ಕನಕಗಿರಿ (ಕೊಪ್ಪಳ): ಜಿಲ್ಲೆಯ ಕನಕಗಿರಿ ತಾಲ್ಲೂಕಿನ ಹುಲಿಹೈದರ್ ಗ್ರಾಮದಲ್ಲಿ ಗುರುವಾರ ನಡೆದ ಎರಡು ಸಮುದಾಯಗಳ ನಡುವಿನ ಗುಂಪು ಘರ್ಷಣೆಯಿಂದ ಬೂದಿಮುಚ್ಚಿದ ಕೆಂಡದಂಥ ಪರಿಸ್ಥಿತಿ ನಿರ್ಮಾಣವಾಗಿರುವ ಕಾರಣ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಗ್ರಾಮದಲ್ಲಿ ವಾಲ್ಮೀಕಿ ಮೂರ್ತಿ ಪ್ರತಿಷ್ಠಾಪನೆ ಮಾಡುವ ಸಂಬಂಧ ನಾಯಕ ಮತ್ತು ಮುಸ್ಲಿಂ ಸಮಾಜದ ನಡುವೆ ಘರ್ಷಣೆ ನಡೆದಿದ್ದು, ಇದು ಅತಿರೇಕಕ್ಕೆ ತಿರುಗಿದೆ. ಈ ಘರ್ಷಣೆಯಲ್ಲಿ ಯಂಕಪ್ಪ ತಳವಾರ (60), ಪಾಷವಲಿಸಾಬ ಮಾಳಿಗದ್ದಿ (22) ಮೃತಪಟ್ಟಿದ್ದಾರೆ.
‘ವಾಲ್ಮೀಕಿ ಮೂರ್ತಿ ಪ್ರತಿಷ್ಠಾಪನೆ ಮಾಡುವ ಸಂಬಂಧ ಎರಡೂ ಸಮುದಾಯಗಳ ನಡುವೆ ಮೊದಲಿನಿಂದಲೂ ವೈ ಮನಸ್ಸು ಇತ್ತು. ಮೊಹರಂ ಹಬ್ಬದ ಮೂರನೇ ದಿನದ ಕಾರ್ಯಕ್ರಮದ ವೇಳೆ ಪರಸ್ಪರ ಮಾತಿಗೆ ಮಾತು ಬೆಳೆದು ಈ ಘಟನೆ ನಡೆದಿದೆ. ಮುಸ್ಲಿಮರು ಗುರುವಾರ ವಿವಾದದ ಸ್ಥಳದಲ್ಲಿ ಕಾರ್ಯಕ್ರಮ ಆಯೋಜಿಸಿದ್ದರು. ಇದಕ್ಕೆ ನಾಯಕ ಸಮುದಾಯದವರು ಪ್ರಬಲ ವಿರೋಧ ವ್ಯಕ್ತಪಡಿಸಿದ್ದು ಘರ್ಷಣೆಗೆ ಕಾರಣವಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮುನ್ನೆಚ್ಚರಿಕಾ ಕ್ರಮವಾಗಿ ಹುಲಿಹೈದರ್ ಗ್ರಾಮ ಮತ್ತು ಸುತ್ತಲೂ ಎರಡು ಕಿ.ಮೀ. ವ್ಯಾಪ್ತಿಯ ಪ್ರದೇಶದಲ್ಲಿ 144ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಿಗುವಿನ ವಾತಾವರಣ: ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ಹಾಗೂ ಸಿಬ್ಬಂದಿ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.
ಘಟನೆಯಲ್ಲಿ ಧರ್ಮಣ್ಣ ಹರಿಜನ ಎಂಬ ಯುವಕನಿಗೆ ಗಂಭೀರ ಗಾಯವಾಗಿದ್ದು ಮೊದಲು ಗಂಗಾವತಿ ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕರೆ ತರಲಾಗಿದೆ. ಧರ್ಮಣ್ಣ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.