ತಾವರಗೇರಾ: ಸ್ಥಳೀಯ ಕಿತ್ತೂರು ರಾಣಿ ಚೆನ್ನಮ್ಮ ಬಾಲಕಿಯರ ವಸತಿ ಶಾಲೆಯಲ್ಲಿ ಶುಕ್ರವಾರ ನಡೆದ ಪಂಚಾಯಿತಿ ಮಟ್ಟದ ಕ್ರೀಡಾಕೂಟದ ಆವರಣದಲ್ಲಿ ಮಧ್ಯಾಹ್ನ ಮಕ್ಕಳ ಮೇಲೆ ಹೆಜ್ಜೇನು ದಾಳಿ ಮಾಡಿರುವ ಘಟನೆ ನಡೆದಿದೆ.
ಶಾಲೆ ಆವರಣದಲ್ಲಿ ಪಂಚಾಯಿತಿ ಮಟ್ಟದ ಎಲ್ಲಾ ಶಾಲೆಗಳ ವಿವಿಧ ಸ್ಪರ್ಧೆಗಳು ನಡೆದಿದ್ದವು. ಮಧ್ಯಾಹ್ನ 3 ಗಂಟೆ ಸಮಯಕ್ಕೆ ಆವರಣದ ಒಳಗೆ ಬೇವಿನಮರದಲ್ಲಿ ಇದ್ದ ಹೆಜ್ಜೇನು ದಿಢೀರ್ ದಾಳಿ ಮಾಡಿವೆ. ಸ್ಥಳದಲ್ಲಿದ್ದ 40ಕ್ಕೂ ಹೆಚ್ಚು ಮಕ್ಕಳು, ಪ್ರೇಕ್ಷಕರ ಮೇಲೆ ದಾಳಿ ಮಾಡಿದ ಕಾರಣ, 7 ರಿಂದ 8 ಮಕ್ಕಳು ಅಸ್ವಸ್ಥಗೊಂಡಿದ್ದಾರೆ. ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಈ ಕುರಿತು ಸಮುದಾಯ ಆರೋಗ್ಯ ಕೇಂದ್ರದ ವೈದ್ಯ ಡಾ.ಸಂತೋಷಕುಮಾರ ಮಾತನಾಡಿ, ‘ಸದ್ಯ 7 ರಿಂದ 8 ಮಕ್ಕಳು ಗಾಯಗೊಂಡಿದ್ದು, ಕರ್ನಾಟಕ ಪಬ್ಲಿಕ್ ಶಾಲೆಯ 6ನೇ ತರಗತಿ ವಿದ್ಯಾರ್ಥಿಗಳಾದ ಅಮರೇಶ ಮತ್ತು ಪ್ರಶಾಂತ ವಿಠಲಾಪೂರ, ಕರಿಸಿದ್ದೇಶ್ವರ ಶಾಲೆಯ ಅಕ್ಷಯ, ಎಸ್ ಎಸ್ ವಿ ಶಾಲೆಯ ಮಂಜುನಾಥ ಇನ್ನುಳಿದ ವಿದ್ಯಾರ್ಥಿಗಳು, ಜೆಸ್ಕಾಂ ಸಿಬ್ಬಂದಿ ನವೀನ್ ಎಂಬುವವರಿಗೆ ಸಹ ಪ್ರಥಮ ಚಿಕಿತ್ಸೆ, ತಪಾಸಣೆ ಮಾಡಲಾಗಿದೆ. ಸದ್ಯ ಆತಂಕ ಪಡುವ ಅಗತ್ಯವಿಲ್ಲ’ ಎಂದರು.
ಶಾಲೆ ಆವರಣದಲ್ಲಿ ಪಂಚಾಯಿತಿ ಮಟ್ಟದ ಕ್ರೀಡಾಕೂಟದಲ್ಲಿ ನಡೆದ ಹೆಜ್ಜೇನು ದಾಳಿಗೆ ಶಾಲೆಯ ಪ್ರಾಚಾರ್ಯ ನಾಗರಾಜ ಸಂಗನಾಳ ನಿರ್ಲಕ್ಷ್ಯ ಕಾರಣ ಎಂದು ಪೋಷಕರಾದ ಮಹಮ್ಮದ್ ರಫಿ ಆರೋಪಿಸಿದರು.
‘ವಸತಿ ನಿಲಯದ ಆವರಣದಲ್ಲಿ ಕ್ರೀಡಾಕೂಟ ನಡೆಸಲು ತೀರ್ಮಾನಿಸಿದಾಗ ಸ್ಥಳಿಯ ಪ್ರಾಚಾರ್ಯರು ಸುರಕ್ಷಿತ ದೃಷ್ಟಿಯಿಂದ ಪರಿಶೀಲನೆ ಮಾಡಬೇಕು. ಯಶಸ್ವಿಗೆ ವಿವಿಧ ಸಮಿತಿಗಳ ನೇಮಕ ಮಾಡಿ ಜವಾಬ್ದಾರಿ ನೀಡಬೇಕಿತ್ತು. ಕ್ರೀಡಾಪಟುಗಳ ಆರೋಗ್ಯ ಮತ್ತು ರಕ್ಷಣೆ ದೃಷ್ಟಿಯಿಂದ ಈ ಎಲ್ಲಾ ಕೆಲಸಗಳನ್ನು ಮರೆತಿರುವುದು ಪ್ರಾಚಾರ್ಯರ ನಿರ್ಲಕ್ಷ್ಯತನ’ ಎಂದು ವಿದ್ಯಾರ್ಥಿಗಳ ಪೋಷಕರು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.