ಕುಷ್ಟಗಿ: ರೋಗಿಗಳಿಗೆ ಸಕಾಲದಲ್ಲಿ ಹಣ್ಣು ಮತ್ತು ಹಣ್ಣಿನ ರಸ ದೊರೆಯಲಿ ಎಂಬ ಉದ್ದೇಶದಿಂದ ಇಲ್ಲಿಯ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ನಿರ್ಮಿಸಿರುವ ತೋಟಗಾರಿಕೆ ಬೆಳೆಗಾರರ ಉತ್ಪನ್ನಗಳ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘದ (ಹಾಪ್‌ಕಾಮ್ಸ್) ಮಳಿಗೆ ಗೋದಾಮಿನಂತಾಗಿದ್ದು ವರ್ಷದ ಹಿಂದೆಯೇ ಮುಚ್ಚಿದ ಬಾಗಿಲು ತೆಗೆದಿಲ್ಲ.
ಹಣ್ಣು, ಜ್ಯೂಸ್ ಬಳಕೆಯಲ್ಲಿ ಜನರನ್ನು ಉತ್ತೇಜಿಸುವುದು, ರೈತರು ಬೆಳೆದ ಹಣ್ಣಿನ ಉತ್ಪನ್ನಗಳಿಗೆ ಉತ್ತಮ ಬೆಲೆ ಒದಗಿಸಿಕೊಡುವ ಮಹತ್ವದ ಉದ್ದೇಶದಿಂದ ಜಿಲ್ಲೆಯಲ್ಲಿ ಆರಂಭಿಸಿರುವ ಹಾಪ್‌ಕಾಮ್ಸ್ ಮಳಿಗೆಗಳ ಪೈಕಿ ಇಲ್ಲಿಯ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿರುವುದೂ ಒಂದಾಗಿದೆ. ಸಂಸ್ಥೆಯಿಂದಲೇ ಸ್ವತಃ ಕಟ್ಟಡ ನಿರ್ಮಿಸಿ ಖಾಸಗಿ ಮಾರಾಟ ಪ್ರತಿನಿಧಿಗಳಿಗೆ ನಿಗದಿತ ಕನಿಷ್ಟ ಬಾಡಿಗೆ ಮಳಿಗೆಗಳನ್ನು ನೀಡಲಾಗುತ್ತಿದೆ.
ನೂರು ಆಸ್ಪತ್ರೆ ಸಾಮರ್ಥ್ಯದ ಇಲ್ಲಿಯ ಸರ್ಕಾರಿ ಆಸ್ಪತ್ರೆಗೆ ನಿತ್ಯ ನೂರಾರು ರೋಗಿಗಳು, ಸಾರ್ವಜನಿಕರು ಬರ ಹೋಗುತ್ತಿರುವುದರಿಂದ ರೋಗಿಗಳಿಗೆ ಹಣ್ಣು, ರಸ ದೊರೆಯಲಿ ಎಂಬ ಕಾರಣಕ್ಕೆ ಆರೋಗ್ಯ ಇಲಾಖೆ ಆಸ್ಪತ್ರೆ ಆವರಣದಲ್ಲಿ ಉಚಿತವಾಗಿ ನೀಡಿದ ನಿವೇಶನದಲ್ಲಿ ಹಾಪ್‌ಕಾಪ್ ಸಂಸ್ಥೆಯು ಕೆಲ ವರ್ಷಗಳ ಹಿಂದೆ ₹ 5 ಲಕ್ಷ ವೆಚ್ಚದಲ್ಲಿ ಮಳಿಗೆ ನಿರ್ಮಿಸಿತ್ತು. ವ್ಯಾಪಾರ ಕಡಿಮೆಯಾಗಿದೆ ಎಂಬ ಕಾರಣಕ್ಕೆ ಇನ್ನೊಂದು ಬದಿಯಲ್ಲಿ ₹ 2 ಲಕ್ಷ ವೆಚ್ಚದಲ್ಲಿ ಶೆಟರ್ಸ್ ಅಳವಡಿಸಲಾಗಿತ್ತು. ಈಗ ಮುಖ್ಯರಸ್ತೆಗೆ ಎದುರಾಗಿ ಮುಖ್ಯ ಬಾಗಿಲು ಅಳವಡಿಸಲು ಸಂಸ್ಥೆ ನಿರ್ಧರಿಸಿದೆ.
ಪಟ್ಟಣದ ರಾಜೇಸಾಬ್ ಗೈಬಣ್ಣವರ ಎಂಬ ಹಣ್ಣಿನ ವ್ಯಾಪಾರಿ ಹಾಪ್‌ಕಾಮ್ಸ್ ಒಪ್ಪದಂತೆ ಮಳಿಗೆ ಬಾಡಿಗೆ ಪಡೆದಿದ್ದರು. ಆದರೆ ವ್ಯಾಪಾರ ನಡೆಯದ ಕಾರಣ ಬಾಡಿಗೆ, ವಿದ್ಯುತ್ ಶುಲ್ಕದ ಹೊರೆ ಹೆಚ್ಚಾಗಿದ್ದರಿಂದ ಮಳಿಗೆಗೆ ಬೀಗ ಹಾಕಿದ್ದು ರೋಗಿಗಳಿಗೆ ಹಣ್ಣಿನ ರಸ ಮತ್ತು ಹಣ್ಣು ತರುವುದಕ್ಕೆ ಜನರು ದೂರದ ಸ್ಥಳಕ್ಕೆ ಹೋಗುವಂತಾಗಿದೆ. ಮಳಿಗೆಯನ್ನು ಪುನರಾರಂಭಿಸಲು ಹಾಪ್‌ಕಾಮ್ಸ್ ಅಗತ್ಯ ಕ್ರಮಕ್ಕೆ ಮುಂದಾಗಬೇಕಿದೆ ಎಂದು ಸಯ್ಯದ್ ಬಾವುದ್ದೀನ್, ಪರಶುರಾಮ ಇತರರು ಹೇಳಿದರು.
