ಕೊಪ್ಪಳ: ನೇಕಾರಿಗೆ ವೃತ್ತಿ ಮಾಡುವ ಎಲ್ಲ ಕುಟುಂಬಗಳಿಗೆ ಶುಕ್ರವಾರ ವಿಶೇಷ ದಿನ. ಗಣೇಶನನ್ನು ಪ್ರತಿಷ್ಠಾಪಿಸಿದ ಮರುದಿನ 'ಇಲಿ ವಾರ' ಎಂದುಮೂಷಕನಿಗೆ ಪೂಜೆ ಮಾಡುವುದು ಎಲ್ಲೆಡೆ ಕಂಡು ಬರುವ ಪದ್ಧತಿ. ಆದರೆ ಇಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡದಿದ್ದರೂ ಇಲಿಗೆ ಪೂಜೆ ಮಾಡುವುದು ಕಡ್ಡಾಯ.
ನೇಕಾರರಿಗೆ ತಮ್ಮ ಮಗ್ಗ, ಲಾಳವೇ ಜೀವ ದ್ರವ್ಯ. ಸಂಕಷ್ಟದಲ್ಲಿರುವ ಉದ್ಯಮಕ್ಕೆ ಇನ್ನಷ್ಟು ತೊಂದರೆ ಕೊಡುವುದು ಇಲಿರಾಯ. ಈ ಮೂಷಕನ ತೃಪ್ತಿಗೆ ಮಣ್ಣಿನ ಇಲಿಗಳನ್ನು ಮಾಡಿ, ಕಾಯಿ, ಕಡಬು ನೈವೇದ್ಯ ಹಿಡಿದು ಪೂಜೆ ಮಾಡುವುದು ಬಹು ಹಿಂದಿನಿಂದ ಬಂದ ಸಂಪ್ರದಾಯ.
ಇದರಲ್ಲಿ ಹಿಂದೂಗಳ ಜೊತೆ ಮುಸ್ಲಿಮರು ಭಾಗವಹಿಸಿ ಪೂಜೆ ಮಾಡುವುದು ಇನ್ನೂ ವಿಶೇಷ. ತಮ್ಮ ಮಗ್ಗ, ನೂಲು, ದಾರ, ರೇಷ್ಮೆ ವಸ್ತ್ರಗಳನ್ನು ಹಾಳು ಮಾಡದಂತೆ ಇಲಿಗೆ ಸಂತೃಪ್ತ ಭೋಜನದ ಜೊತೆಗೆ 'ತಮಗೆ ಕಾಟ ಕೊಡಬೇಡ' ಎಂದು ಭಕ್ತಿಯಿಂದ ಪೂಜೆ ಮಾಡುವುದು ವಿಶೇಷವಾಗಿ ಕಂಡು ಬರುತ್ತದೆ.
ಸಹಸ್ರಾರ್ಜುನ ಕ್ಷತ್ರೀಯ ಸಮಾಜ, ಹಟಗಾರರು, ಮುಸ್ಲಿಂ, ದೇವಾಂಗ ಸೇರಿದಂತೆ ಮುಂತಾದ ಜಾತಿಯವರು ಕೊಪ್ಪಳ ತಾಲ್ಲೂಕಿನ ಭಾಗ್ಯನಗರದಲ್ಲಿ ನೆಲೆಸಿದ್ದು, ನೇಕಾರಿಕೆಯೇ ಪ್ರಮುಖ ವೃತ್ತಿ. ತಮ್ಮ ತೊಂದರೆಯ ನಡುವೆಯೇ ಪೂಜೆಯ ಎಲ್ಲ ಸಾಮಗ್ರಿಗಳನ್ನು ತಂದು ಗಣಪತಿಗೆ ಸಲ್ಲಿಸುವ ಹಾಗೆ ಶಾಸ್ತ್ರೀಯವಾಗಿ ವಿಧಿ-ವಿಧಾನ ಕೈಗೊಂಡು ಇಲಿಯನ್ನು ಪ್ರಾರ್ಥಿಸುವುದು ಕಂಡು ಬರುತ್ತದೆ.
