ADVERTISEMENT

ಹಿರೇನಂದಿಹಾಳ ಕೆರೆಗಿಲ್ಲ ‘ಕೃಷ್ಣೆ ಜಲ ಭಾಗ್ಯ’

ಕಳಪೆ, ಅವೈಜ್ಞಾನಿಕ ಕಾಮಗಾರಿ, ವಾರದಲ್ಲಿ ಎರಡು ಬಾರಿ ಒಡೆದ ಕೊಳವೆ

ನಾರಾಯಣರಾವ ಕುಲಕರ್ಣಿ
Published 22 ಅಕ್ಟೋಬರ್ 2024, 6:31 IST
Last Updated 22 ಅಕ್ಟೋಬರ್ 2024, 6:31 IST
ಕುಷ್ಟಗಿ ತಾಲ್ಲೂಕು ಹಿರೇನಂದಿಹಾಳ ಕೆರೆ ನೀರಿಲ್ಲದೆ ಭಣಗುಡುತ್ತಿರುವುದು
ಕುಷ್ಟಗಿ ತಾಲ್ಲೂಕು ಹಿರೇನಂದಿಹಾಳ ಕೆರೆ ನೀರಿಲ್ಲದೆ ಭಣಗುಡುತ್ತಿರುವುದು   

ಕುಷ್ಟಗಿ: ಕೃಷ್ಣಾ ನದಿಯಿಂದ ಕೆರೆ ತುಂಬಿಸುವ ಯೋಜನೆಯಲ್ಲಿ ಕೈಗೆತ್ತಿಕೊಳ್ಳಲಾಗಿರುವ ತಾಲ್ಲೂಕಿನ ಹಿರೇನಂದಿಹಾಳ ಗ್ರಾಮದ ಕೆರೆಗೆ ಜಲಭಾಗ್ಯವಿಲ್ಲ. ಯೋಜನೆ ಕಾರ್ಯಗತಗೊಂಡು ವರ್ಷ ಕಳೆದರೂ ಒಂದು ಬಾರಿ ಅರ್ಧದಷ್ಟು ಮಾತ್ರ ನೀರು ಬಂದಿತ್ತು. ರೈತರು ಕೇವಲ ಕೆರೆಯಲ್ಲಿ ಅಳವಡಿಸಿರುವ ಕೊಳವೆಯನ್ನಷ್ಟೇ ನೋಡಿ ಖುಷಿ ಪಡಬೇಕಿದೆ.

ಕೃಷ್ಣಾ ಭಾಗ್ಯ ಜಲ ನಿಗಮ ಕೈಗೊಂಡಿರುವ ಈ ಯೋಜನೆಯ ಕಲಾಲಬಂಡಿ (3ನೇ ಬ್ರ್ಯಾಂಚ್‌) ಜಲಸಂಗ್ರಹಗಾರದಿಂದ ಹಿರೇನಂದಿಹಾಳ ವರೆಗೆ ಕೊಳವೆ ಅಳವಡಿಸಲಾಗಿದೆ. ಆದರೆ ಪದೇ ಪದೇ ಒಡೆಯುತ್ತಿರುವುದೇ ನೀರು ಬಾರದಿರುವುದಕ್ಕೆ ಕಾರಣವಾಗಿದೆ. ಅವೈಜ್ಞಾನಿಕ, ಕಳಪೆ ಕಾಮಗಾರಿಯಿಂದಾಗಿ ನೀರು ಪೂರೈಕೆಗೆ ಅಡ್ಡಿಯಾಗುತ್ತಿದೆ. ಕಳೆದ ಐದಾರು ತಿಂಗಳಲ್ಲಿ ಮೂರು ಬಾರಿ ಕೊಳವೆ ಒಡೆದಿದೆಯೆಂದರೆ ಕಾಮಗಾರಿ ಯಾವ ರೀತಿ ನಡೆದಿದೆ ಎಂಬುದನ್ನು ಬಿಡಿಸಿಹೇಳಬೇಕಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ತಾಲ್ಲೂಕಿನಲ್ಲಿ ಒಟ್ಟು 18 ಕೆರೆಗಳನ್ನು ನೀರು ತುಂಬಿಸುವ ಯೋಜನೆಯಲ್ಲಿ ಕೈಗೆತ್ತಿಕೊಳ್ಳಲಾಗಿದ್ದು, ಅದರಲ್ಲಿ ಹಿರೇನಂದಿಹಾಳ ಕೆರೆಯೂ ಒಂದಾಗಿದೆ. ಕೊಳವೆಬಾವಿಗಳೇ ಈ ಭಾಗ ನೀರಾವರಿಗೆ ಆಸರೆಯಾಗಿದ್ದು, ಅಂತರ್ಜಲ ಮಟ್ಟ ತೀರಾ ಕಡಿಮೆ ಇದ್ದುದರಿಂದ ಬಾವಿಗಳಲ್ಲಿ ನೀರಿನ ಕೊರತೆ ಇದೆ.

