ಕೊಪ್ಪಳ: ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್‌ಗೇಟ್ ಕೊಚ್ಚಿ ಹೋಗಿರುವುದರಿಂದ ನದಿಗೆ ನೀರು ಬಿಡಲಾಗಿದ್ದು, ಗಂಗಾವತಿ ತಾಲ್ಲೂಕಿನ ಆನೆಗೊಂದಿ ಗ್ರಾಮದ ಬಳಿ ಇರುವ ಕೃಷ್ಣದೇವರಾಯ ಸಮಾಧಿಯ 64 ಸಾಲಿನ ಕಲ್ಲಿನ ಮಂಟಪ ಮುಳುಗುವ ಹಂತ ತಲುಪಿದೆ.
ಕೆಲವು ದಿನಗಳ ಹಿಂದೆ ಜಲಾಶಯಕ್ಕೆ ವ್ಯಾಪಕ ನೀರು ಹರಿದು ಬಂದು ನದಿಗೆ ನೀರು ಹರಿಸಿದ್ದಾಗ ಇದು ಮುಳುಗಡೆಯಾಗಿತ್ತು. ಕ್ರಸ್ಟ್‌ಗೇಟ್ ಈಗ ಮರಳಿ ಅಳವಡಿಸಬೇಕಾಗಿರುವ ಕಾರಣ ಜಲಾಶಯದ 61 ಟಿಎಂಸಿ ಅಡಿ ನೀರು ಖಾಲಿ ಮಾಡಬೇಕಾಗಿದೆ. ಆದ್ದರಿಂದ ನೀರು ಹರಿಸಲಾಗುತ್ತಿದ್ದು, ಈಗಲೂ ಮಂಟಪ ಮುಳುಗುವ ಸ್ಥಿತಿಗೆ ತಲುಪಿದೆ.
ಸೋಮವಾರ ಬೆಳಿಗ್ಗೆ 6 ಗಂಟೆಯ ಮಾಹಿತಿಯಂತೆ ಜಲಾಶಯದ ಹೊಳಹರಿವು 25,131 ಕ್ಯುಸೆಕ್ ಇದ್ದು, 88,955 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ.
ಸಂಚಾರ ನಿರ್ಬಂಧ ವಿಸ್ತರಣೆ: ಕೊಪ್ಪಳ ಜಿಲ್ಲೆಯ ಗಂಗಾವತಿ ಮತ್ತು ವಿಜಯನಗರ ಜಿಲ್ಲೆಯ ಕಂಪ್ಲಿ ನಡುವೆ ಸಂಪರ್ಕ ಬೆಸೆಯುವ ಕಂಪ್ಲಿ ಸೇತುವೆ ಮೇಲೆ ವಾಹನಗಳ ಹಾಗೂ ಪಾದಚಾರಿಗಳ ಸಂಚಾರ ನಿರ್ಬಂಧ ವಿಸ್ತರಣೆಯಾಗಿದೆ.
ಕಂಪ್ಲಿ ಸೇತುವೆ ಮೇಲೆ ಜಲಾಶಯದ ನೀರು ಹರಿದಿದ್ದರಿಂದ ಜು. 26ರಂದು ವಾಹನಗಳ ಓಡಾಟಕ್ಕೆ ನಿರ್ಬಂಧ ಹೇರಲಾಗಿತ್ತು. ಮೂರು ದಿನಗಳ ಹಿಂದೆಯಷ್ಟೇ ಪಾದಚಾರಿಗಳ ಓಡಾಟಕ್ಕೆ ನೀಡಲಾಗಿದ್ದ ಅನುಮತಿಯನ್ನು ಈಗ ರದ್ದುಪಡಿಸಲಾಗಿದೆ.
ಈ ಸೇತುವೆಯ ಗುಣಮಟ್ಟ ಪರೀಕ್ಷೆ ನಡೆಯುತ್ತಿದ್ದು, ವರದಿ ಬಂದ ಬಳಿಕವಷ್ಟೇ ಸೇತುವೆ ಬಳಕೆಗೆ ಅವಕಾಶ ನೀಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಆದ್ದರಿಂದ ಗಂಗಾವತಿ–ಕಂಪ್ಲಿ ನಡುವೆ ಸಂಚರಿಸುವ ಜನ ಕಡೇಬಾಗಿಲು ಮೂಲಕ ಸುತ್ತಿಕೊಂಡು ಪ್ರಯಾಣಿಸಬೇಕಾಗಿದೆ.
ಗಂಗಾವತಿ ಹಾಗೂ ಕಂಪ್ಲಿ ನಡುವೆ 10 ಕಿ.ಮೀ. ಅಂತರವಿದೆ. ಸೇತುವೆ ಬಳಕೆಗೆ ಈಗ ನಿರ್ಬಂಧ ಹೇರಿರುವ ಕಾರಣ 30 ಕಿ.ಮೀ. ಸುತ್ತಿಕೊಂಡು ಈ ಎರಡು ಊರುಗಳಿಗೆ ಸಂಚರಿಸಬೇಕಾಗಿದೆ. ಇದರಿಂದ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.