ಕೊಪ್ಪಳ: ‘ಯಾರೇ ಆಗಲಿ ಕೇವಲ ತಮ್ಮ ವೃತ್ತಿ ಮಾತ್ರವಲ್ಲದೆ ಅದರಾಚೆಗೂ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡರೆ ಮಾತ್ರ ಪರಿಪೂರ್ಣ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ರತ್ನಂ ಪಾಂಡೆಯ ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಜ್ಯ ಯುವ ಸಂಘಗಳ ಒಕ್ಕೂಟ, ನೆಹರೂ ಯುವ ಕೇಂದ್ರಗಳ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ನಡೆದ ಜಿಲ್ಲಾಮಟ್ಟದ ಯುವಜನೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ‘ಮಕ್ಕಳು ಕೇವಲ ಓದಿನ ದಾಸರಾಗದೇ ಪಠ್ಯೇತರ ಚಟುವಟಿಕೆಯತ್ತಲೂ ಗಮನ ಹರಿಸಬೇಕು. ಪ್ರತಿಯೊಬ್ಬರಿಗೂ ಬದುಕಿನಲ್ಲಿ ತಮ್ಮದೇ ಆದ ಗಮ್ಯವಿದ್ದರೂ ಅನೇಕ ಸಲ ಎಲ್ಲರಿಗೂ ಗುರಿ ಮುಟ್ಟಲು ಆಗುವುದಿಲ್ಲ. ಹಾಗೆಂದು ನಿರಾಶೆಗೆ ಒಳಗಾಗದೆ ಬೇರೆ ಕೌಶಲಗಳನ್ನು ಕಲಿತು ಬದುಕು ರೂಪಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
‘ಜಿಲ್ಲೆಯಲ್ಲಿ ಇನ್ನಷ್ಟು ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಪ್ರೋತ್ಸಾಹಿಸಲು ಇಲಾಖೆಗೆ ನೀಡುವ ಅನುದಾನದಲ್ಲಿ ಮತ್ತಷ್ಟು ಹೆಚ್ಚಳ ಮಾಡಲಾಗುವುದು. ಬೇಕಾದ ಸೌಲಭ್ಯಗಳ ಬಗ್ಗೆ ಕ್ರಿಯಾಯೋಜನೆ ಸಿದ್ಧಪಡಿಸಿ ಕೊಡಬೇಕು. ಕ್ರೀಡಾ ಸೌಲಭ್ಯಗಳನ್ನು ಹೆಚ್ಚಿಸಲು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಲ್ಲಿ ₹5 ಕೋಟಿ ಅನುದಾನ ಲಭಿಸಿದೆ’ ಎಂದು ತಿಳಿಸಿದರು.
ಇತ್ತೀಚೆಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಸನ್ಮಾನ ಸ್ವೀಕರಿಸಿ ಮಾತನಾಡಿ, ‘ಸಾಹಿತ್ಯ ಮತ್ತು ಕಲೆಯ ಅಭಿರುಚಿಗಳನ್ನು ಬೆಳೆಸಿಕೊಳ್ಳಬೇಕು. ಅದರ ಮೂಲಕ ಪ್ರಶ್ನಿಸುವ ಮನೋಭಾವ ಮತ್ತು ತಮಗೆ ಬೇಕಾದ ಸೌಕರ್ಯ ಪಡೆದುಕೊಳ್ಳಲು ಸಾಧ್ಯವಾಗುತ್ತದೆ’ ಎಂದರು.
‘ಜಿಲ್ಲೆ ಜಾನಪದ ಕಲೆಗಳಿಂದ ಶ್ರೀಮಂತವಾಗಿದ್ದು, ದೇವರ ಆರಾಧನೆಯೊಂದೇ ಧರ್ಮವಲ್ಲ. ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ಕೂಡ ಅಗತ್ಯ. ಯಾವುದೇ ಕೆಲಸ ಮಾಡಿದರೂ ಆರಂಭದಲ್ಲಿ ಕುಹಕ ಸಹಜ. ಅದನ್ನು ಮೀರಿಯೂ ಹೋರಾಟ ಮಾಡಿದರೆ ಬದುಕಿನಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ’ ಎಂದು ತಿಳಿಸಿದರು.