ADVERTISEMENT

ಕೆರೆ ತುಂಬಿಸುವ ಯೋಜನೆಯಿಂದ ಮರಳುಗಾಡಿನಲ್ಲಿ ಓಯೆಸಿಸ್‌ ಕಂಡಂತೆ ಗ್ರಾಮದ ಜನರು, ರೈತರಿಗೆ ಬಹಳಷ್ಟು ಖುಷಿ ತಂದಿತ್ತು. ಆದರೆ ನೀರು ಬಿಟ್ಟಾಗಲೆಲ್ಲ ಕೊಳವೆ, ವಾಲ್ವ್‌ಗಳು ಹಾಳಾಗುತ್ತಿರುವುದರಿಂದ ತಮ್ಮೂರಿನ ಕೆರೆಗೆ ನೀರು ಬರುತ್ತದೆಯೊ ಇಲ್ಲವೆ ಎಂಬ ಬಗ್ಗೆ ಗ್ರಾಮಸ್ಥರು ಸ್ಥಳಕ್ಕೆ ಭೇಟಿ ನೀಡಿದ್ದ ಸುದ್ದಿಗಾರರ ಬಳಿ ಅನುಮಾನ ವ್ಯಕ್ತಪಡಿಸಿದರು.

ಕೆಬಿಜೆಎನ್‌ಎಲ್‌ಗೆ ಕೆರೆಗಳಿಗೆ ನೀರು ತುಂಬಿಸುವುದಕ್ಕಿಂತ ಕೇವಲ ದುರಸ್ತಿ ಕೆಲಸ ನಿರ್ವಹಿಸುವುದೇ ಮುಖ್ಯವಾಗಿದೆ. ಗುತ್ತಿಗೆದಾರರ ಮೇಲೆ ಕೆಬಿಜೆಎನ್‌ಎಲ್‌ ಅಧಿಕಾರಿಗಳ ಹಿಡಿತವಿಲ್ಲ. ತಮ್ಮೂರಿನ ಪಕ್ಕದಲ್ಲಿಯೇ ಈ ದುಸ್ಥಿತಿ ಇದ್ದರೂ ಶಾಸಕ ದೊಡ್ಡನಗೌಡ ಇಂಥ ವಿಷಯದ ಬಗ್ಗೆ ಆಸಕ್ತಿ ತೋರುವುದಿಲ್ಲ. ಕೋಟ್ಯಂತರ ಹಣ ಖರ್ಚಾಯಿತೇ ಹೊರತು ಕೆರೆ ತುಂಬಿಸುವ ಯೋಜನೆಯಿಂದ ನಮ್ಮೂರಿನ ಜನಕ್ಕೆ ಪ್ರಯೋಜನವಿಲ್ಲದಂತಾಗಿದೆ ಎಂದು ರೈತರಾದ ಹನುಮಗೌಡ, ಪರಸಪ್ಪ ಇತರರು ಅತೃಪ್ತಿ ಹೊರಹಾಕಿದರು.

