ADVERTISEMENT

ಕಾರಟಗಿ: ಗ್ರಾಮೀಣ ಸೊಗಡಿನ ಸಂಕ್ರಾಂತಿ ಸಂಭ್ರಮ

ಗ್ಲೋಬಲ್ ಪಬ್ಲಿಕ್ ಸ್ಕೂಲ್‌

​ಪ್ರಜಾವಾಣಿ ವಾರ್ತೆ
Published 14 ಜನವರಿ 2024, 16:20 IST
Last Updated 14 ಜನವರಿ 2024, 16:20 IST
ಕಾರಟಗಿಯ ಗ್ಲೋಬಲ್‌ ಪಬ್ಲಿಕ್‌ ಸ್ಕೂಲ್‌ನಲ್ಲಿ ಗ್ರಾಮೀಣ ಸೊಗಡಿನಲ್ಲಿಯ ಭೋಗಿಮಂಟಲು ಸಿದ್ಧಪಡಿಸಲಾಗಿತ್ತು
ಕಾರಟಗಿಯ ಗ್ಲೋಬಲ್‌ ಪಬ್ಲಿಕ್‌ ಸ್ಕೂಲ್‌ನಲ್ಲಿ ಗ್ರಾಮೀಣ ಸೊಗಡಿನಲ್ಲಿಯ ಭೋಗಿಮಂಟಲು ಸಿದ್ಧಪಡಿಸಲಾಗಿತ್ತು   

ಕಾರಟಗಿ: ಪಟ್ಟಣದ ಸಿದ್ಧಲಿಂಗ ನಗರದಲ್ಲಿರುವ ಗ್ಲೋಬಲ್‌ ಪಬ್ಲಿಕ್ ಶಾಲೆ ಮತ್ತು ಪಿಯು ಕಾಲೇಜಿನಲ್ಲಿ ಶನಿವಾರ ಸಂಕ್ರಾಂತಿ ಸಂಭ್ರಮವನ್ನು ಆಚರಿಸಲಾಯಿತು.

ಆಡಳಿತ ಮಂಡಳಿ ಮುಖ್ಯಸ್ಥರು, ವಿದ್ಯಾರ್ಥಿಗಳು ಅಪ್ಪಟ ಗ್ರಾಮೀಣ ಸೊಗಡಿನ ವೇಷಧಾರಿಗಳಾಗಿ ಹಬ್ಬದ ಸಡಗರದಲ್ಲಿ ಪಾಲ್ಗೊಂಡಿದ್ದರು. ‘ಸುಗ್ಗಿಯು ಬಂದಿತು ಹಿಗ್ಗನು ತಂದಿತು’ ಎಂಬ ಜಾನಪದ ಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕೆ. ಅರುಣ ಬಾಬು ಸೂರ್ಯದೇವರಿಗೆ ಪೂಜೆ ಸಲ್ಲಿಸಿ ಮಾತನಾಡಿ, ‘ಹಬ್ಬಗಳು ಸಂಭ್ರಮದ ಜೊತೆಗೆ ಸಂಬಂಧವನ್ನು ಬೆಸೆಯುತ್ತವೆ. ಇಂದಿನ ಪೀಳಿಗೆಗೆ ಹಿಂದಿನ ಸಡಗರವನ್ನು ಪರಿಚಯಿಸಬೇಕಿದೆ. ಒತ್ತಡದ ಜೀವನದ ಮಧ್ಯೆ ಹಬ್ಬ, ಸಂಪ್ರದಾಯಗಳು ಕಣ್ಮರೆಯಾಗುವುದಕ್ಕೆ ಬಿಡಬಾರದು’ ಎಂದರು.

ADVERTISEMENT

ಪ್ರಾಚಾರ್ಯೆ ಮಾಧುರಿ ಅರುಣ ಬಾಬು ಅವರು ಸಂಕ್ರಾಂತಿಯ ಮುಖ್ಯವಾದ ಭಾಗವಾಗಿರುವ ಭೋಗಿಮಂಟಲು ಮತ್ತು ಪೊಂಗಲ್ ಮಾಡುವುದರ ಬಗ್ಗೆ ವಿವರಿಸಿ, ‘ಸಂಪ್ರದಾಯ, ಪರಂಪರೆ, ಸಂಸ್ಕೃತಿಯು ನಮ್ಮ ವೈಭವವನ್ನು ಪ್ರತಿಬಿಂಬಿಸುತ್ತವೆ’ ಎಂದರು.

ಶಿಕ್ಷಕಿ ಮಾಧವಿ ಸಂಕ್ರಾಂತಿ ಹಬ್ಬದ ವಿಶೇಷತೆಯ ಬಗ್ಗೆ ಮಾತನಾಡಿದರು. ಆಡಳಿತ ಮಂಡಳಿ ಮುಖ್ಯಸ್ಥರು, ಶಿಕ್ಷಕರು ಎತ್ತಿನ ಬಂಡಿ ಓಡಿಸಿ ಗಮನ ಸೆಳೆದರು.

ಮಕ್ಕಳಿಂದ ಹರಿದಾಸ ಕೀರ್ತನೆ ನಡೆಯಿತು. ಗ್ರಾಮೀಣ ಮಾದರಿಯಲ್ಲಿ ಗುಡಿಸಲುಗಳನ್ನು ನಿರ್ಮಿಸಿ, ಅಲಂಕಾರ ಮಾಡಲಾಗಿತ್ತು. ವಿದ್ಯಾರ್ಥಿಗಳು ಗೋಧಾದೇವಿ- ರಂಗನಾಥರ ಛದ್ಮವೇಷಧಾರಿಗಳಾಗಿ ಗಮನ ಸೆಳೆದರು. ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಕಾರಟಗಿಯ ಗ್ಲೋಬಲ್‌ ಪಬ್ಲಿಕ್‌ ಸ್ಕೂಲ್‌ನಲ್ಲಿ ಸಂಕ್ರಾಂತಿ ಆಚರಣೆಯ ನಿಮಿತ್ತ ಗುಡಿಸಲುಗಳನ್ನು ನಿರ್ಮಿಸಿರುವುದು

ಸಂಸ್ಥೆಯ ಸಂಸ್ಥಾಪಕರಾದ ಕೊರಿಪಲ್ಲಿ ಸುಬ್ಬರಾವ್ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಸೂರ್ಯರಾವ್‌, ಪ್ರವೀಣ್, ಮನ್ಯ ದಿವ್ಯಭಾರತಿ, ರಾಮಕೃಷ್ಣ, ಲಕ್ಷ್ಮಿ, ಹರೀಶ, ಪೂಜಿತಾ, ಶಾಲೆಯ ವ್ಯವಸ್ಥಾಪಕ ಸಿದ್ದಯ್ಯ ಹಿರೇಮಠ, ಪಾಲಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.