ADVERTISEMENT

ಕೊಪ್ಪಳ: ಮಹಿಳೆಯರ ಜೊತೆ ಅಸಭ್ಯ ವರ್ತನೆ, ತಲೆ ಮರೆಸಿಕೊಂಡಿದ್ದ ಶಿಕ್ಷಕನ ಬಂಧನ

​ಪ್ರಜಾವಾಣಿ ವಾರ್ತೆ
Published 3 ಜುಲೈ 2022, 6:12 IST
Last Updated 3 ಜುಲೈ 2022, 6:12 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೊಪ್ಪಳ: ಐದು ದಿನಗಳಿಂದ ತಲೆ ಮರೆಸಿಕೊಂಡಿದ್ದ ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಸಿಂಗಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಮಹಮ್ಮದ್ ಅಜರುದ್ದೀನ್ ಎಂಬಾತನನ್ನು ಪೊಲೀಸರು ಭಾನುವಾರ ಬೆಳಿಗ್ಗೆ ಗೋವಾ ಸಮೀಪ ಬಂಧಿಸಿದ್ದಾರೆ.

ಈ ಶಿಕ್ಷಕ ಕೊಪ್ಪಳ ಜಿಲ್ಲೆ ಕಾರಟಗಿಯಲ್ಲಿ ವಾಸವಾಗಿದ್ದ. ಮಹಿಳೆ ಜೊತೆ ಅನೈತಿಕ ಸಂಬಂಧ ಹೊಂದಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಶಿಕ್ಷಣಇಲಾಖೆ ಈಗಾಗಲೇ ಅಮಾನತು ಕೂಡ ಮಾಡಿದೆ.

ದೂರು ದಾಖಲಾಗುತ್ತಿದ್ದಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ತನಿಖೆಗೆ ತಂಡ ರಚನೆ ಮಾಡಿದ್ದರು. ಈ ತಂಡ ಶಿಕ್ಷಕನ ಸ್ವಂತ ಊರು ಧಾರವಾಡ ಸಮೀಪದ ಅಮ್ಮಿನಭಾವಿಯಲ್ಲಿ ಶೋಧ ನಡೆಸಿ ಅಲ್ಲಿ ಒಂದಷ್ಟು ಮಾಹಿತಿ ಕಲೆಹಾಕಿತ್ತು.

ADVERTISEMENT

‘ಶಿಕ್ಷಕ ಬೇರೆ ಮಹಿಳೆಯರ ಜೊತೆಗೂ ಅಸಭ್ಯವಾಗಿ ನಡೆದುಕೊಂಡ ಬಗ್ಗೆ ಮೊದಲಿನಿಂದಲೂ ದೂರುಗಳು ಕೇಳಿ ಬಂದಿದ್ದವು. ಆದರೆ, ಯಾರೂ ಲಿಖಿತವಾಗಿ ದೂರು ದಾಖಲಿಸಿರಲಿಲ್ಲ. ಮಹಿಳೆಯೊಬ್ಬರು ಈಗ ದೂರು ನೀಡಿದ್ದು, ಅದರ ಆಧಾರದ ಮೇಲೆ ಶಿಕ್ಷಕನನ್ನು ಗೋವಾ ಸಮೀಪ ಬಂಧಿಸಿದ್ದೇವೆ‘ ಎಂದು ಪೊಲೀಸ್ ಸಿಬ್ಬಂದಿಯೊಬ್ಬರು ತಿಳಿಸಿದರು. ಈ ವಿಷಯವನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರುಣಾಂಗ್ಷು ಖಚಿತಪಡಿಸಿದ್ದಾರೆ.

ಹಿನ್ನೆಲೆಯೇನು?
ಮಗಳಿಗೆ ಟ್ಯೂಷನ್ ಹೇಳಿಕೊಡುವುದರ ಜೊತೆಗೆ ಸರ್ಕಾರಿ ಸೌಲಭ್ಯ ಕಲ್ಪಿಸುವುದಾಗಿ ಹೇಳಿ ಮಹಮ್ಮದ್ ಅಜರುದ್ದೀನ್‌ ನನ್ನನ್ನು ಓಲೈಸಿ, ಮನೆಗೆ ಕರೆದೊಯ್ದಿದ್ದ. ಲೈಂಗಿಕ ಕ್ರಿಯೆಗೆ ಸಹಕರಿಸಲು ಪದೇ ಪದೇ ಒತ್ತಾಯಿಸಿದ್ದ. ಇಲ್ಲದಿದ್ದರೆ, ವಿಡಿಯೊಗಳನ್ನು ತವರು ಮನೆಯವರಿಗೆ ಕಳುಹಿಸಿ, ಮಾನ–ಮರ್ಯಾದೆ ತೆಗೆಯುವುದಾಗಿ ಬೆದರಿಕೆ ಒಡ್ಡಿದ್ದ ಎಂದು ಮಹಿಳೆಯೊಬ್ಬರು ದೂರು ನೀಡಿದ್ದಾರೆ. ಈ ಕುರಿತು ಕಾರಟಗಿ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.