ADVERTISEMENT

ಕೆಆರ್‌ಎಸ್‌ ಪಕ್ಷದಿಂದ ‘ಹಾಸನ ಚಲೊ’ ನಾಳೆ

​ಪ್ರಜಾವಾಣಿ ವಾರ್ತೆ
Published 11 ಮೇ 2024, 15:35 IST
Last Updated 11 ಮೇ 2024, 15:35 IST
ಆಶಾ ವೀರೇಶ
ಆಶಾ ವೀರೇಶ   

ಕೊಪ್ಪಳ: ‘ಹಾಸನ ಸಂಸದ ಪ್ರಜ್ವಲ್ ರೇವಣ್ಣ ತನ್ನ ಬಳಿ ಸಹಾಯ ಯಾಚಿಸಿ ಬಂದ ಹೆಣ್ಣುಮಕ್ಕಳನ್ನು ಅಧಿಕಾರ ಮತ್ತು ಸಾಂದರ್ಭಿಕ ಲಾಭ ಪಡೆದು ಲೈಂಗಿಕವಾಗಿ ಶೋಷಣೆ ಮಾಡಿದ ಆರೋಪ ಹೊತ್ತಿದ್ದಾರೆ. ಅವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ನಮ್ಮ ಪಕ್ಷದ ವತಿಯಿಂದ ಮೇ 13ರಂದು ಹಾಸನ ಚಲೊ ಹಮ್ಮಿಕೊಂಡಿದ್ದೇವೆ’ ಎಂದು ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್‌) ಜಿಲ್ಲಾ ಘಟಕದ ಅಧ್ಯಕ್ಷೆ ಆಶಾ ವೀರೇಶ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಅಬಲೆಯರನ್ನು ಗೌರವಿಸೋಣ ಅತ್ಯಾಚಾರಿಗೆ ತಕ್ಕ ಶಾಸ್ತಿ ಮಾಡೋಣ: ಹಾಸನ ಚಲೊ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಅಲ್ಲಿಗೆ ಹೋಗಿ ಹೋರಾಟ ಮಾಡಲಾಗುವುದು’ ಎಂದು ತಿಳಿಸಿದರು. 

‘ಜವಾಬ್ದಾರಿಯುತ ಸ್ಥಾನದಲ್ಲಿರುವ ಪ್ರಜ್ವಲ್ ಬಳಿ ಸಹಾಯ ಕೋರಿ ಬಂದವರನ್ನು ಶೋಷಣೆ ಮಾಡಿರುವುದರಿಂದಾಗಿ ಶೋಷಣೆಗೆ ಒಳಗಾದ ಹೆಣ್ಣು ಮಕ್ಕಳು ಬಲಿಪಶುಗಳಾಗಿದ್ದಾರೆ. ಇದನ್ನು ನಾಗರಿಕ ಸಮಾಜ ಸೂಕ್ಷ್ಮವಾಗಿ ಅರ್ಥ ಮಾಡಿಕೊಳ್ಳಬೇಕು. ಸಂತ್ರಸ್ತ ಮಹಿಳೆಯರ ಕುಟುಂಬಸ್ಥರು, ಸಂಬಂಧಿಕರು ಮತ್ತು ಪರಿಚಯಸ್ಥರು ಸೇರಿದಂತೆ ಇಡೀ ಸಮಾಜ ಈ ಮಹಿಳೆಯರೊಂದಿಗೆ ನಿಂತು ಅವರಲ್ಲಿ ಧೈರ್ಯ ತುಂಬುವ ವಾತಾವರಣ ಸೃಷ್ಟಿಸಬೇಕಾಗಿದೆ’ ಎಂದು ತಿಳಿಸಿದರು.

ADVERTISEMENT

‘ವಿಕೃತಿ ಮೆರೆದಿರುವ ಪ್ರಜ್ವಲ್ ರೇವಣ್ಣ ಅವರನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಪೆನ್ ಡ್ರೈವ್ ಪ್ರಕರಣವು ಪಾರದರ್ಶಕವಾಗಿ ತನಿಖೆ ಆಗುವಂತೆ ಸರ್ಕಾರ ಕ್ರಮ ವಹಿಸಬೇಕು. ವಿದೇಶಕ್ಕೆ ಪರಾರಿಯಾಗಿರುವ ಪ್ರಜ್ವಲ್‌ನನ್ನು ಶೀಘ್ರವಾಗಿ ಬಂಧಿಸಬೇಕು’ ಎಂದು ಆಗ್ರಹಿಸಿದರು.

ಪಕ್ಷದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಭಾವನಾ ಶಾಸ್ತ್ರಿ, ಜಿಲ್ಲಾ ಕಾರ್ಯದರ್ಶಿಗಳಾದ ಗಣಪತಿ ಶಿಂಧೆ, ಕನಕಪ್ಪ, ನಾಯಕಿ ಸುಮನ್‌ದೇವಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.