ಕುಷ್ಟಗಿ: ತಾಲ್ಲೂಕಿನ ಕೆಲವೆಡೆ ಹಿಂಗಾರು ಅವಧಿಯಲ್ಲಿ ಬೆಳೆಯಲಾಗಿರುವ ಹುರುಳಿ ಈ ಬಾರಿ ಹುಲುಸಾಗಿ ಬೆಳೆದಿದ್ದು, ರೈತರು ಉತ್ತಮ ಇಳುವರಿಯ ಆಶಾಭಾವನೆ ಹೊಂದಿದ್ದಾರೆ.
ತೊಗರಿ ಬೆಳೆ ಕಟಾವಿನ ನಂತರ ಎರಡನೇ ಬೆಳೆಯಾಗಿ ಹುರುಳಿ ಬಿತ್ತನೆ ಮಾಡಲಾಗಿದ್ದು, ತಾಲ್ಲೂಕು ಸೇರಿದಂತೆ ಸುತ್ತಲಿನ ಪ್ರದೇಶಗಳಲ್ಲಿ ಉತ್ತಮ ರೀತಿಯಲ್ಲಿ ಬೆಳೆದಿದ್ದು ಹಚ್ಚ ಹಸಿರಿನ ಹುರುಳಿ ಹೊಲಗಳು ದಾರಿಹೋಕರ ಕಣ್ಮನ ಸೆಳೆಯುತ್ತಿವೆ.
ಕೃಷಿ ಇಲಾಖೆ ಅಂದಾಜಿನ ಪ್ರಕಾರ ಸುಮಾರು 5 ಸಾವಿರ ಎಕರೆ ಪ್ರದೇಶದಲ್ಲಿ ಬೆಳೆಯುವ ಗುರಿ ಹೊಂದಲಾಗಿತ್ತು. ಆದ ಕೇವಲ 500 ಎಕರೆ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಆದರೆ ವಾಸ್ತವದಲ್ಲಿ ಬಹಳಷ್ಟು ಪ್ರದೇಶದಲ್ಲಿ ಹುರುಳಿ ಬೆಳೆಯಲಾಗಿದ್ದು, ಗುರಿ ಮೀರಿ ಸಾಧನೆಯಾಗಿದೆ ಎಂಬುದು ತಿಳಿದುಬಂದಿದೆ. ಮಸಾರಿ ಜಮೀನಿನಲ್ಲಿ ಮಾತ್ರ ಹುರುಳಿಯನ್ನು ಬೆಳೆಯಲಾಗಿದ್ದು, ಈಗಾಗಲೇ ಬೆಳೆ ತಿಂಗಳ ಅವಧಿಯದ್ದಾಗಿದೆ. ಅಲ್ಲದೇ ರೈತರು ಇನ್ನೂ ಬಿತ್ತನೆ ಕಾರ್ಯದಲ್ಲಿ ನಿರತರಾಗಿದ್ದು, ಬಿತ್ತನೆ ಪ್ರದೇಶ ಇನ್ನೂ ಹೆಚ್ಚಾಗುವ ಅಂದಾಜಿದೆ.
ದ್ವಿದಳಧಾನ್ಯ ಬೆಳೆಗಳಲ್ಲಿ ತೊಗರಿ ಮತ್ತು ಹಿಂಗಾರು ಕಡಲೆಗೆ ಮಾತ್ರ ಅತ್ಯಧಿಕ ಬೇಡಿಕೆಯಾಗಿದ್ದು ನಿರೀಕ್ಷೆಗೂ ಮೀರಿ ರೈತರು ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆ ಬೀಜ ಖರೀದಿಸಿದ್ದಾರೆ. ದ್ವಿದಳ ಧಾನ್ಯಗಳಾದ ತೊಗರಿ, ಕಡಲೆ ವಾಣಿಜ್ಯ ಬೆಳೆಗಳಾಗಿ ಪರಿವರ್ತನೆಗೊಂಡಿವೆ. ಆದರೆ ಇತರೆ ದ್ವಿದಳಧಾನ್ಯ ಬೆಳೆಗಳಿಗೆ ಹೋಲಿಸಿದರೆ ಕೆಲವೇ ರೈತರು ಹುರುಳಿಯನ್ನು ಬೆಳೆಯುತ್ತಿದ್ದಾರೆ.
