ADVERTISEMENT

‘ಗಾಂಧಿ ಛಲ, ಸಾಹಸ ಮೈಗೂಡಿಸಿಕೊಳ್ಳಿ’

ಇರಕಲ್ಲಗಡದಲ್ಲಿ ರಾಜ್ಯಮಟ್ಟದ ವಿಚಾರ ಸಂಕಿರಣ: ಅಬೀದ್‌ ಬೇಗಂ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2024, 5:34 IST
Last Updated 10 ಜುಲೈ 2024, 5:34 IST
ಕೊಪ್ಪಳ ತಾಲ್ಲೂಕಿನ ಇರಕಲ್ಲಗಡದಲ್ಲಿ ಸೋಮವಾರ ನಡೆದ ವಿಚಾರ ಸಂಕಿರಣವನ್ನು ಬೆಂಗಳೂರಿನ ಗಾಂಧಿ ಸ್ಮಾರಕ ನಿಧಿಯ ಸಂಘಟಕಿ ಅಬೀದ್‌ ಬೇಗಂ ಉದ್ಘಾಟಿಸಿದರು
ಕೊಪ್ಪಳ ತಾಲ್ಲೂಕಿನ ಇರಕಲ್ಲಗಡದಲ್ಲಿ ಸೋಮವಾರ ನಡೆದ ವಿಚಾರ ಸಂಕಿರಣವನ್ನು ಬೆಂಗಳೂರಿನ ಗಾಂಧಿ ಸ್ಮಾರಕ ನಿಧಿಯ ಸಂಘಟಕಿ ಅಬೀದ್‌ ಬೇಗಂ ಉದ್ಘಾಟಿಸಿದರು   

ಕೊಪ್ಪಳ: ‘ದಕ್ಷಿಣ ಆಫ್ರಿಕಾದಲ್ಲಿ ಗಾಂಧೀಜಿ ಅವರ ಮೇಲೆ ಆದ ದಬ್ಬಾಳಿಕೆ, ಅವಮಾನದಿಂದಾಗಿ ಮೋಹನ ಮಹಾತ್ಮನಾಗಿ ರೂಪತಾಳಿದರು. ಯುವಕರು ಸ್ವಾಭಿಮಾನಿಗಳಾದಾಗ ಮಾತ್ರ ಅವರಲ್ಲಿ ಧೈರ್ಯ, ಸಾಹಸ ಛಲದ ಮನೋಭಾವನೆ ಮೂಡುತ್ತದೆ’ ಎಂದು ಬೆಂಗಳೂರಿನ ಗಾಂಧಿ ಸ್ಮಾರಕ ನಿಧಿಯ ಸಂಘಟಕಿ ಅಬೀದ್‌ ಬೇಗಂ ಹೇಳಿದರು.

ತಾಲ್ಲೂಕಿನ ಇರಕಲ್ಲಗಡದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಬೆಂಗಳೂರಿನ‌ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಸಹಯೋಗದಲ್ಲಿ ಸೋಮವಾರ ನಡೆದ 'ಯುವಕರನ್ನು ಸಬಲೀಕರಣ ಗೊಳಿಸುವಲ್ಲಿ ಗಾಂಧೀಜಿಯವರ ಚಿಂತನೆಗಳು' ವಿಷಯ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣದ ಮೊದಲ ಗೋಷ್ಠಿಯಲ್ಲಿ ‘ಸ್ವಾವಲಂಬನೆಯ ಕುರಿತು ಗಾಂಧೀಜಿಯವರ ತತ್ವಗಳು’ ವಿಷಯದ ಕುರಿತು ಅವರು ಮಾತನಾಡಿದರು.