ಬಂಡಿಹಳ್ಳದ ಬಳಿಯ ಕೊಳವೆ ದುರಸ್ತಿಗೊಳ್ಳದಿರುವುದು
ದುರುಗನಗೌಡ ಜಕ್ಲಿ
ಬಸವರಾಜ ಮಾವಿನಿಟಗಿ

ದುರಸ್ತಿ ಕೆಲಸ ಬಹುತೇಕ ಪೂರ್ಣಗೊಂಡಿದ್ದು ಮಂಗಳವಾರ ಹಿರೇನಂದಿಹಾಳ ಕೆರೆಗೆ ನೀರು ಬರಲಿದೆ

- ರಮೇಶ್ ಎಇಇ ಕೆಬಿಜೆಎನ್‌ಎಲ್‌

ಅಂತರ್ಜಲ ಹೆಚ್ಚಿ ಬತ್ತಿದ ಕೊಳವೆಬಾವಿಗಳಿಗೆ ಅನುಕೂಲವಾಗುತ್ತದೆ ಎಂದುಕೊಂಡಿದ್ದೇವೆ. ಆದರೆ ಒಂದು ಬಾರಿಯೂ ಕೆರೆ ತುಂಬಿಲ್ಲ

-ದುರುಗನಗೌಡ ಜಕ್ಲಿ ಹಿರೇನಂದಿಹಾಳ ರೈತ

ಈ ಭಾಗದಲ್ಲಿ ಎಲ್ಲಿಯೂ ಹನಿ ನೀರಿನ ಆಸರೆ ಇಲ್ಲದೆ ಕುರಿ ಸಾಕಾಣಿಕೆದಾರರು ಜಾನುವಾರುಗಳಿಗೆ ತೊಂದರೆ ಇದೆ. ಕೆರೆ ತುಂಬಿಸುವುದಕ್ಕೆ ಸಂಬಂಧಿಸಿದವರು ಮುತುವರ್ಜಿವಹಿಸಲಿ

-ಬಸವರಾಜ ಮಾವಿನಿಟಗಿ ಕುರಿಗಾಹಿ ಪರಸಾಪುರ

ಶಾಸಕರಿಗೆ ಸುಳ್ಳು ಹೇಳಿದ ಎಂಜಿನಿಯರ್ಸ್‌ ‘ಎರಡು ವಾರದ ಹಿಂದೆ ನೀರು ಸರಬರಾಜು ಕೊಳವೆ ಎರಡು ಕಡೆ ಒಡೆದಿದ್ದು ಹಗಲು ರಾತ್ರಿ ಎನ್ನದೆ ಅಪಾರ ಪ್ರಮಾಣದ ನೀರು ಪೋಲಾಗಿಹೋಗಿದೆ. ಒಂದನ್ನು ದುರಸ್ತಿಮಾಡುವಷ್ಟರಲ್ಲಿ ಇನ್ನೊಂದುಕಡೆ ಒಡೆದಿರುವುದು ಕಂಡುಬಂದಿದೆ. ಅ.16ರಂದು ಈ ಯೋಜನೆಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನೆ ಮಾತ್ರ ನಡೆಸಿದ ಸಭೆಯಲ್ಲಿ ಭಾಗವಹಿಸಿದ್ದ ಕೆಬಿಜೆಎನ್‌ಎಲ್‌ ಎಂಜಿನಿಯರ್‌ಗಳು ದುರಸ್ತಿ ಕೆಲಸ ನಡೆದಿದ್ದು ಅ.17ಕ್ಕೆ ಕೆರೆಗೆ ನೀರು ಹರಿಯಲಿದೆ’ ಎಂದೆ ಶಾಸಕ ದೊಡ್ಡನಗೌಡ ಪಾಟೀಲ ಅವರಿಗೆ ಮಾಹಿತಿ ನೀಡಿದ್ದರು. ಆದರೆ ಭಾನುವಾರ ಸ್ಥಳಕ್ಕೆ ಭೇಟಿ ನೀಡಿದಾಗ ದುರಸ್ತಿಕೆಲಸ ಸ್ಥಗಿತಗೊಂಡಿರುವುದು. ಕೆರೆಗೆ ನೀರು ಬಾರದಿರುವುದು ಕಂಡುಬಂದಿದ್ದು ಎಂಜಿನಿಯರ್‌ಗಳು ನೀಡಿದ ಮಾಹಿತಿ ಸುಳ್ಳು ಎಂಬುದು ಸ್ಪಷ್ಟವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.