸರಾಗಿರುವ ಇಲ್ಲಿನ ಐತಿಹಾಸಿಕ ಗವಿಸಿದ್ಧೇಶ್ವರ ಮಠದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಬರುವ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ವಸತಿ ಮತ್ತು ಪ್ರಸಾದ ಕಲ್ಪಿಸುವ ಸೌಲಭ್ಯವನ್ನು ಮೇಲ್ದರ್ಜೆಗೇರಿಸಲಾಗಿದೆ.

ಮಠದ ಮೈದಾನದ ಆವರಣದಲ್ಲಿರುವ ಹಾಸ್ಟೆಲ್‌ನಲ್ಲಿ ಮೊದಲು ಮೂರೂವರೆ ಸಾವಿರ ವಿದ್ಯಾರ್ಥಿಗಳು ತಂಗಲು ಅವಕಾಶವಿತ್ತು. ವರ್ಷದಿಂದ ವರ್ಷಕ್ಕೆ ಓದಲು ಬರುವವರ ಮಕ್ಕಳ ಸಂಖ್ಯೆ ಹೆಚ್ಚಾಗಿದ್ದರಿಂದ ಈಗ 1,500 ಮಕ್ಕಳಿಗೆ ಹೆಚ್ಚುವರಿಯಾಗಿ ಅನುಕೂಲ ಕಲ್ಪಿಸಲು ಹೊಸಕಟ್ಟಡ ನಿರ್ಮಿಸಲಾಗಿದೆ. ಒಟ್ಟು ಐದು ಸಾವಿರ ಮಕ್ಕಳಿಗೆ ಈಗ ಹಾಸ್ಟೆಲ್‌ನಲ್ಲಿರುವ ಸೌಲಭ್ಯ ಸಿಗಲಿದ್ದು, ಕಟ್ಟಡದ ಇದರ ಉದ್ಘಾಟನಾ ಸಮಾರಂಭ ಜು. 1ರಂದು ಗವಿಮಠದ ಆವರಣದಲ್ಲಿ ಜರುಗಲಿದೆ.

ನೂತನ ಕಟ್ಟಡದಲ್ಲಿ 130 ವಿದ್ಯಾರ್ಥಿಗಳ ಕೊಠಡಿಗಳು, ಆಧುನಿಕ ಯಂತ್ರೋಪಕರಣ ಒಳಗೊಂಡ ಅಡುಗೆ ಕೋಣೆ, ತರಕಾರಿ ಕತ್ತರಿಸುವ ಯಂತ್ರ, ಒಂದು ತಾಸಿಗೆ 1,500 ಚಪಾತಿ ತಯಾರಿಸುವ ಯಂತ್ರಗಳು, 10 ನಿಮಿಷದಲ್ಲಿ ಎರಡು ಸಾವಿರ ಇಡ್ಲಿ ಸಿದ್ಧಪಡಿಸುವ ನಾಲ್ಕು ಸ್ಟೀಮ್‌ ಕುಕ್ಕರ್‌, ಮಕ್ಕಳ ಆರೈಕೆಗಾಗಿ ಲ್ಯಾಬ್‌, ವಿಶಾಲವಾದ ಆಟದ ಮೈದಾನದ ಸೇರಿದಂತೆ ಹಲವು ಸೌಲಭ್ಯಗಳು ಇರಲಿವೆ.

ADVERTISEMENT

‘ವಿದ್ಯಾರ್ಥಿಗಳ ಓದಿಗೆ ಉಚಿತವಾಗಿ ಅನುಕೂಲ ಮಾಡಿಕೊಟ್ಟಾಗ ಆಗುವ ಖುಷಿ ಬೇರೆ ಯಾವ ಕೆಲಸದಿಂದಲೂ ಸಿಗುವುದಿಲ್ಲ. ಒಟ್ಟು ಐದು ಸಾವಿರ ಮಕ್ಕಳಿಗೆ ಉಚಿತವಾಗಿ ವಸತಿ ಮತ್ತು ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದೆ. ಇದು ನನ್ನ ಬದುಕಿನ ಸಾರ್ಥಕ ಕ್ಷಣಗಳಲ್ಲಿ ಒಂದಾಗಿದೆ’ ಎಂದು ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಬುಧವಾರ ಸುದ್ದಿಗಾರರಿಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.