ಈ ಕುರಿತು ವಿವರಿಸಿದ ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿ ಸಯ್ಯದ್ ರಹೀಂ, ಜಾಗ ಮಾತ್ರ ಆಸ್ಪತ್ರೆಯದು, ಮಳಿಗೆ ನಿರ್ಮಾಣ, ನಿರ್ವಹಣೆ ಹಾಪ್‌ಕಾಮ್ಸ್‌ಗೆ ಸೇರಿದೆ. ರೋಗಿಗಳ ಹಿತದೃಷ್ಟಿಯಿಂದ ಹಣ್ಣು, ಜ್ಯೂಸ್ ಮಾರಾಟ ವ್ಯವಸ್ಥೆ ಅಗತ್ಯವಾಗಿದ್ದು ಈ ಬಗ್ಗೆ ಹಾಪ್‌ಕಾಮ್ಸ್ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆಯುವುದಾಗಿ ತಿಳಿಸಿದರು.
ಲಾಭದಲ್ಲಿ ಕೊಪ್ಪಳ ಹಾಪ್‌ಕಾಮ್ಸ್: ಅಧ್ಯಕ್ಷ
ಜಿಲ್ಲೆಯಲ್ಲಿ ಹಾಪ್‌ಕಾಮ್ಸ್ ಮೂಲಕ ರೈತರ ಹಣ್ಣು ಮತ್ತು ತರಕಾರಿ ಉತ್ಪನ್ನಗಳ ಮಾರಾಟ ಪ್ರಗತಿಪಥದಲ್ಲಿ ಮುನ್ನಡೆಯುತ್ತಿದ್ದು ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಕೊಪ್ಪಳ ಜಿಲ್ಲೆ ಮುಂದಿದೆ ಎಂದು ಜಿಲ್ಲಾ ಹಾಪ್‌ಕಾಮ್ಸ್ ಅಧ್ಯಕ್ಷ ಯಂಕಣ್ಣ ಯರಾಶಿ ‘ಪ್ರಜಾವಾಣಿ’ಗೆ ತಿಳಿಸಿದರು. ಜಿಲ್ಲೆಯಲ್ಲಿರುವ 16 ಮಳಿಗೆಗಳ ಮೂಲಕ ಮಾಸಿಕ ₹ 1 ಲಕ್ಷ ಲಾಭ ದೊರೆಯುತ್ತದೆ. ಲಾಭ ಮಾಡುವುದಷ್ಟೇ ಸಂಸ್ಥೆಯ ಉದ್ದೇಶವಲ್ಲ ರೈತರಿಗೂ ನೇರವಾಗಬೇಕು ಜೊತೆಗೆ ಸಾರ್ವಜನಿಕರಲ್ಲಿ ಹಣ್ಣು ರಸ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳುವ ಉದ್ದೇಶ ಮುಖ್ಯವಾಗಿದೆ. ವಿವಿಧ ತಾಲ್ಲೂಕುಗಳ ತಹಶೀಲ್ದಾರ್ ಕಚೇರಿ ಪುರಸಭೆ ಆವರಣ ಸೇರಿದಂತೆ ಜನಸಂದಣಿ ಸ್ಥಳಗಳಲ್ಲಿಯೂ ಹಾಪ್‌ಕಾಮ್ಸ್ ಮಳಿಗೆ ಆರಂಭಿಸುವ ನಿಟ್ಟಿನಲ್ಲಿ ಉತ್ಸುಕರಾಗಿರುವ ಜಿಲ್ಲಾಧಿಕಾರಿ ನಲಿನ್ ಅತುಲ್ ಅವರಿಂದ ಸಲಹೆ ಬಂದಿದೆ ಎಂದು ಯರಾಶಿ ವಿವರಿಸಿದರು.
ಆಸ್ಪತ್ರೆಯಲ್ಲಿನ ಹಾಪ್‌ಕಾಮ್ಸ್ ಮಳಿಗೆ ಪುನರಾಂಭಕ್ಕೆ ಶೀಘ್ರ ಕ್ರಮ ಕೈಗೊಳ್ಳಲಾಗುತ್ತದೆ.ಯಂಕಣ್ಣ ಯರಾಶಿ, ಜಿಲ್ಲಾ ಹಾಪ್‌ಕಾಮ್ಸ್ ಅಧ್ಯಕ್ಷ
ಮಾರಾಟ ಮಳಿಗೆಯ ರಸ್ತೆಗೆ ಹೊಂದಿಕೊಂಡು ಇನ್ನೊಂದು ಬಾಗಿಲನ್ನು ಅಳವಡಿಸಲು ಆರೋಗ್ಯ ಇಲಾಖೆ ಈಗಷ್ಟೇ ಅನುಮತಿ ನೀಡಿದ್ದು ನಿರ್ಮಾಣ ಕೆಲಸ ಶೀಘ್ರದಲ್ಲಿ ನಡೆಯಲಿದೆ.ಓಬಣ್ಣ ಪ್ರಭಾರ, ಎಂ.ಡಿ, ಜಿಲ್ಲಾ ಹಾಪ್‌ಕಾಮ್ಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.