ADVERTISEMENT

ಕುಷ್ಟಗಿ: ನಿರಂತರ ಮಳೆ, ನೀರುಪಾಲಾದ ಈರುಳ್ಳಿ

ಹಂಚಿನಾಳದಲ್ಲಿ ಮತ್ತೆ ಸುರಿದ ಮಳೆ, ಲಕ್ಷಾಂತರ ಹಾನಿ, ರೈತರ ಸಂಕಷ್ಟ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2024, 15:26 IST
Last Updated 24 ಅಕ್ಟೋಬರ್ 2024, 15:26 IST
ಕುಷ್ಟಗಿ ತಾಲ್ಲೂಕು ಹಂಚಿನಾಳದ ವೆಂಕಣ್ಣ ರಸರೆಡ್ಡಿ ಎಂಬುವವರ ಈರುಳ್ಳಿ ಹಾಳಾಗಿರುವುದು
ಕುಷ್ಟಗಿ ತಾಲ್ಲೂಕು ಹಂಚಿನಾಳದ ವೆಂಕಣ್ಣ ರಸರೆಡ್ಡಿ ಎಂಬುವವರ ಈರುಳ್ಳಿ ಹಾಳಾಗಿರುವುದು   

ಕುಷ್ಟಗಿ: ಪರಿಶ್ರಮದಿಂದ ಈರುಳ್ಳಿ ಬೆಳೆ ಚೆನ್ನಾಗಿ ಬೆಳೆದಿತ್ತು, ಇನ್ನೇನು ಕೆಲ ದಿನಗಳಲ್ಲಿ ಮಾರುಕಟ್ಟೆಗೆ ಹೋಗಬೇಕೆನ್ನುವಷ್ಟರಲ್ಲಿ ಅದೃಷ್ಟ ಕೈಕೊಟ್ಟಿದೆ. ಸತತ ಮಳೆಯಿಂದಾಗಿ ಟನ್‌ಗಟ್ಟಲೇ ಈರುಳ್ಳಿ ಬೆಳೆ ಕೊಳೆತು ಹೋಗಿದೆ.

ತಾಲ್ಲೂಕಿನ ಹಂಚಿನಾಳ ಗ್ರಾಮದಲ್ಲಿನ ವೆಂಕಣ್ಣ ರಸರೆಡ್ಡಿ ಎಂಬ ರೈತರ ಜಮೀನಲ್ಲಿ ಕಂಡುಬರುವ ಸದ್ಯದ ದೃಶ್ಯವಿದು. ನಾಲ್ಕು ಎಕರೆ ಜಮೀನಿನಲ್ಲಿ ಮುಂಗಾರು ಹಂಗಾಮಿನಲ್ಲಿ ಈರುಳ್ಳಿ ನಾಟಿ ಮಾಡಿದ್ದರು. ಪ್ರಾರಂಭದಲ್ಲಿಯೇ ಅತಿ ಹೆಚ್ಚು ಮಳೆ ಬಂದು ಶಿಲೀಂಧ್ರನಾಶಕ ಇತರೆ ಸಿಂಪಡಣೆಗೆ ಈ ರೈತ ಸಾಕಷ್ಟು ಖರ್ಚು ಮಾಡಿ ಬೆಳೆಯನ್ನು ಉತ್ತಮ ರೀತಿಯಲ್ಲಿ ಬೆಳೆಸಿದ್ದರು.

ಕಟಾವು ಆಗುವ ಹಂತದಲ್ಲಿ ನಿರಂತರ ಮಳೆ ಬಂದಿದ್ದರಿಂದ ಬಹಳಷ್ಟು ಈರುಳ್ಳಿ ಗಡ್ಡೆ ಕೊಳೆತಿದೆ. ನಂತರ ಮಳೆ ಬಿಡುವು ಮಾಡಿಕೊಂಡಿದ್ದರಿಂದ ಉಳಿದ ಈರುಳ್ಳಿಯನ್ನು ವಾರದ ಹಿಂದೆಯೇ ಕಿತ್ತು ಹಾಕಿದ್ದೇವೆ. ಇನ್ನೂ ಮೂರ್ನಾಲ್ಕು ದಿನಗಳಲ್ಲಿ ಈರುಳ್ಳಿಯ ಮೊದಲ ಲಾರಿ ಬೆಂಗಳೂರು ತಲುಪಬೇಕಿತ್ತು. ಆದರೆ ಬುಧವಾರ ಮಧ್ಯಾಹ್ನ ಮತ್ತೆ ಮಳೆ ಬಂದು ಕಿತ್ತಿಹಾಕಿದ ಗಡ್ಡೆ ಹಾಳಾಗಿದೆ. ಹೊಲದಲ್ಲಿ ನೀರು ನಿಂತಿದ್ದು ಕಪ್ಪು ಜಮೀನಿನಿಂದ ಈರುಳ್ಳಿಯನ್ನು ಹೊರ ತರುವುದಕ್ಕೂ ಸಾಧ್ಯವಿಲ್ಲದಂತಾಗಿದ್ದು, ಕೈಗೆ ಬಂದ ತುತ್ತು ಬಾಯಿ ತಲುಪದಂತಾಗಿದೆ ಎಂದು ರೈತ ವೆಂಕಣ್ಣ, ಶರಣಪ್ಪ ಗಡಗಿ ಅವರು ‘ಪ್ರಜಾವಾಣಿ'ಗೆ ತಮ್ಮ ಅಳಲು ತೋಡಿಕೊಂಡರು.

