ಅಳವಂಡಿ: ‘ಎಲ್ಲ ವೃತ್ತಿಗಿಂತ ಶಿಕ್ಷಕರ ವೃತ್ತಿ ಬಹಳ ಪ್ರಮುಖವಾಗಿದೆ. ವಿದ್ಯಾರ್ಥಿಗಳು ಸಮಾಜ ಹಾಗೂ ಕುಟುಂಬದಲ್ಲಿ ಗೌರವದಿಂದ ಬೆಳೆದಾಗ ಮಾತ್ರ ಕಲಿಸಿದ ಶಿಕ್ಷಕರಿಗೆ ಆಗುವ ಖುಷಿ ಯಾವುದಕ್ಕೂ ಸಾಟಿ ಇಲ್ಲ’ ಎಂದು ನಿವೃತ್ತ ಪ್ರಾಚಾರ್ಯ ಎ.ಟಿ. ಕಲ್ಮಠ ಅಭಿಪ್ರಾಯಪಟ್ಟರು.
ಇಲ್ಲಿನ ಸಿದ್ದೇಶ್ವರ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ 1993-94ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಂದ ಹಮ್ಮಿಕೊಂಡಿದ್ದ ಗುಣಮಧುರರ ನಡುವೆ ಸಾವಿರ ನೆನಪುಗಳೊಂದಿಗೆ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಉದ್ದೇಶಿಸಿ ಭಾನುವಾರ ಮಾತನಾಡಿದರು.
‘ನಾವು ಕಲಿಸಿದ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ದೊಡ್ಡದೊಡ್ಡ ಹುದ್ದೆಗಳಲ್ಲಿ ಇದ್ದಾರೆ ಎನ್ನುವುದು ಗುರುವಿಗೆ ಸಿಗುವ ದೊಡ್ಡ ಗೌರವವಾಗಿದೆ. ಗುರುವಿಗೆ ತನ್ನ ಶಿಷ್ಯರನ್ನು ತನ್ನಂತೆ ಮಾಡುವ ಶಕ್ತಿ ಗುರುವಿನಲ್ಲಿದೆ. ಕಲಿತ ಸಂಸ್ಥೆಯ ಸರ್ವತೋಮುಖ ಅಭಿವೃದ್ಧಿಗೆ ಹಳೆಯ ವಿದ್ಯಾರ್ಥಿಗಳು ಕೂಡ ಕೈ ಜೋಡಿಸಬೇಕು’ ಎಂದರುಇ.
ಪ್ರಾಚಾರ್ಯ ಜಗದೀಶ ಆಲದಕಟ್ಟಿ ಮಾತನಾಡಿ,‘ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸಮಯವನ್ನು ವ್ಯರ್ಥ ಮಾಡಬಾರದು. ಸಮಾಜದಲ್ಲಿ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಿ ಒಳ್ಳೆಯ ನಾಗರಿಕರಾಗಿ ಹೊರಹೊಮ್ಮಿ’ ಎಂದರು.
ಹಿರಿಯ ಶಿಕ್ಷಕ ಹನುಮಂತ ಲಮಾಣಿ ಮಾತನಾಡಿ ಹಾಗೂ ನಿವೃತ್ತ ಉಪನ್ಯಾಸಕ ಎಂ.ಎಲ್. ಪೊಲೀಸ್‌ಪಾಟೀಲ ಮಾತನಾಡಿದರು.
ಹಳೆ ವಿದ್ಯಾರ್ಥಿಗಳು ಬೋಧನೆ ಮಾಡಿದ ಶಿಕ್ಷಕರ ಆರ್ಶೀವಾದ ಪಡೆದು ಯೋಗ ಕ್ಷೇಮ ವಿಚಾರಿಸಿದರು. 1993-94 ನೇ ಸಾಲಿನ ವಿದ್ಯಾರ್ಥಿಗಳು ತಾವು ಶಿಕ್ಷಣ ಪಡೆದ ಅನುಭವವನ್ನು ಹಂಚಿಕೊಂಡರು. 30 ವರ್ಷಗಳ ನಂತರ ಭೇಟಿಯಾದ ಈ ಸುಸಂದರ್ಭ ಎಲ್ಲರಿಗೂ ಮತ್ತೊಮ್ಮೆ ಬಾಲ್ಯದ ಮತ್ತು ಹಳೆಯ ನೆನಪುಗಳು ಮರುಕಳಿಸಿತು.
ಪ್ರೀತಿ, ಸಂಭ್ರಮದ ಸಡಗರದ ವಾತಾವರಣವು ಕಾರ್ಯಕ್ರಮದಲ್ಲಿ ಎದ್ದು ಕಾಣುತಿತ್ತು. ಸರಿಗಮಪ ಖ್ಯಾತಿಯ ಮುಂಡರಗಿಯ ನಯನ ಅಳವಂಡಿ ಹಾಡಿನ ಮೂಲಕ ರಂಜಿಸಿದರು.
ಸಿದ್ದೇಶ್ವರ ಮಠದ ಮರುಳಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಕವಿ ಸಮಿತಿಯ ವ್ಯವಸ್ಥಾಪಕ ಪ್ರಕಾಶ್ ಸ್ವಾಮಿ ಇನಾಮದಾರ, ಪ್ರಮುಖರಾದ ಎ.ಟಿ. ಕಲ್ಮಠ, ಡಿ.ಜಿ. ಲಕ್ಕನಗೌಡರ, ಎಂ.ಎಲ್. ಪೊಲೀಸ್‌ಪಾಟೀಲ, ಪಿ.ವಿ. ಹಿರೇಮಠ, ಎಚ್.ಎಸ್. ಯಲ್ಲಪ್ಪಗೌಡ್ರ, ಜಿ.ಜಿ. ಕುರಡಗಿ, ಎಚ್.ಎಸ್. ಕಲ್ಗುಡಿ, ಪಿ.ಎಚ್. ಹಿರೇಮಠ, ವಿಷ್ಣು ಅರ್ಕಸಾಲಿ, ವೀರಣ್ಣ ಗೊಂಡಬಾಳ, ಭರಮಪ್ಪ ತಗಡಿನಮನಿ, ಲಕ್ಷ್ಮಣ್ ದಾಸರ, ಪರಸಪ್ಪ ಟಿಕಾರೆ, ಸಿದ್ದರೆಡ್ಡಪ್ಪ ಅಲ್ಲಿಪೂರ, ವಾಸಪ್ಪ ಬೋಗಾರ, ಲಕ್ಷ್ಮಣ್ಣ ಬಿಸರಳ್ಳಿ ಹಾಗೂ ಶಿಕ್ಷಕರು ವಿದ್ಯಾರ್ಥಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.