ತೊಗರಿಗೆ ಹೋಲಿಸಿದರೆ ಹುರುಳಿಯೂ ದರದಲ್ಲಿ ಪೈಪೋಟಿ ನೀಡುತ್ತಿದೆ. ಕಳೆದ ವರ್ಷ ಕ್ವಿಂಟಲ್‌ಗೆ ರೂ ₹ 6000 ರಿಂದ 7000ವರೆಗೂ ಮಾರಾಟವಾಗಿದೆ ಎಂದು ಎಪಿಎಂಸಿ ಮೂಲಗಳು ತಿಳಿಸಿವೆ. ಆಹಾರ ಉತ್ಪನ್ನಗಳಲ್ಲಿ ಹುರುಳಿ ಬಳಕೆಯಾಗುತ್ತಿದ್ದು, ಹೊಟ್ಟು ಉತ್ಕೃಷ್ಟವಾಗಿದ್ದು ಜಾನುವಾರುಗಳ ಆರೋಗ್ಯಕ್ಕೂ ಪೂರಕವಾಗುತ್ತದೆ. ಈ ಬಾರಿ ಬಿತ್ತನೆ ಅವಧಿಯಲ್ಲಿ ಮಳೆಯಾಗಿದ್ದು, ಹುರುಳಿ ಬೆಳೆ ಉತ್ತಮವಾಗಿ ಬೆಳೆದಿದೆ ಎಂದು ಕುರುಬನಾಳದ ಹನುಮಗೌಡ ಹಾಗೂ ಇತರೆ ರೈತರು ವಿವರಿಸಿದರು.
ಬಿಲ್ಲಿ ಹುಳು (ಕಾಯಿ ಕೊರಕ) ಬಾಧೆ ಬಿಟ್ಟರೆ ಹುರುಳಿಗೆ ಬೇರೆ ಯಾವ ಬಾಧೆಯೂ ಇಲ್ಲ. ಈ ಬಾರಿ ಹುರುಳಿ ಬೆಳೆ ಉತ್ತಮವಾಗಿದೆ.ಬಸನಗೌಡ ಕಂದಕೂರು ರೈತ
‘ವೈವಿಧ್ಯ ಬೆಳೆಗಳಿದ್ದರೆ ಬಾಧೆಯೂ ಇಲ್ಲ’
ಬೆಳೆಯಲ್ಲಿ ವೈವಿಧ್ಯತೆ ಇರಬೇಕು. ಅದರಿಂದ ಕೀಟ ರೋಗ ಬಾಧೆ ಇರುವುದಿಲ್ಲ. ತೊಗರಿಗೆ ಹೋಲಿಸಿದರೆ ಹುರುಳಿ ಬಿತ್ತನೆ ಪ್ರದೇಶ ವಿರಳವಾಗಿರುತ್ತದೆ ಅದರಿಂದ ಈ ಬೆಳೆಗೆ ಸಮಸ್ಯೆ ಇಲ್ಲ. ಏಕರೂಪವಾಗಿ ಬೆಳೆದರೆ ಕೀಟಬಾಧೆ ಹೆಚ್ಚು ಎನ್ನುತ್ತಾರೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಅಜ್ಮೀರ್ ಅಲಿ ಬೆಟಗೇರಿ. ತೊಗರಿ ಮತ್ತು ಕಡಲೆಯನ್ನು ವ್ಯಾಪಕವಾಗಿ ಬೆಳೆಯುತ್ತಿರುವುದರಿಂದ ಕೀಟ ರೋಗ ಅಧಿಕ ಹಾಗಾಗಿ ಕ್ರಿಮಿನಾಶಕ ಔಷಧಗಳನ್ನು ಹೆಚ್ಚಾಗಿ ಸಿಂಪಡಿಸಬೇಕಾಗುತ್ತದೆ. ಖರ್ಚೂ ಹೆಚ್ಚು. ಆದರೆ ಹುರುಳಿ ಬಿತ್ತನೆ ಮಾಡಿದ ನಂತರ ಗೊಬ್ಬರ ಕ್ರಿಮಿನಾಶಕ ಸಿಂಪಡಣೆ ಅಗತ್ಯವೇ ಇಲ್ಲದೇ ಬೆಳೆ ರೈತರ ಕೈಸೇರುತ್ತದೆ ಎಂದು ಅವರು 'ಪ್ರಜಾವಾಣಿ'ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.