ADVERTISEMENT

ಗೌರಿ ಹುಣ್ಣಿಮೆ: ಹುಲಿಗೆಮ್ಮ ದೇವಿ ದೇವಸ್ಥಾನಕ್ಕೆ ಭಕ್ತರ ದಂಡು

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2024, 7:50 IST
Last Updated 15 ನವೆಂಬರ್ 2024, 7:50 IST
   

ಕೊಪ್ಪಳ: ಗೌರಿ ಹುಣ್ಣಿಮೆ ಅಂಗವಾಗಿ ತಾಲ್ಲೂಕಿನ ಹುಲಿಗಿಯಲ್ಲಿರುವ ಹುಲಿಗೆಮ್ಮ ದೇವಿ ದೇವಸ್ಥಾನಕ್ಕೆ ಶುಕ್ರವಾರ ಲಕ್ಷಾಂತರ ಭಕ್ತರು ಭೇಟಿ ನೀಡಿ ದೇವಿಯ ದರ್ಶನ ಪಡೆದರು.

ಶಕ್ತಿ ದೇವತೆ ಎಂದೇ ಹೆಸರಾದ ಹುಲಿಗೆಮ್ಮ ದೇವಿ ದರ್ಶನಕ್ಕೆ ಪ್ರತಿ ಮಂಗಳವಾರ ಹಾಗೂ ಶುಕ್ರವಾರ ಲಕ್ಷಾಂತರ ಭಕ್ತರು ಬರುವುದು ಸಾಮಾನ್ಯ. ಹುಣ್ಣಿಮೆ ದಿನವಾಗಿದ್ದರಿಂದ ರಾಜ್ಯದ ಬೇರೆ ಬೇರೆ ಜಿಲ್ಲೆಗಳು, ನೆರೆಯ ಆಂಧ್ರ ಹಾಗೂ ಮಹಾರಾಷ್ಟ್ರದಿಂದ ಮಹಿಳಾ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ಬೆಳಗಿನ ಜಾವದಿಂದಲೇ ದೇವಿ ದರ್ಶನಕ್ಕೆ ಉದ್ದನೆಯ ಸರತಿ ಸಾಲು ಇತ್ತು.

ಈ ಬಾರಿ ಶುಕ್ರವಾರ ಹಾಗೂ ಹುಣ್ಣಿಮೆ ಎರಡೂ ಒಂದೇ ದಿನ ಬಂದಿದ್ದರಿಂದ ಪ್ರತಿ ವಾರಕ್ಕಿಂತಲೂ ಈ ಸಲ ಜನಸಂದಣಿ ಹೆಚ್ಚಿತ್ತು. ದೇವಸ್ಥಾನದ ಪ್ರವೇಶ ದ್ವಾರದ ಹೊರಗಿನಿಂದಲೇ ಭಕ್ತರು ಸರತಿಯಲ್ಲಿ ನಿಂತಿದ್ದರು. ಬಿಸಿಲು ಇರುವ ಕಾರಣ ಮೇಲೆ ಟೆಂಟ್‌ ಹಾಕಿ ನೆರಳಿನ ವ್ಯವಸ್ಥೆ ಮಾಡಲಾಗಿತ್ತು.

ADVERTISEMENT

ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆ ಜಾರಿಗೆ ಬಂದ ಬಳಿಕವಂತೂ ರಾಜ್ಯದ ಭಕ್ತರ ಸಂಖ್ಯೆ ದುಪ್ಪಟ್ಟಾಗಿದೆ. ಶುಕ್ರವಾರ ಬೆಳಗಿನ ಜಾವಕ್ಕಾಗಲೇ ದೇವಿಯ ಮೂರ್ತಿಯ ತರಹೇವಾರಿ ಹೂಗಳಿಂದ ಅಲಂಕಾರ ಮಾಡಲಾಗಿತ್ತು. ಗರ್ಭಗುಡಿ ಹಾಗೂ ಮುಂಭಾಗದ ಪೂರ್ಣ ಹೂಗಳಿಂದ ತೋರಣ ಕಟ್ಟಲಾಗಿತ್ತು.

ದೇವಸ್ಥಾನದ ಅಂಚಿನಲ್ಲಿರುವ ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡಿ ಬೆಳಿಗ್ಗೆಯೇ ದರ್ಶನ ಪಡೆಯಲು ಜನ ಸರತಿಯಲ್ಲಿ ನಿಂತಿದ್ದರು. ಈ ಎಲ್ಲ ಧಾರ್ಮಿಕ ಪ್ರಕ್ರಿಯೆ ಬೇಗನೆ ಮುಗಿಸಲು ಬಹಳಷ್ಟು ಭಕ್ತರು ಗುರುವಾರ ಸಂಜೆಯೇ ಹುಲಿಗಿಗೆ ಬಂದು ಭಕ್ತರು ವಾಸ್ತವ್ಯ ಹೂಡಿದ್ದರು. ಅನೇಕರು ದೇವಸ್ಥಾನದ ಸುತ್ತಲಿನ ಜಾಗದಲ್ಲಿ ಹೋಳಿಗೆ ಮಾಡಿ ಸವಿದರು. ಅವರಿಗೆಲ್ಲ ದೇವಸ್ಥಾನದ ವತಿಯಿಂದಲೇ ಟ್ಯಾಂಕರ್‌ನಿಂದಲೇ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.