ADVERTISEMENT

‘ಕೆರೆ ನಿರ್ಮಾಣಕ್ಕೆ ಭೂಮಿ ನೀಡಿ ಸಹಕರಿಸಿ’

ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ, ಶಾಸಕ ಬಸವರಾಜ ರಾಯರಡ್ಡಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2024, 5:24 IST
Last Updated 10 ಜುಲೈ 2024, 5:24 IST
ಕುಕನೂರು ತಾಲ್ಲೂಕಿನ ಚಿಕೇನಕೊಪ್ಪ ಗ್ರಾಮದಲ್ಲಿ ಜರುಗಿದ ಚರ್ಚಾ ಸಭೆಯಲ್ಲಿ ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಮಾತನಾಡಿದರು
ಕುಕನೂರು ತಾಲ್ಲೂಕಿನ ಚಿಕೇನಕೊಪ್ಪ ಗ್ರಾಮದಲ್ಲಿ ಜರುಗಿದ ಚರ್ಚಾ ಸಭೆಯಲ್ಲಿ ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಮಾತನಾಡಿದರು   

ಕುಕನೂರು: ‘ರಾಜ್ಯದಲ್ಲಿ ಈ ಸಲ ಯಲಬುರ್ಗಾ ಕ್ಷೇತ್ರದಲ್ಲಿ ಕೆರೆ ನಿರ್ಮಿಸಲು ಅನುದಾನ ಹಾಗು ಅವಕಾಶ ಸಿಕ್ಕಿರುವುದು ಕ್ಷೇತ್ರದ ಜನತೆಯ ಸುವರ್ಣ ಅವಕಾಶ. ಕೆರೆ ನಿರ್ಮಾಣಕ್ಕೆ ರೈತರು ಜಮೀನು ನೀಡಿ ಅಭಿವೃದ್ಧಿಗೆ ಸಹಕರಿಸಬೇಕು’ ಎಂದು ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.

ತಾಲ್ಲೂಕಿನ ಚಿಕೇನಕೊಪ್ಪ, ಬಿನ್ನಾಳ, ಯರೆಹಂಚಿನಾಳ ಗ್ರಾಮದಲ್ಲಿ ₹ 970 ಕೋಟಿ ಅನುದಾನದಲ್ಲಿ 38 ಕೆರೆ ನಿರ್ಮಾಣ ಯೋಜನೆಗೆ ಜಮೀನು ಲಭ್ಯತೆಯ ಬಗ್ಗೆ ಹಿರಿಯರು, ರೈತ ಪ್ರತಿನಿಧಿಗಳೊಂದಿಗೆ ಜರುಗಿದ ಚರ್ಚಾ ಸಭೆಯನ್ನೂದ್ದೇಶಿಸಿ ಮಾತನಾಡಿದರು.

‘ಕೂಡಲಸಂಗಮದ ನಾರಾಯಣಪುರದಿಂದ ಯಲಬುರ್ಗಾ ಕ್ಷೇತ್ರಕ್ಕೆ 150 ಕಿ.ಮೀ ದೂರದಿಂದ 600 ಅಡಿ ಎತ್ತರದಲ್ಲಿರುವ ನಮ್ಮ ಕ್ಷೇತ್ರಕ್ಕೆ ನೀರು ಬರುವುದು ಸುಲಭದ ಮಾತಲ್ಲ. ಬಜೆಟ್‌ನಲ್ಲಿ ಕೆರೆ ತುಂಬಿಸಲು ₹ 970 ಕೋಟಿ ಅನುದಾನ ಮಂಜೂರು ಮಾಡಿಸಿದ್ದೇನೆ. ರಾಜ್ಯದಲ್ಲಿಯೇ ನಮ್ಮ ಕ್ಷೇತ್ರದ ಕೆರೆ ತುಂಬಿಸಲು ಅನುದಾನ ಸಿಕ್ಕಿದೆ’ ಎಂದು ಹೇಳಿದರು.

