ಕೊಪ್ಪಳ: ವೈದ್ಯಾಧಿಕಾರಿಗಳು, ಸಿಬ್ಬಂದಿ ನೇಮಕಾತಿ ಹಾಗೂ ಸಾಮಗ್ರಿ ಖರೀದಿ ಸೇರಿದಂತೆ ಯಾವುದೇ ವಿಷಯದಲ್ಲಿ ಅವ್ಯವಹಾರಕ್ಕೆ ಅವಕಾಶವಿಲ್ಲದ ಹಾಗೆ ಆಡಳಿತ ನಡೆಸುವ ಮೂಲಕ ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯು ಮಾದರಿಯಾಗಬೇಕು. ಕಿಮ್ಸ್ ಹೆಸರಿಗೆ ಮಸಿ ಬಳಿದರೆ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಶರಣಪ್ರಕಾಶ ಪಾಟೀಲ ಅವರು ಹೇಳಿದರು.
ಕೊಪ್ಪಳ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಭಾಂಗಣದಲ್ಲಿ ಶುಕ್ರವಾರ ಕಿಮ್ಸ್ ಸಂಸ್ಥೆಯ ನಿರ್ದೇಶಕರು, ವಿವಿಧ ವಿಭಾಗಗಳ ಮುಖ್ಯಸ್ಥರು, ವಿವಿಧ ಪ್ರಾಧ್ಯಾಪಕರೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.
ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಚಾಲ್ತಿಯಲ್ಲಿರುವ ಕಾಮಗಾರಿಗಳು ಗುಣಮಟ್ಟದ ರೀತಿಯಲ್ಲಿ ನಡೆಯಬೇಕು. ಗುಣಮಟ್ಟದ ವಿಷಯದಲ್ಲಿ ಯಾವುದೇ ರಾಜಿ ಇಲ್ಲ. ಕಳಪೆ ಕಾಮಗಾರಿಯಾಗಿದ್ದರೆ ಗುತ್ತಿಗೆದಾರರಿಗೆ ನೊಟೀಸ್ ಜಾರಿ ಮಾಡಿ. ಸಂಸ್ಥೆಯ ಸುಪರ್ದಿಗೆ ಪಡೆಯುವ ಮೊದಲು ಕಟ್ಟಡದ ಕಾಮಗಾರಿಯ ಗುಣಮಟ್ಟದ ಬಗ್ಗೆ ಪರಿಶೀಲಿಸಿ ಎಂದು ಸಚಿವರು ತಿಳಿಸಿದರು.
ಜಿಲ್ಲೆಯು ಬಯಲುಸೀಮೆಯ ನೆಲವಾಗಿದೆ. ಇಲ್ಲಿನ ಜನರ ಸಾಮಾಜಿಕ ಆರ್ಥಿಕ ಪರಿಸ್ಥಿತಿ ಇನ್ನು ಸುಧಾರಿಸಬೇಕಿದೆ. ಮುಖ್ಯವಾಗಿ ಇಲ್ಲಿನ ಜನತೆಗೆ ಉತ್ತಮವಾದ ಆರೋಗ್ಯ ಸೌಕರ್ಯ ದೊರೆಯಬೇಕಿದೆ. ಕೊಪ್ಪಳ ವೈದ್ಯಕೀಯ ಶಿಕ್ಷಣ ಸಂಸ್ಥೆಯ ಬಗ್ಗೆ ಸಾಕಷ್ಟು ಭರವಸೆ ಇದೆ. ಇದನ್ನು ಅರ್ಥೈಸಿಕೊಳ್ಳಬೇಕು. ಅವ್ಯವಹಾರ ನಡೆಸಿ ಯಾರಾದರೂ ಸಂಸ್ಥೆಯ ಹೆಸರಿಗೆ ಮಸಿ ಬಳಿದರೆ ಯಾರೇ ಇರಲಿ ಅಂತವರ ವಿರುದ್ಧ ಮುಲಾಜಿಲ್ಲದೇ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಂಸ್ಥೆಯಲ್ಲಿ ಈಗಾಗಲೇ ರಚನೆಯಾಗಿರುವ ಎಲ್ಲ ಸಮಿತಿಗಳು ಸರಿಯಾಗಿ ಕಾರ್ಯನಿರ್ವಹಿಸಬೇಕು. ಕಾಲೇಜುಗಳಲ್ಲಿ ಪಿಡುಗಿಗಾಗಿ ಪರಿಣಮಿಸಿದ ರಾಗಿಂಗ್ ಗೆ ಅವಕಾಶ ನೀಡದೆ ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿ ಒತ್ತಡ ಮುಕ್ತ ವಾತಾವರಣ ಇರುವ ಹಾಗೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಬದಲಾದ ಕಾಲಘಟ್ಟದಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಸಾಕಷ್ಟು ಮಹತ್ವ ಬರುತ್ತಿದೆ. ಬಹಳಷ್ಟು ನಿರೀಕ್ಷೆಯೊಂದಿಗೆ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ತೆಗೆದುಕೊಳ್ಳುವ ವಿದ್ಯಾರ್ಥಿಗಳ ಮನೋಭಾವನೆ ಅರಿತು ಅವರಿಗೆ ಗುಣಮಟ್ಟದ ರೀತಿಯ ಬೋಧನಾ ವ್ಯವಸ್ಥೆ ಕಲ್ಪಿಸಬೇಕು ಎಂದು ಸಚಿವರು ಎಲ್ಲ ವಿಭಾಗಗಳ ಮುಖ್ಯಸ್ಥರು ಮತ್ತು ಪ್ರಾಧ್ಯಾಪಕರು, ಸಹಾಯಕ ಪ್ರಾಧ್ಯಾಪಕರಿಗೆ ಸಲಹೆ ಮಾಡಿದರು.
ಸಂಸ್ಥೆಯ ಕಟ್ಟಡ ನಿರ್ಮಾಣ, ಸದ್ಯದ ಪರಿಸ್ಥಿತಿ, ಈ ಹಿಂದೆ ಕರೆದ ಟೆಂಡರ್ ಗಳ ಸ್ಥಿತಿಗತಿ ಸೇರಿದಂತೆ ನಾನಾ ವಿಷಯಗಳ ಬಗ್ಗೆ ಸಚಿವರು ಚರ್ಚಿಸಿದರು.
ಕೊಪ್ಪಳ ವೈದ್ಯಕೀಯ ಶಿಕ್ಷಣ ಸಂಸ್ಥೆಗೆ ಒಟ್ಟು 81 ಹುದ್ದೆಗಳು ಮಂಜೂರಾಗಿವೆ. ಈ ಪೈಕಿ ಈಗಾಗಲೇ 49 ಹುದ್ದೆಗಳು ಭರ್ತಿಯಾಗಿವೆ. 32 ಹುದ್ದೆಗಳು ಖಾಲಿ ಇವೆ ಎಂದು ಸಂಸ್ಥೆಯ ನಿರ್ದೇಶಕರಾದ ವಿಜಯನಾಥ್ ಇಟಗಿ ಮಾಹಿತಿ ನೀಡಿದರು.
ಸಭೆಯಲ್ಲಿ ಸಂಸದ ರಾಜಶೇಖರ ಹಿಟ್ನಾಳ, ಶಾಸಕ ಕೆ.ರಾಘವೇಂದ್ರ ಹಿಟ್ನಾಳ, ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ, ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕಿ ಸುಜಾತಾ ರಾಠೋಡ, ಜಿಲ್ಲಾಧಿಕಾರಿ ನಲಿನ್ ಅತುಲ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.