ADVERTISEMENT

ಗಂಗಾವತಿ | ಕಾರ್ಯಕ್ರಮ ನಡೆಸಲು ಎರಡೂ ಮಠಗಳಿಗೆ ಅನುಮತಿ ನಿರಾಕರಣೆ

​ಪ್ರಜಾವಾಣಿ ವಾರ್ತೆ
Published 28 ಜೂನ್ 2023, 16:05 IST
Last Updated 28 ಜೂನ್ 2023, 16:05 IST
 ನವವೃಂದಾವನ ಗಡ್ಡೆ (ಪ್ರಾತಿನಿಧಿಕ ಚಿತ್ರ)
ನವವೃಂದಾವನ ಗಡ್ಡೆ (ಪ್ರಾತಿನಿಧಿಕ ಚಿತ್ರ)   

ಗಂಗಾವತಿ (ಕೊಪ್ಪಳ ಜಿಲ್ಲೆ): ತಾಲ್ಲೂಕಿನ ಆನೆಗೊಂದಿಯ ನವವೃಂದಾವನ ಗಡ್ಡೆಯಲ್ಲಿ ಜು. 6ರಿಂದ ಮೂರು ದಿನ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡುವಂತೆ ಉತ್ತರಾದಿ ಮತ್ತು ರಾಯರ ಮಠದವರು ಮಾಡಿದ್ದ ಮನವಿಯನ್ನು ತಾಲ್ಲೂಕು ಆಡಳಿತ ಬುಧವಾರ ತಿರಸ್ಕರಿಸಿದೆ.

‘ಒಂದೇ ಸಮಯದಲ್ಲಿ ರಾಯರಮಠದವರು ಜಯತೀರ್ಥರ ಆರಾಧನೆ ಮತ್ತು ಉತ್ತರಾದಿಮಠದವರು ರಘುವರ್ಯರ ಮಹಿಮೋತ್ಸವ ಆಯೋಜಿಸಲು ಅನುಮತಿ ನೀಡುವಂತೆ ಕೋರಿದ್ದರು. ಒಂದು ವೇಳೆ ಅನುಮತಿ ಕೊಟ್ಟಿದ್ದರೆ ಉಭಯ ಮಠದವರು ಪರಸ್ಪರ ಜಗಳ ಮಾಡಿಕೊಂಡರೆ ಕಾನೂನು ಮತ್ತು ಶಾಂತಿ ಸುವ್ಯವಸ್ಥೆಗೆ ಧಕ್ಕೆ ಬರುತ್ತದೆ. ಆದ್ದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಗಂಗಾವತಿ ತಹಶೀಲ್ದಾರ್‌ ಮಂಜುನಾಥ ತಿಳಿಸಿದ್ದಾರೆ.

ಕಾರ್ಯಕ್ರಮದ ಕುರಿತು ಎರಡೂ ಮಠದವರಿಂದ ಅಭಿಪ್ರಾಯ ಪಡೆಯಲು ಮಂಗಳವಾರ ತಹಶೀಲ್ದಾರ್‌ ಸಮ್ಮುಖದಲ್ಲಿ ಚರ್ಚೆ ನಡೆದಿತ್ತು. ಅಲ್ಲಿ ‘ಕಾರ್ಯಕ್ರಮ ನಡೆಸಲು ನಮಗೇ ಅವಕಾಶ ಕೊಡಬೇಕು’ ಎಂದು ಉಭಯ ಮಠಗಳ ಪ್ರಮುಖರು ಆಗ್ರಹಿಸಿದ್ದರಿಂದ ತಾಲ್ಲೂಕು ಆಡಳಿತ ತನ್ನ ಅಭಿಪ್ರಾಯ ತಿಳಿಸುವುದಾಗಿ ಹೇಳಿತ್ತು. ಬುಧವಾರ ಎರಡೂ ಮಠದವರಿಗೆ ತಹಶೀಲ್ದಾರ್‌ ’ಯಾರಿಗೂ ಅನುಮತಿ ಇಲ್ಲ’ ಎಂದು ಹಿಂಬರಹ ನೀಡಿದ್ದಾರೆ.

ADVERTISEMENT

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ರಾಯರ ಮಠದ ಆನೆಗೊಂದಿ ವ್ಯವಸ್ಥಾಪಕ ಸುಮಂತ ಕುಲಕರ್ಣಿ ‘ನಮ್ಮ ಮಠದ ಕಾನೂನು ತಜ್ಞರೊಂದಿಗೆ ಚರ್ಚಿಸಿ ಮುಂದೆ ಏನು ಮಾಡಬೇಕು ಎನ್ನುವುದನ್ನು ತೀರ್ಮಾನಿಸುತ್ತೇವೆ’ ಎಂದರು.

ಉತ್ತರಾದಿ ಮಠದ ಪರ ವಕೀಲ ಶರದ್‌ ದಂಡಿನ್‌ ’ಕಾರ್ಯಕ್ರಮ ನಡೆಸಲು ನಮ್ಮ ಮಠಕ್ಕೆ ಅನುಮತಿ ಸಿಗಬಹುದು ಎಂದು ನಿರೀಕ್ಷೆ ಇಟ್ಟುಕೊಂಡಿದ್ದೆವು. ಆದರೆ ತಾಲ್ಲೂಕು ಆಡಳಿತ ಎರಡೂ ಮಠಗಳ ಅರ್ಜಿಗಳನ್ನು ತಿರಸ್ಕೃತ ಮಾಡಿದೆ. ಈ ಬೆಳವಣಿಗೆ ಕುರಿತು ನಮ್ಮ ಮಠದ ವಿದ್ವಾಂಸರು ಹಾಗೂ ಕಾನೂನು ತಜ್ಞರ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.