ADVERTISEMENT

ಅಳವಂಡಿ: ಗೌರಿ ಹುಣ್ಣಿಮೆಗೆ ಸಕ್ಕರೆ ಆರತಿ ಸಜ್ಜು

ಜುನಸಾಬ ವಡ್ಡಟ್ಟಿ
Published 27 ನವೆಂಬರ್ 2023, 5:44 IST
Last Updated 27 ನವೆಂಬರ್ 2023, 5:44 IST
ಅಳವಂಡಿ ಗ್ರಾಮದಲ್ಲಿ ಗೌರಿಹುಣ್ಣಿಮೆ ಅಂಗವಾಗಿ ಸಕ್ಕರೆ ಗೊಂಬೆ ಮಾರಾಟ ಮಾಡುತ್ತಿರುವುದು
ಅಳವಂಡಿ ಗ್ರಾಮದಲ್ಲಿ ಗೌರಿಹುಣ್ಣಿಮೆ ಅಂಗವಾಗಿ ಸಕ್ಕರೆ ಗೊಂಬೆ ಮಾರಾಟ ಮಾಡುತ್ತಿರುವುದು    

ಅಳವಂಡಿ: ಭಾರತೀಯ ಸಂಸ್ಕೃತಿ, ಪರಂಪರೆಯಲ್ಲಿ ಅನೇಕ ಜಾತ್ರೆ, ಹಬ್ಬಗಳು ಮನ್ನಣೆ ಪಡೆದಿವೆ. ಅದರಂತೆ ದೀಪಾವಳಿ ನಂತರ ಗೌರಿ ಹುಣ್ಣಿಮೆಯನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಹಬ್ಬ ಹೆಣ್ಣು ಮಕ್ಕಳಿಗೆ ಸಡಗರವಾಗಿದೆ. ಅದರ ಜೊತೆಗೆ ಸಕ್ಕರೆ ಆರತಿ ತಯಾರಿಸುವ ಕಾರ್ಯ ಹಾಗೂ ಮಾರಾಟ ಜೋರಾಗಿದೆ.

ಗೌರಿ ಹುಣ್ಣಿಮೆ ದಿನದಂದು ಹೆಣ್ಣು ಮಕ್ಕಳು ಗೌರಿ ಪದಗಳನ್ನು ಹಾಡುತ್ತಾ, ಸಕ್ಕರೆಯಿಂದ ತಯಾರಿಸಿದ ರಂಗು ರಂಗಿನ ಆರತಿಗಳನ್ನು ತಟ್ಟೆಯಲ್ಲಿ ಇಟ್ಟುಕೊಂಡು ಭಕ್ತಿಯಿಂದ ಗೌರಿಗೆ ಬೆಳಗುತ್ತಾರೆ.

ಸಕ್ಕರೆ ಆರತಿ ತಯಾರಿಕೆ : ಗೌರಿ ಹಬ್ಬ ಎಂಟು - ಹತ್ತು ದಿನಗಳು ಇರುವಾಗಲೇ ಸಕ್ಕರೆ ಆರತಿ ತಯಾರಿಕೆ ಮಾಡಲಾಗುತ್ತದೆ. ಸಕ್ಕರೆ ಗೊಂಬೆಗಳ ತಯಾರಿಕೆ ಒಂದು ಕಲೆಯಾಗಿದೆ. ಸಕ್ಕರೆಗೆ ಅನುಗುಣವಾಗಿ ನೀರು, ನಿಂಬೆರಸ, ಏಲಕ್ಕಿ ಹಾಕಿ ಸಿದ್ಧಗೊಳಿಸಿ, ಒಲೆ ಮೇಲೆ ಪಾಕ ತಯಾರಿಸಲಾಗುತ್ತದೆ. ನಂತರ ಪಾಕ ಸಿದ್ಧಗೊಂಡ ತದನಂತರ ಗೊಂಬೆ ತಯಾರಿಸುವ ಕಟ್ಟಿಗೆಯ ಅಚ್ಚುಗಳಿಗೆ ಹಾಕಿ, ವಿವಿಧ ಆಕರ್ಷಕ ಸಕ್ಕರೆಯ ಗೊಂಬೆಗಳನ್ನು ತಯಾರಿಸಲಾಗುತ್ತದೆ.