‘ಪ್ರತಿ ಮನುಷ್ಯನಿಗೆ ದೇಶ ಸುತ್ತುವುದು ಮತ್ತು ಕೋಶ ಓದುವುದರಿಂದ ದೇಶದ ಬಡತನ, ಅಜ್ಞಾನ, ಅನಕ್ಷರತೆ, ದೇಶದ ವಾಸ್ತವ ಸ್ಥಿತಿ ಏನೆಂಬುದು ಗೊತ್ತಾಗುತ್ತದೆ. ಮೋಹನನಿಂದ ಮಹಾತ್ಮನಾದ ಗಾಂಧೀಜಿಯ ಸ್ವಬದಲಾವಣೆ, ಸ್ವಾವಲಂಬನೆ ರೂಢಿಸಿಕೊಂಡಾಗ ಬದುಕು ಸುಂದರವೆನಿಸುತ್ತದೆ. ಗಾಂಧಿ ಕೃಷಿಕರಾಗಿ, ಕ್ಷೌರಿಕರಾಗಿ, ಜೈಲಲ್ಲಿ ಚಮ್ಮಾರರಾಗಿ ತಾವು ಧರಿಸುವ ಬಟ್ಟೆಯನ್ನು ತಾವೇ ನೇಯ್ದುಕೊಂಡರು’ ಎಂದು ಸ್ಮರಿಸಿದರು.

ADVERTISEMENT

ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಕೊಪ್ಪಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರೊ. ತಿಮ್ಮಾರೆಡ್ಡಿ ಮೇಟಿ ‘ಸತ್ಯ, ಅಹಿಂಸೆ, ಸತ್ಯಾಗ್ರಹಗಳಂತಹ ಗಾಂಧಿ ತತ್ವಗಳು ಆಧುನಿಕ ಜಗತ್ತಿನ ಅನುಕರಣೀಯ ಮೌಲ್ಯಗಳಾಗಿವೆ’ ಎಂದು ಅಭಿಪ್ರಾಯಪಟ್ಟರು.

ಎರಡನೇ ಗೋಷ್ಠಿಯಲ್ಲಿ ವಿಜಯಪುರದ ನೇತಾಜಿ ಗಾಂಧಿ ‘ಜಗತ್ತಿನ ಮಹನೀಯರ ಮೇಲೆ ಗಾಂಧೀಜಿಯವರ ಪ್ರಭಾವ’ ವಿಷಯದ ಕುರಿತು ಮಾತನಾಡಿ ‘ನೆಲ್ಸನ್ ಮಂಡೇಲಾ, ಮಾರ್ಟಿನ್ ಲೂಥರ್ ಕಿಂಗ್, ಆಂಗ್‌ಸಾನ್ ಸೂಕಿ, ಒಬಾಮಾರಂತಹ ಜಗತ್ತಿನ ಸಾವಿರಾರು ಮಹನೀಯರು ಗಾಂಧಿ ತತ್ವಗಳಿಂದ ಪ್ರಭಾವಿತರಾಗಿದ್ದಾರೆ’ ಎಂದರು.

ಮೂರನೇ ಗೋಷ್ಠಿಯಲ್ಲಿ ರಾಜೇಶ್ ಮುತ್ತಾಳ ಅವರು ‘ಗಾಂಧಿ ತತ್ವಗಳು ಮತ್ತು ಪ್ರಸ್ತುತತೆ' ಕುರಿತು ಮಾತನಾಡಿದರು. ಸಮಾರೋಪದಲ್ಲಿ ಕೊಪ್ಪಳ ವಿಶ್ವವಿದ್ಯಾಲಯದ ಎನ್ಎಸ್ಎಸ್ ಘಟಕದ ಮುಖ್ಯಸ್ಥ ಬಸವರಾಜ ಈಳಿಗನೂರ, ಕಾಲೇಜಿನ ಪ್ರಾಚಾರ್ಯ ಪ್ರೊ.ಉಮೇಶ ಗಾಂಧಿ, ಇತಿಹಾಸ ವಿಭಾಗದ ಮುಖ್ಯಸ್ಥೆ ಪ್ರೊ. ಆಶಾ ಸಿ., ಎನ್ಎಸ್ಎಸ್ ಘಟಕದ ಮುಖ್ಯಸ್ಥ ಪ್ರೊ.ಅನಿತಾ ಎಂ, ಸಾಂಸ್ಕೃತಿಕ ವಿಭಾಗದ ಸಂಚಾಲಕ ಶಂಕ್ರಯ್ಯ ಅಬ್ಬಿಗೇರಿಮಠ, ಪ್ರೊ. ದಿವ್ಯಾ, ಉಪನ್ಯಾಸಕರಾದ  ವೆಂಕಟೇಶ, ಮಂಜಣ್ಣ, ಮಹೇಶಕುಮಾರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.