ADVERTISEMENT

ಅಳವಂಡಿ: ಸರ್ಕಾರಿ ಶಾಲೆಯ ಅಡುಗೆ ಕೊಠಡಿಯ ಚಾವಣಿ ಕುಸಿತ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2024, 15:19 IST
Last Updated 25 ಅಕ್ಟೋಬರ್ 2024, 15:19 IST
ಅಳವಂಡಿ ಸಮೀಪದ ಬೆಟಗೇರಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಬಿಸಿಯೂಟ ಕೊಠಡಿ ಮೇಲ್ಚಾವಣಿ ಕುಸಿದಿದೆ
ಅಳವಂಡಿ ಸಮೀಪದ ಬೆಟಗೇರಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಬಿಸಿಯೂಟ ಕೊಠಡಿ ಮೇಲ್ಚಾವಣಿ ಕುಸಿದಿದೆ   

ಅಳವಂಡಿ: ಸಮೀಪದ ಬೆಟಗೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರೌಢಶಾಲೆಯಲ್ಲಿ ಅಡುಗೆ ಮಾಡಲು ಬಳಕೆ ಮಾಡುತ್ತಿದ್ದ ಕೊಠಡಿಯ ಚಾವಣಿ ಗುರುವಾರ ರಾತ್ರಿ ಕುಸಿದು ಬಿದ್ದಿದೆ.

ಇಲ್ಲಿನ ಪ್ರೌಢಶಾಲೆಯಲ್ಲಿ ಸುಮಾರು 300ಕ್ಕೂ ಹೆಚ್ಚು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಆದರೆ ಮಕ್ಕಳಿಗೆ ಗುಣಮಟ್ಟದ ಅಡುಗೆ ತಯಾರಿಸಲು ಸುಸಜ್ಜಿತವಾದ ಬಿಸಿಯೂಟ ಕೊಠಡಿ ಇಲ್ಲದಂತಾಗಿದೆ.

ಮೊದಲಿನಿಂದಲೂ ಶಾಲೆಯಲ್ಲಿ ಬಿಸಿಯೂಟದ ಕೊಠಡಿ ಇರಲಿಲ್ಲ. ಶಾಲೆಯ ಒಂದು ಹಳೆ ಕೊಠಡಿಯನ್ನು ತಾತ್ಕಾಲಿಕವಾಗಿ ಬಿಸಿಯೂಟ ತಯಾರಿಸಲು ಉಪಯೋಗ ಮಾಡಲಾಗುತ್ತಿತ್ತು. ಗುರುವಾರ ರಾತ್ರಿ ಬಿಸಿಯೂಟ ತಯಾರಿಸುವ ಕೊಠಡಿ ಚಾವಣಿ ಬಿದ್ದು ಮಕ್ಕಳಿಗೆ ಬಿಸಿಯೂಟ ತಯಾರಿಸಲು ಮತ್ತಷ್ಟು ತೊಂದರೆಯಾಗಿದೆ.

ADVERTISEMENT

ಸ್ಥಳಕ್ಕೆ ಭೇಟಿ ನೀಡಿದ ಅಕ್ಷರ ದಾಸೋಹ ಜಿಲ್ಲೆಯ ಅಧಿಕಾರಿ ಅನಿತಾ ಮಾತನಾಡಿ, ಬಿಸಿಯೂಟ ತಯಾರಿಸಲು ತೊಂದರೆಯಾಗುತ್ತಿರುವುದು ಗಮನಕ್ಕೆ ಇದ್ದು, ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು. ಬಿಸಿಯೂಟ ಕೊಠಡಿ ಕಾಮಗಾರಿ ಅಪೂರ್ಣವಾಗಿದೆ. ಬಿಸಿಯೂಟ ಕೊಠಡಿ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗುವುದು’ ಎಂದರು.

ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ಗುಡಿ, ಮುಖ್ಯ ಶಿಕ್ಷಕ ಪರಶುರಾಮ ಸಾಲ್ಮನಿ ಹಾಗೂ ಇತರರು ಇದ್ದರು.

ಬಿಸಿಯೂಟ ಕೊಠಡಿ ನನೆಗುದಿಗೆ: ಬೆಟಗೇರಿ ಸರ್ಕಾರಿ ಪ್ರೌಢ ಶಾಲೆಯ ಬಿಸಿಯೂಟ ಕೊಠಡಿಯು ಕಳೆದ ಹಲವು ವರ್ಷದ ಹಿಂದೆ ನಿರ್ಮಾಣ ಮಾಡಲು ಆರಂಭಿಸಲಾಗಿತ್ತು. ಆದರೆ ಕಳೆದ ಎರಡ್ಮೂರು ವರ್ಷಗಳಿಂದ ಬಿಸಿಯೂಟ ಕೊಠಡಿ ಕಾಮಗಾರಿ ನನೆಗುದಿ ಬಿದ್ದಿವೆ.

ಕಾಮಗಾರಿ ಕೈಗೊಂಡಿದ್ದ ಕೊಠಡಿಯ ಗೋಡೆಗಳು ಸಹ ಶಿಥಿಲಗೊಳುತ್ತಿವೆ. ಸುಸಜ್ಜಿತವಾದ ಬಿಸಿಯೂಟ ಕೊಠಡಿ ನಿರ್ಮಾಣ ಮಾಡಬೇಕು ಎಂಬುದು ಇಲ್ಲಿನ ವಿದ್ಯಾರ್ಥಿಗಳ ಹಾಗೂ ಪೋಷಕರ ಒತ್ತಾಯವಾಗಿದೆ.

ಬೆಟಗೇರಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಬಿಸಿಯೂಟ ಕೊಠಡಿ ಕಾಮಗಾರಿ ಅಪೂರ್ಣವಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.