ಕುಷ್ಟಗಿ: ಪಟ್ಟಣದ ಶಾಖಾಪುರ ರಸ್ತೆಯಲ್ಲಿ ಅಭಿವೃದ್ಧಿ ಕಾಣದ ನಿರ್ಮಾಣ ಹಂತದಲ್ಲಿರುವ ದ್ಯಾಮಣ್ಣ ಕಟ್ಟಿಹೊಲ ಎಂಬುವವರ ವಸತಿ ವಿನ್ಯಾಸದ ಎಲ್ಲ ನಿವೇಶನಗಳ ದಾಖಲೆಗಳ ಬಿಡುಗಡೆಗೆ ಪುರಸಭೆ ಮುಖ್ಯಾಧಿಕಾರಿ ಆದೇಶ ನೀಡಿದ ಮತ್ತು ಉದ್ಯಾನಕ್ಕೆ ಮೀಸಲಿರಿಸಿದ ಸರ್ಕಾರಿ ಜಾಗದಲ್ಲಿ ಬೃಹತ್ ಗುಂಡಿ ತೋಡಿದ ಪ್ರಕರಣದ ಬಗ್ಗೆ ಜಿಲ್ಲಾಡಳಿತ ತನಿಖೆಗೆ ಮುಂದಾಗದಿರುವುದು ಕಂಡುಬಂದಿದೆ.
ವಸತಿ ಉದ್ದೇಶಕ್ಕಾಗಿ ಭೂ ಪರಿವರ್ತನೆ (ಕೃಷಿಯೇತರ) ಮಾಡಿಸಿಕೊಂಡ ನಂತರ ನಗರಾಭಿವೃದ್ಧಿ ಇಲಾಖೆ ನಿಯಮಗಳ ಪ್ರಕಾರ ಆರಂಭಿಕ ಹಂತದಲ್ಲಿ ನಿವೇಶನ ಮಾಲೀಕರಿಗೆ ಶೇ 44 ರಷ್ಟು ನಿವೇಶನಗಳ ಮಾರಾಟಕ್ಕೆ ಮಾತ್ರ ಸ್ಥಳೀಯ ಸಂಸ್ಥೆಗಳು ಅನುಮತಿ ನೀಡಬೇಕು. ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸಿದ ನಂತರವಷ್ಟೇ ಉಳಿದ ಶೇಕಡ 56ರಷ್ಟು ನಿವೇಶನಗಳ ಆನ್‌ಲೈನ್ ದಾಖಲೆ (ಫಾರ್ಮ್ ನಂ.3)ನ್ನು ಪುರಸಭೆ ಆದೇಶ ನೀಡುವುದು ನಿಯಮ. ಆದರೆ ನಿಯಮ ಪಾಲನೆ ಮಾಡದ ವಿನ್ಯಾಸ ಮಾಲೀಕರಿಗೆ ಪುರಸಭೆ ಮುಖ್ಯಾಧಿಕಾರಿ ಶೇಕಡ 100 ರಷ್ಟು ನಿವೇಶನಗಳ ಆನ್‌ಲೈನ್ ದಾಖಲೆಗಳ ಬಿಡುಗಡೆಗೆ ಆದೇಶ ನೀಡಿದ ಮುಖ್ಯಾಧಿಕಾರಿ ಧರಣೇಂದ್ರಕುಮಾರ ಅಕ್ರಮ ಎಸಗಿದ್ದಾರೆ ಎನ್ನುವ ಆರೋಪವಿದೆ.
ಅದೇ ರೀತಿ ನಗರಾಭಿವೃದ್ಧಿ ಪ್ರಾಧಿಕಾರ ಅನುಮೋದಿಸಿದ ನಕ್ಷೆಯಲ್ಲಿ ಗುರುತಿಸಿರುವಂತೆ ಉದ್ಯಾನಕ್ಕೆ ಮೀಸಲಿರಿಸಿದ ಉದ್ಯಾನ ಜಾಗದಲ್ಲಿಯೇ ಬಹಳಷ್ಟು ಆಳದ ಗುಂಡಿ ತೋಡಿದ ವಿನ್ಯಾಸದ ಮಾಲೀಕರು ಗರಸುಮಣ್ಣು ಗಣಿಗಾರಿಕೆ ನಡೆಸಿದ್ದಾರೆ. ಜಾಗಕ್ಕೆ ಬಂದು ಅಧಿಕಾರಿಗಳು ಪರಿಶೀಲಿಸಿದ್ದರೂ ಯಾವುದೇ ಕ್ರಮವಾಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.