ಕನಾ೯ಟಕ ಸಂಭ್ರಮ 50 ಅಂಗವಾಗಿ ರಾಜ್ಯ ಸರ್ಕಾರದಿಂದ ಪ್ರಶಸ್ತಿ ಪಡೆದ ಕಿನ್ನಾಳ ಕಲೆಯ ಕಲಾವಿದೆ ರುಕ್ಮಿಣಿಬಾಯಿ ಚಿತ್ರಗಾರ ಅವರನ್ನು ಸನ್ಮಾನಿಸಲಾಯಿತು. ನೆಹರೂ ಯುವ ಕೇಂದ್ರದ ಜಿಲ್ಲಾ ಅಧಿಕಾರಿ ಮೋಂಟು ಪತ್ತಾರ, ಸಾಹಿತಿ ಅಕ್ಬರ್ ಸಿ. ಕಾಲಿಮಿಚಿ೯, ಮಂಜುನಾಥ ಗೊಂಡಬಾಳ, ಜ್ಯೋತಿ ಗೊಂಡಬಾಳ, ಶ್ರೀನಿವಾಸ ಕಂಟ್ಲಿ, ಪತ್ರಕರ್ತ ಜಿ.ಎಸ್. ಗೋನಾಳ, ಜಾನಪದ ಅಕಾಡಮಿ ಸದಸ್ಯ ಮೆಹಬೂಬ ಕಿಲ್ಲೇದಾರ್, ತಾಲ್ಲೂಕು ಕ್ರೀಡಾಧಿಕಾರಿ ಶರಣಬಸವ ಬಂಡಿಹಾಳ, ಕ್ರೀಡಾ ತರಬೇತುದಾರ ಯತಿರಾಜ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಕಥಾ ಸ್ಪರ್ಧೆಯಲ್ಲಿ ದಿವ್ಯಾ ಪ್ರಥಮ
ಯುವ ಜನೋತ್ಸವದ ಕಥಾ ಸ್ಪರ್ಧೆಯಲ್ಲಿ ಡಿಪ್ಲೊಮಾ ಕಾಲೇಜಿನ ವಿದ್ಯಾರ್ಥಿನಿ ದಿವ್ಯಾ ಕಾಂಬಳೇಕರ ಪ್ರಥಮ ಸ್ಥಾನ ಪಡೆದರೆ ರೇಷ್ಮಾ ಬೇಗಂ ದ್ವಿತೀಯ ಸ್ಥಾನ ಗಳಿಸಿದರು. ಜಾನಪದ ಗೀತೆ ವೈಯಕ್ತಿಕ ವಿಭಾಗದಲ್ಲಿ ಬಸನಗೌಡ (ಪ್ರಥಮ) ಪ್ರಶಾಂತ (ದ್ವಿತೀಯ) ಗುಂಪು ಸ್ಪರ್ಧೆಯಲ್ಲಿ ಪಾರ್ವತಿ ಹಿರೇಮಠ ಹಾಗೂ ತಂಡ (ಪ್ರಥಮ) ಮೊನಿಕಾ ಹಾಗೂ ತಂಡ (ದ್ವಿತೀಯ) ಜಾನಪದ ನೃತ್ಯ ಸ್ಪರ್ಧೆಯ ವೈಯಕ್ತಿಕ ವಿಭಾಗದಲ್ಲಿ ದೀಪಾ (ಪ್ರಥಮ) ಗುಂಪು ವಿಭಾಗದಲ್ಲಿ ಸುಮಾ ಹಾಗೂ ತಂಡ (ಪ್ರಥಮ) ಪೂಜಾ ಹಾಗೂ ತಂಡ (ದ್ವಿತೀಯ) ಸ್ಥಾನ ಗಳಿಸಿದರು. ಚಿತ್ರಕಲೆಯಲ್ಲಿ ಶ್ರೇಯಾ ಕಲ್ಲೂರು (ಪ್ರಥಮ) ಶ್ರೀಹರ್ಷಾ (ದ್ವಿತೀಯ) ಘೋಷಣೆ ಸ್ಪರ್ಧೆಯಲ್ಲಿ ಶಿವಮ್ಮ (ಪ್ರಥಮ) ಹಾಗೂ ಕವಿತಾ (ದ್ವಿತೀಯ) ಸ್ಥಾನ ಸಂಪಾದಿಸಿದರು. ಪ್ರತಿ ವಿಭಾಗದಲ್ಲಿ ಮೊದಲ ಸ್ಥಾನ ಗಳಿಸಿದ ಸ್ಪರ್ಧಿಗಳು ರಾಜ್ಯಮಟ್ಟದ ಯುವಜನೋತ್ಸವದಲ್ಲಿ ಪಾಲ್ಗೊಳ್ಳುವರು.
ಕೊಪ್ಪಳದಲ್ಲಿ ರಾಜ್ಯಮಟ್ಟದ ಸ್ಪರ್ಧೆ?
ಯುವ ಜನೋತ್ಸವದ ರಾಜ್ಯಮಟ್ಟದ ಸ್ಪರ್ಧೆಗೆ ಈ ಬಾರಿ ಕೊಪ್ಪಳ ಆತಿಥ್ಯ ವಹಿಸುವ ಸಾಧ್ಯತೆಯಿದೆ. ಕೊಪ್ಪಳ ಅಥವಾ ಮೈಸೂರಿನಲ್ಲಿ ಸ್ಪರ್ಧೆ ನಡೆಸುವ ಬಗ್ಗೆಯೂ ಕ್ರೀಡಾ ಇಲಾಖೆ ಒಲವು ಹೊಂದಿದ್ದು ಈ ಎರಡೂ ಸ್ಥಳಗಳಲ್ಲಿರುವ ಅನುಕೂಲಗಳನ್ನು ಪರಿಶೀಲಿಸುತ್ತಿದೆ. ಕೊಪ್ಪಳದಲ್ಲಿ ಸ್ಪರ್ಧೆ ಆಯೋಜಿಸಿದರೆ ಕಲ್ಪಿಸಬೇಕಾದ ಸೌಲಭ್ಯಗಳ ಬಗ್ಗೆ ಅಧಿಕಾರಿಗಳು ಪರಿಶೀಲಿಸುತ್ತಿದ್ದು ಜನಪ್ರತಿನಿಧಿಗಳು ಸಮ್ಮತಿ ಸೂಚಿಸಿದರೆ ಕೊಪ್ಪಳದಲ್ಲಿಯೇ ರಾಜ್ಯಮಟ್ಟದ ಯುವಜನೋತ್ಸವ ಆಯೋಜನೆಯಾಗುವುದು ನಿಶ್ಚಿತ ಎಂದು ಕ್ರೀಡಾ ಇಲಾಖೆಯ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.