ADVERTISEMENT

ಉತ್ತಮ ದರ:

ಈ ಬಾರಿಯೂ ಈರುಳ್ಳಿಗೆ ಉತ್ತಮ ದರ ಇದ್ದು, ಬೆಂಗಳೂರು ಮಾರುಕಟ್ಟೆಯಲ್ಲಿ ಒಣಗಿದ ಈರುಳ್ಳಿಗೆ ಕ್ವಿಂಟಲ್‌ಗೆ ₹4,500 ಬೆಲೆ ಇದೆ. ಕನಿಷ್ಟ ಎಂದರೂ ಎಕರೆಗೆ ಎರಡು ನೂರು ಚೀಲ ಇಳುವರಿ ಬರುತ್ತಿತ್ತು. ನಾಲ್ಕು ಎಕರೆಗೆ ಅಂದಾಜು ₹10 ಲಕ್ಷ ಆದಾಯ ನಿರೀಕ್ಷೆ ಇತ್ತು. ಈರುಳ್ಳಿ ಹೊಲ ಬಿಟ್ಟು ಹೊರಗೆ ಬರುವ ಸ್ಥಿತಿಯಲ್ಲಿಲ್ಲ. ಬೆಳೆ ಬೆಳೆಯುವುದಕ್ಕೆ ಸುಮಾರು ಮೂರು ಲಕ್ಷ ಖರ್ಚು ತಗುಲಿದೆ ಎಂದು ರೈತರು ಗೋಳು ತೋಡಿಕೊಂಡರು.

ವಾರದೊಳಗೆ ಈರುಳ್ಳಿ ಮಾರುಕಟ್ಟೆ ಸೇರಿ ದೀಪಾವಳಿ ವೇಳೆಗೆ ಕೈಗೆ ಒಳ್ಳೆಯ ಆದಾಯ ಬರುತ್ತಿತ್ತು. ಸತತ ಮಳೆ ನಮ್ಮನ್ನು ಕಂಗಾಲಾಗಿಸಿದೆ.
ಶರಣಪ್ಪ ಗಡಗಿ ಹಂಚಿನಾಳ ರೈತ

ಅರ್ಜಿ ಕೊಟ್ಟರೂ ಬಾರದ ಅಧಿಕಾರಿಗಳು

ನಿರಂತರ ಮಳೆಯಿಂದ ಈರುಳ್ಳಿ ಬೆಳೆ ಹಾಳಾಗಿ ಬಹಳಷ್ಟು ಹಾನಿ ಸಂಭವಿಸಿದ್ದು ಮಾಡಿದ ಖರ್ಚು ಸಹ ಮರಳಿ ಬರುವ ಆಸೆ ಕ್ಷೀಣಿಸಿದೆ. ಇಂಥ ಬೆಳೆ ಬೆಳೆಯುವುದಕ್ಕೆ ಪುನಃ ಮುಂದಿನ ಮುಂಗಾರಿನವರೆಗೂ ಕಾಯಬೇಕು. ಸರ್ಕಾರ ನೆರವು ನೀಡುತ್ತದೆ ಎಂದು ತಿಳಿದು ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಗೆ ಅರ್ಜಿ ಸಲ್ಲಿದ್ದೇವೆ. ಎರಡು ವಾರವಾದರೂ ಒಬ್ಬ ಅಧಿಕಾರಿಯೂ ಇತ್ತ ಇಣುಕಿ ನೋಡಿಲ್ಲ. ತೋಟಗಾರಿಕೆ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ ಎಂದು ರೈತರು ಅಸಮಾಧಾನ ಹೊರಹಾಕಿದರು. ಹಂಚಿನಾಳ ಗ್ರಾಮ ಸೇರಿದಂತೆ ಸುತ್ತಲಿನ ಅನೇಕ ಹಳ್ಳಿಗಳಲ್ಲಿನ ಎರೆ ಜಮೀನಿನ ರೈತರು ಈರುಳ್ಳಿ ಬೆಳೆದಿದ್ದು ರೈತರು ಸಮಸ್ಯೆ ಎದುರಿಸುತ್ತಿದ್ದಾರೆ ಎಂಬುದು ಗೊತ್ತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.