ADVERTISEMENT

‘ನೂತನ ಕೆರೆ ನಿರ್ಮಾಣಕ್ಕೆ ರೈತರು, ಜನರು ಸರ್ಕಾರದ ಭೂ ಸ್ವಾಧೀನ ಬೆಲೆಯಲ್ಲಿ ಭೂಮಿ ನೀಡಬೇಕು. ಇದಕ್ಕೆ ಎಲ್ಲರ ಸಹಕಾರಬೇಕು. ಸಿಎಂ, ಡಿಸಿಎಂ ಕೇಳಿಕೊಂಡು ಕೆರೆ ನಿರ್ಮಿಸುತ್ತೇವೆ. ಹಿಂದೆ ರಾಜ ಮಹಾರಾಜರ ಕಾಲದಲ್ಲಿ ಕೆರೆ ನಿರ್ಮಾಣ ಮಾಡುತ್ತಿದ್ದರು, ಸದ್ಯ ಆ ಕಾಲ ಕ್ಷೇತ್ರಕ್ಕೆ ಬಂದಿದೆ. ಇದೊಂದು ನಿಜಕ್ಕೂ ಸುವರ್ಣ ಅವಕಾಶ. ಇದನ್ನು ಕಳೆದುಕೊಳ್ಳುವುದು ಬೇಡ. ಪಕ್ಷಾತೀತವಾಗಿ ಅಭಿವೃದ್ಧಿಗೆ ಸಹಕರಿಸೋಣ. 38 ಕೆರೆ ನಿರ್ಮಾಣಕ್ಕೆ ಗ್ರಾಮವೊಂದಕ್ಕೆ 50ಎಕರೆ ಜಮೀನು ಬೇಕು. ರೈತರು ತ್ವರಿತವಾಗಿ ಭೂಮಿ ನೀಡಬೇಕು’ ಎಂದು ಹೇಳಿದರು.

ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತದ ಎಂಜಿನಿಯರ್ ಮಂಜುನಾಥ,‘ಈ ಕೆರೆ ನಿರ್ಮಾಣದ ಅವಕಾಶ ಕಳೆದುಕೊಳ್ಳಬೇಡಿ. ಕೂಡಲಸಂಗಮದ ನಾರಾಯಣಪೂರ ಹಿನ್ನೀರಿನಿಂದ ನೀರು ತಂದು ಕುಡಿಯಲು ಹಾಗೂ ನೀರಿನ ಅಭಾವ ನೀಗಿಸಲು, ಅಂತರ್ಜಲ ಮಟ್ಟ ಹೆಚ್ಚಿಸಲು ಶಾಸಕ ಬಸವರಾಜ ರಾಯರಡ್ಡಿ ದೊಡ್ಡ ಯೋಜನೆ ತಂದಿದ್ದಾರೆ. ಜನರು ಸಹಕಾರ ನೀಡಿ ಅವಕಾಶ ಸದ್ಭಳಕೆ ಮಾಡಿಕೊಳ್ಳಬೇಕು’ ಎಂದು ಹೇಳಿದರು.

ಎಡಿಸಿ ಮಹೇಶ ಮಾಲಗಿತ್ತಿ, ತಹಶೀಲ್ದಾರ್ ಪ್ರಾಣೇಶ, ತಾಲ್ಲೂಕು ಪಂಚಾಯಿತಿ ಇಒ ಸಂತೋಷ ಬಿರಾದಾರ ಪಾಟೀಲ, ಮೌನೇಶ್ವರ ಪಾಟೀಲ, ನವಲಿ ಹಿರೇಮಠ, ಬಸವರಾಜ ಉಳ್ಳಾಗಡ್ಡಿ, ಯಂಕಣ್ಣ ಯರಾಶಿ, ಕೆರಿಬಸಪ್ಪ ನಿಡಗುಂದಿ, ನಾರಾಯಣಪ್ಪ ಹರಪನ್ಹಳ್ಳಿ, ಮಂಜುನಾಥ ಕಡೇಮನಿ, ಸಂಗಮೇಶ ಗುತ್ತಿ, ಶಿವನಗೌಡ ದಾನರಡ್ಡಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.