'ಇಲಿ ಪೂಜೆ ಮಾಡುವುದರಿಂದ ನಮ್ಮ ಸಾಮಗ್ರಿಗಳು ನಾಶವಾಗಿಲ್ಲ. ಸಂಪ್ರದಾಯವೋ ನಮಗೆ ತಿಳಿದಿಲ್ಲ. ಪೂಜೆ ಮಾಡುವುದರಿಂದ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ' ಎನ್ನುತ್ತಾರೆ ಪೀರಸಾಬ್ ಭೈರಾಪುರ.
'ಭಾಗ್ಯ ನಗರದ ಸೀರೆಗೆ ದೇಶದಾದ್ಯಂತ ಬೇಡಿಕೆ ಇದೆ. ಇಲ್ಲಿನ ಕಾಟನ್ ಬಟ್ಟೆಗಳಿಗೂ ಎಲ್ಲೆಡೆ ಮಾರುಕಟ್ಟೆ ಇದೆ. ನೂರಾರು ಮಗ್ಗಗಳು ಕಾರ್ಯ ನಿರ್ವಹಿಸುತ್ತಿದ್ದು, ಅದರಲ್ಲಿಯೇ ಜೀವನ ಕಂಡುಕೊಂಡಿದ್ದೇವೆ' ಎಂದು ಹೇಳುತ್ತಾರೆ ಅವರು.
ಇಲ್ಲಿ ರೇಷ್ಮೆ ಸೀರೆಗಳು ತಯಾರಾಗುತ್ತಿದ್ದು, ಅವುಗಳಿಗೂ ಬೇಡಿಕೆ ಇದೆ. ರೇಷ್ಮೆಯನ್ನು ದಿಂಡಿನ ಆಕಾರದಲ್ಲಿ ಸುತ್ತಿ ಮಗ್ಗಕ್ಕೆ ಹಾಕಲು ಸಂಗ್ರಹಿಸಿ ಇಟ್ಟುಕೊಂಡಿರುತ್ತಾರೆ. ಇವುಗಳನ್ನು ಇಲಿಗಳು ಕಡಿದರೆ ಲಕ್ಷಾಂತರ ಹಾನಿಯಾಗುತ್ತದೆ. ಹತ್ತಿ ನೂಲನ್ನು ಕಡಿದರೆ ಏನಾದರೂ ಮಾಡಬಹುದು. ಆದರೆ ರೇಷ್ಮೆ ಎಳೆ ತುಂಡಾದರೆ ಅದನ್ನು ಮತ್ತೆ ಹೆಣೆದು ಸೀರೆ ನೇಯ್ದೆರೆ ಅದಕ್ಕೆ ಬೆಲೆ ಇರಲ್ಲ ಎಂದು ಹೇಳಿದರು.
ಈ ಎಲ್ಲ ಕಾರಣದಿಂದ ಇಲಿಗಳಿಗೆ ಇಲ್ಲಿ ಅಗ್ರ ಪೂಜೆ. ಮನೆ ಮಂದಿಯಲ್ಲಿ ಪ್ರಾರ್ಥಿಸಿ ಊಟ ಮಾಡಿ, ಇಲಿ ಓಡಾಡುವ ಪ್ರದೇಶದಲ್ಲಿ ನೈವೇದ್ಯ ಇಟ್ಟು ಬರುತ್ತಾರೆ. ಅದನ್ನು ಇಲಿ ತಿಂದರೆ ತಮಗೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇರುವುದರಿಂದ ಚತುರ್ಥಿಯ ಎರಡನೇ ದಿನ ಇಲಿ ಪೂಜೆ ಎಂದೇ ಹೆಸರುವಾಸಿಯಾಗಿದೆ.
*ಭಾಗ್ಯ ನಗರದ ಬಹುತೇಕ ನೇಕಾರ ಕುಟುಂಬಗಳು ಇಲಿ ಪೂಜೆಯನ್ನು ಶ್ರದ್ಧೆಯಿಂದ ಮಾಡಿಕೊಂಡು ಬಂದಿದ್ದಾರೆ. ಅವು ಉದ್ಯಮಕ್ಕೆ ತೊಂದರೆ ಮಾಡದಿರಲಿ ಎಂದು ಪ್ರಾರ್ಥಿಸಿ ಪೂಜೆ ಸಲ್ಲಿಸುತ್ತೇವೆ
-ಪೀರಸಾಬ್ ಭೈರಾಪುರ, ಭಾಗ್ಯನಗರದ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.