ADVERTISEMENT

ಹೋಬಳಿ ವ್ಯಾಪ್ತಿಯಲ್ಲಿ ಸಕ್ಕರೆ ಆರತಿ ತಯಾರಿಕೆ ಜೋರಾಗಿದೆ. ಬಸವಣ್ಣ, ನವಿಲು, ಆನೆ, ಗೋಪುರ, ಒಂಟೆ, ರಥ, ಶಿವ ಪಾರ್ವತಿ, ಕೃಷ್ಣ ರಥ, ಸೇರಿದಂತೆ ವಿವಿಧ ರೀತಿಯ ಪಶುಪಕ್ಷಿಗಳು ಬಣ್ಣದ ಕಲಾಕೃತಿಗಳಾಗಿ ಮೂಡುತ್ತಿವೆ. ಗೊಂಬೆಗಳನ್ನು ಅಚ್ಚುಗಳಿಂದ ತಯಾರಿಸುತ್ತಿದ್ದಾರೆ.

ವಿಶೇಷ ಏನೆಂದರೆ ಕನ್ಯೆ ನಿಶ್ಚಯ ಮಾಡಿಕೊಂಡ ವರನ ಮನೆಯವರು ಕನ್ಯೆಯ ಮನೆಗೆ ಗೌರಿ ಹುಣ್ಣಿಮೆಯಂದು ದಂಡಿಯ ಜತೆಗೆ ಸಕ್ಕರೆ ಗೊಂಬೆಗಳನ್ನು ತೆಗೆದುಕೊಂಡು ಬರುವ ಸಂಪ್ರದಾಯವಿದೆ.

‘ಕಳೆದ 25 ವರ್ಷಗಳಿಂದ ಸಕ್ಕರೆ ಗೊಂಬೆಗಳ ತಯಾರಿಕೆ ಮಾಡುತ್ತಿದ್ದೇನೆ. ಕಳೆದ ವರ್ಷಕ್ಕಿಂತ ಈ ವರ್ಷ ವ್ಯಾಪಾರ ಜೋರಾಗಿದೆ. ಈ ವರ್ಷ ಬರಗಾಲವಿದ್ದರೂ ಹಬ್ಬದ ಆಚರಣೆ ಯಾವುದೇ ಅಡಚಣೆಯಾಗದಂತೆ ವ್ಯಾಪಾರ ಜೋರಾಗಿದೆ. ಗೌರಿ ಹುಣ್ಣಿಮೆಗೆ ಸಕ್ಕರೆ ಆರತಿ ತಯಾರಿಕೆ ಮಾಡಲಾಗಿದೆ. ಕಳೆದ ವರ್ಷ ಕೆಜಿಗೆ ₹80 ಮಾರಾಟ ಮಾಡಲಾಗಿತ್ತು. ಈ ವರ್ಷ ಕೆಜಿಗೆ ₹100 ರಿಂದ ₹120 ರೂಪಾಯಿವರೆಗೆ ಮಾರಾಟ ಮಾಡಲಾಗುತ್ತಿದೆ’ ಎಂದು ಪ್ರಜಾವಾಣಿಗೆ ಆರತಿ ಮಾರಾಟಗಾರ ಅಳವಂಡಿಯ ಮುಸ್ತಫಾ ಗಡಾದ ತಿಳಿಸಿದರು. 

ಗೌರಿ ಹುಣ್ಣಿಮೆ ಅಂಗವಾಗಿ ಸಕ್ಕರೆ ಗೊಂಬೆಗಳನ್ನು ತಯಾರಿಸುತ್ತಿರುವ ಮುಸ್ತಾಫ ಗಡಾದ
ಫಾತೀಮಾ  ವ್ಯಾಪಾರಸ್ಥೆ ಅಳವಂಡಿ

ಶಿವರಂಜಿನಿ ಜನಾದ್ರಿ ಗ್ರಾಮಸ್ಥೆ

ಕಳೆದ ಹಲವಾರು ವರ್ಷಗಳಿಂದ ಕುಟುಂಬದ ಎಲ್ಲರೂ ಸೇರಿ ಸಕ್ಕರೆ ಗೊಂಬೆಗಳನ್ನು ತಯಾರಿಸಿ ವ್ಯಾಪಾರ ಮಾಡುತ್ತಿದ್ದೇವೆ. ಗೌರಿ ಹುಣ್ಣಿಮೆ ಜೀವನ ನಡೆ‌ಸಲು ಆಸರೆಯಾಗಿದೆ

–ಫಾತೀಮಾ ವ್ಯಾಪಾರಸ್ಥೆ ಅಳವಂಡಿ

ಹೆಣ್ಣು ಮಕ್ಕಳಿಗೆ ಸಡಗರ. ಹೆಣ್ಣುಮಕ್ಕಳು ಸೀರೆಯನ್ನುಟ್ಟು ಹಾಡು ಹೇಳುತ್ತಾ ಗೌರಿಗೆ ಸಕ್ಕರೆಯಿಂದ ತಯಾರಿಸಿದ ಆರತಿ ಬೆಳಗುತ್ತಾರೆ

–ಶಿವರಂಜಿನಿ ಜನಾದ್ರಿ ಗ್ರಾಮಸ್ಥೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.